ADVERTISEMENT

ಜಿ.ಪಂ.ನಿಂದ ನರೇಗಾ ದಿನಾಚರಣೆ: ಆರೋಗ್ಯಕ್ಕೆ ಆದ್ಯತೆ: ಕೂಲಿ ಕಾರ್ಮಿಕರಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2022, 14:38 IST
Last Updated 2 ಫೆಬ್ರುವರಿ 2022, 14:38 IST
   

ಬೆಳಗಾವಿ: ‘ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೂಲಿ ಕಾರ್ಮಿಕರು ಆರೋಗ್ಯ ಕಾ‍ಪಾಡಿಕೊಳ್ಳಲು ಆದ್ಯತೆ ಕೊಡಬೇಕು’ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಎಚ್‌.ವಿ. ದರ್ಶನ್‌ ತಿಳಿಸಿದರು.

ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಹಾಗೂ ಕರ್ನಾಟಕ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ತಾಲ್ಲೂಕಿನ ರಾಣಿ ಚನ್ನಮ್ಮ ಮೃಗಾಲಯದಲ್ಲಿ ಬುಧವಾರ ಆಯೋಜಿಸಿದ್ದ ‘ನರೇಗಾ ದಿನಾಚರಣೆ’ ಮತ್ತು ‘ನರೇಗೋತ್ಸವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೂಲಿ ಕಾರ್ಮಿಕರು ಆರೋಗ್ಯವಾಗಿದ್ದರೆ ನರೇಗಾ ಯೋಜನೆಯಲ್ಲಿ ಅತಿ ಹೆಚ್ಚಿನ ಮಾನವ ದಿನಗಳ ಸೃಜನೆಯ ಗುರಿ ತಲುಪಲು ಸಾಧ್ಯವಾಗುತ್ತದೆ. ಕಾರ್ಮಿಕರಿಗೆ ಕೂಲಿಯನ್ನು ಇನ್ನೂ ಹೆಚ್ಚಿಸಬೇಕು ಎನ್ನುವ ಬೇಡಿಕೆ ಇದೆ. ಅದನ್ನು ಸರ್ಕಾರದ ಗಮನಕ್ಕೆ ತರಲಾಗಿದೆ’ ಎಂದು ಹೇಳಿದರು.

ADVERTISEMENT

‘ರಾಣಿ ಚನ್ನಮ್ಮ ಮೃಗಾಲಯದ ಅಭಿವೃದ್ಧಿಯಲ್ಲಿ ಹೊಸವಂಟಮೂರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ನರೇಗಾ ಕೂಲಿ ಕಾರ್ಮಿಕರು ಶ್ರಮ ಅತಿ ಹೆಚ್ಚಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನರೇಗಾ ದಿನಾಚರಣೆ ಪ್ರಯುಕ್ತ ಕಾರ್ಮಿಕರಿಗೆ ಉದ್ಯೋಗ ಚೀಟಿ ನವೀಕರಣ, ಹೊಸ ಉದ್ಯೋಗ ಚೀಟಿ ವಿತರಣೆ, ಕೂಲಿ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು. ಸಸಿಗಳನ್ನು ನೆಡಲಾಯಿತು ಹಾಗೂ ಕೂಲಿ ಕಾರ್ಮಿಕರಿಗೆ ಸಿಹಿ ಹಂಚಲಾಯಿತು.

ತಾಲ್ಲೂಕು ಪಂಚಾಯ್ತಿ ಇಒ ರಾಜೇಶ ದಾನವಾಡಕರ, ಸಹಾಯಕ ನಿರ್ದೇಶಕ (ಗ್ರಾ.ಉ.) ರಾಜೇಂದ್ರ ಮೊರಬದ , ಜಿಲ್ಲಾ ಕಾರ್ಯಕ್ರಮ ಸಂಯೋಜಕ ಬಸವರಾಜ ಎನ್., ಎಂ.ಐ.ಎಸ್. ಸಂಯೋಜಕ ಶೀತಲ ಪಾಟೀಲ,ತಾಂತ್ರಿಕ ಸಂಯೋಜಕ ನಾಗರಾಜ ಯರಗುದ್ದಿ, ಐಇಸಿ ಸಂಯೋಜಕ ರಮೇಶ ಮಾದರ, ತಾಂತ್ರಿಕ ಸಿಬ್ಬಂದಿ, ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿಗಳು, ಸದಸ್ಯರು, ಮತ್ತು ಸಿಬ್ಬಂದಿ ಹಾಜರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.