ಬೆಳಗಾವಿಯ ಮರಾಠಾ ಲಘು ಪದಾತಿ ದಳದ ರೆಜಿಮೆಂಟಲ್ ಸೆಂಟರ್‌ನ ಆರ್ಮಿ ಪಬ್ಲಿಕ್ ಸ್ಕೂಲ್ ಶುಕ್ರವಾರ ಎನ್‍ಸಿಸಿ ಘಟಕ ಉದ್ಘಾಟಿಸಿದ ಬ್ರಿಗೇಡಿಯರ್ ಜಾಯ್‍ದೀಪ್ ಮುಖರ್ಜಿ ಅವರಿಗೆ ವಿದ್ಯಾರ್ಥಿಗಳು ಗೌರವ ಸಲ್ಲಿಸಿದರು
ಬೆಳಗಾವಿ: ಇಲ್ಲಿನ ಮರಾಠಾ ಲಘು ಪದಾತಿ ದಳದ ರೆಜಿಮೆಂಟಲ್ ಸೆಂಟರ್ (ಎಂಎಲ್ಐಆರ್‌ಸಿ)ನ ಆರ್ಮಿ ಪಬ್ಲಿಕ್ ಸ್ಕೂಲ್ ಶುಕ್ರವಾರ ತನ್ನ ಎನ್‍ಸಿಸಿ ಘಟಕವನ್ನು (168/26 ಕರ್ನಾಟಕ ಬೆಟಾಲಿಯನ್) ಉದ್ಘಾಟಿಸಲಾಯಿತು. ಇದೇ ಮೊದಲ ಬಾರಿಗೆ ಆರ್ಮಿ ಶಾಲೆಯಿಂದ ಎನ್‌ಸಿಸಿ ಘಟಕ ತೆರೆಯಲಾಗಿದೆ.
ಕಮಾಂಡೆಂಟ್ ಎಂಎಲ್‍ಐಆರ್‌ಸಿ ಮತ್ತು ಎಪಿಎಸ್ ಅಧ್ಯಕ್ಷ ಬ್ರಿಗೇಡಿಯರ್ ಜಾಯ್‍ದೀಪ್ ಮುಖರ್ಜಿ ಈ ಎನ್‌ಸಿಸಿ ಘಟಕವನ್ನು ಉದ್ಘಾಟಿಸಿದರು. ಬೆಳಗಾವಿಯ ಗ್ರೂಪ್ ಕಮಾಂಡರ್ ಎನ್‍ಸಿಸಿ ಗ್ರೂಪ್ ಎಚ್‍ಕ್ಯೂ ಕರ್ನಲ್ ಮೋಹನ್ ನಾಯಕ್, 26 ಕರ್ನಾಟಕ ಬೆಟಾಲಿಯನ್ ಎನ್‍ಸಿಸಿಯ ಕಮಾಂಡಿಂಗ್ ಆಫೀಸರ್ ಕರ್ನಲ್ ಸುನಿಲ್ ದಾಗರ್ ಮತ್ತು ಎಪಿಎಸ್ ಸ್ಟಾಫ್ ಆಫೀಸರ್ ಲೆಫ್ಟಿನೆಂಟ್ ಕರ್ನಲ್ ಅರುಣ್ ಮ್ಯಾಥ್ಯೂ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು.
ಆಕರ್ಷಕ ಕವಾಯತು ಬಳಿಕ ಕೆಡೆಟ್‌ಗಳನ್ನು ಉದ್ದೇಶಿಸಿ ಮಾತನಾಡಿದ ಬ್ರಿಗೇಡಿಯರ್ ಮುಖರ್ಜಿ ಅವರು, ‘ಯುವ ಕೆಡೆಟ್‍ಗಳು ಶಿಸ್ತು, ಸಮರ್ಪಣೆ ಮತ್ತು ರಾಷ್ಟ್ರಕ್ಕೆ ಸೇವೆಯ ಮೌಲ್ಯಗಳನ್ನು ಎತ್ತಿಹಿಡಿಯಬೇಕು. ವಿಶ್ವದಲ್ಲಿಯೇ ಭಾರತ ದೇಶವು ಶಾಂತಿ, ಶೌರ್ಯ, ಸಾಹಸಕ್ಕೆ ಹೆಸರಾಗಿದೆ. ಇದು ಇತಿಹಾಸದುದ್ದಕ್ಕೂ ದಾಖಲಾಗಿದೆ. ಮಕ್ಕಳು ಇಂಥ ಇತಿಹಾಸವನ್ನು ಓದಿ ದೇಶಪ್ರೇಮ ಬೆಳೆಸಿಕೊಳ್ಳಬೇಕು. ಯಾವಾಗಲೂ ದೇಶಸೇವೆಗೆ ಸಿದ್ಧರಾಗಿರಬೇಕು’ ಎಂದು ಕರೆ ನೀಡಿದರು.
