ಅಥಣಿ: ಗುಜರಾತನ ಸೂರತ್ ನಗರದಲ್ಲಿ ಇತ್ತೀಚೆಗೆ ಜರುಗಿದ ನಾಲ್ಕನೇ ರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಅಥಣಿ ಪಟ್ಟಣದ 74ರ ಹರೆಯದ ಈಜುಪಟು ಬಲವಂತ ಪತ್ತಾರ ಭಾಗವಹಿಸಿ ಪ್ರಥಮ ಸ್ಥಾನ ಪಡೆಯುವ ಮೂಲಕ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ.
100 ಮೀಟರ್ ಫ್ರೀ ಸ್ಟೈಲ್ ಈಜು ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆಯುವ ಮೂಲಕ ಬಂಗಾರದ ಪದಕ ಮತ್ತು ಪ್ರಮಾಣ ಪತ್ರ ಪಡೆದುಕೊಂಡಿದ್ದಾರೆ. 100 ಮೀಟರ್ ಬ್ಯಾಕ್ ಸ್ಟೊಕ್ ಮತ್ತು 50 ಮೀಟರ್ ಬಟರ್ ಪ್ಲೈ ಸ್ಪರ್ಧೆಯಲ್ಲಿ ಭಾಗವಹಿಸಿ ಕಂಚಿನ ಪದಕಗಳನ್ನು ಪಡೆದುಕೊಂಡಿದ್ದಾರೆ. ಇಳಿ ವಯಸ್ಸಿನಲ್ಲಿಯೂ ಇಂತಹ ಸಾಹಸವನ್ನು ಮಾಡಿ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆಯುವ ಮೂಲಕ ಅಥಣಿಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಈ ಕ್ರೀಡಾ ಸಾಧಕರನ್ನು ಶಾಸಕ ಲಕ್ಷ್ಮಣ ಸವದಿ, ಜಲ ಯೋಗ ಸಾಧಕ ವಿಲಾಸ ಕುಲಕರ್ಣಿ, ವಿಶ್ವಕರ್ಮ ಮಹಾಸಭಾ ರಾಜ್ಯ ಕಾರ್ಯದರ್ಶಿ ಭೀಮರಾವ ಬಡಿಗೇರ ಸೇರಿದಂತೆ ಅಥಣಿ ನಾಗರಿಕರು ಅಭಿನಂದಿಸಿದ್ದಾರೆ.