‘ಮಿಲಿಟರಿ ಶಾಲೆಯಲ್ಲಿ ನೀವು ಈಗಾಗಲೇ ಶಿಸ್ತನ್ನು ಕಲಿತಿದ್ದೀರಿ. ಅದಕ್ಕೆ ಪೂರಕವಾದ ವ್ಯಕ್ತಿತ್ವ ಬೆಳವಣಿಗೆ ಇಲ್ಲಿ ಆಗುತ್ತದೆ. ರಾಷ್ಟ್ರ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಅರ್ಥಪೂರ್ಣವಾಗಿ ಕೊಡುಗೆ ನೀಡಲು ಪ್ರೇರೇಪಿಸುತ್ತದೆ’ ಎಂದೂ ಕಿವಿಮಾತು ಹೇಳಿದರು.
ಆರ್ಮಿ ಶಾಲೆಯ ಪ್ರಾಂಶುಪಾಲರಾದ ರೂಪಿಂದರ್ ಕೌರ್ ಚಾಹಲ್ ಅವರ ಮಾರ್ಗದರ್ಶನದಲ್ಲಿ ದೇಶಭಕ್ತಿ, ಶಿಸ್ತು ಮತ್ತು ಏಕತೆಯನ್ನು ಪ್ರದರ್ಶಿಸುವ ವಿದ್ಯಾರ್ಥಿಗಳಿಂದ ರೋಮಾಂಚಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಒಟ್ಟು 50 ವಿದ್ಯಾರ್ಥಿಗಳು ಎನ್‍ಸಿಸಿಯ ಉದ್ಘಾಟನಾ ವರ್ಷದಲ್ಲಿ ಸ್ವಯಂ ಪ್ರೇರಿತರಾಗಿ ಎನ್‍ಸಿಸಿಗೆ ಸೇರಲು ಮುಂದಾದರು.
‘ಎನ್‍ಸಿಸಿ ಘಟಕದ ಸ್ಥಾಪನೆಯು ಎಪಿಎಸ್‍ಗೆ ಮಹತ್ವದ ಮೈಲಿಗಲ್ಲು. ವಿದ್ಯಾರ್ಥಿಗಳು ಸಮುದಾಯ ಸೇವೆ, ಸಾಹಸ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಹೊಸ ಮಾರ್ಗಗಳನ್ನು ತೆರೆಯುತ್ತದೆ’ ಎಂದೂ ಅವರು ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳಾಗಿದ್ದಾಗಲೇ ನಿಮ್ಮಲ್ಲಿ ನಾಯಕತ್ವ ಗುಣಗಳು ಬೆಳೆಯಬೇಕು. ನಾಯಕತ್ವ ಗುಣ ಬೆಳೆಸಿಕೊಳ್ಳಲು ಮತ್ತು ವ್ಯಕ್ತಿತ್ವ ನಿರ್ಮಾಣದಲ್ಲಿ ಎನ್‍ಸಿಸಿಯ ಪ್ರಮುಖ ಪಾತ್ರ ವಹಿಸುತ್ತದೆಬ್ರಿಗೇಡಿಯರ್ ಜಾಯ್‍ದೀಪ್ ಮುಖರ್ಜಿ ಅಧ್ಯಕ್ಷ ಕಮಾಂಡೆಂಟ್ ಎಂಎಲ್‍ಐಆರ್‌ಸಿ ಮತ್ತು ಎಪಿಎಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.