ADVERTISEMENT

ಬದುಕು ಕಸಿದುಕೊಂಡ ಮಲಪ್ರಭಾ ಪ್ರವಾಹ: ಕುಬ್ಜರ ಕುಟುಂಬಕ್ಕೆ ಬೇಕಿದೆ ‘ನೆರಳು’

ಚನ್ನಪ್ಪ ಮಾದರ
Published 8 ಮೇ 2025, 5:55 IST
Last Updated 8 ಮೇ 2025, 5:55 IST
ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದ ರೋಷನ್‌ಬಿ ಮತ್ತು ಬೇಗಂ ಇಮಾಮ್‌ಬಾಯಿ
ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದ ರೋಷನ್‌ಬಿ ಮತ್ತು ಬೇಗಂ ಇಮಾಮ್‌ಬಾಯಿ   

ರಾಮದುರ್ಗ: ‘ಶಾರೀರಿಕವಾಗಿ ನಾವು ಕುಬ್ಜರು. ಬಡತನವಿದೆ. ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗಿಲ್ಲ. 2019ರಲ್ಲಿ ಬಂದ ಪ್ರವಾಹ ಬದುಕನ್ನೇ ಕಸಿದುಕೊಂಡಿದೆ. ಇರುವುದಕ್ಕೆ ನೆರಳೂ ಇಲ್ಲ. ಬದುಕು ಬೀದಿಪಾಲಾಗಿದೆ. ಸಂಬಂಧಿಯೊಬ್ಬರು ಆಶ್ರಯ ನೀಡಿದ್ದಾರೆ. ಆದರೆ, ಭವಿಷ್ಯ ಕತ್ತಲಲ್ಲಿ ಮುಳುಗಿದೆ ಎಂಬ ಚಿಂತೆ ಕಾಡುತ್ತಿದೆ...’

ಮಲಪ್ರಭೆಯ ಪ್ರವಾಹಕ್ಕೆ ಸಿಲುಕಿ ಮನೆ ಕಳೆದುಕೊಂಡ ತಾಲ್ಲೂಕಿನ ಹಂಪಿಹೊಳಿ ಗ್ರಾಮದ ರೋಷನ್‌ಬಿ ಹಾಗೂ ಇಮಾಮ್‌ಬಾಯಿ ಅವರ ಕುಟುಂಬ ಅಳಲು ಇದು.

ತಂಗಿ ರೋಷನ್‌ಬಿ ಪಿಯುಸಿ, ಅಕ್ಕ ಬೇಗಂ ಇಮಾಮ್‌ಬಾಯಿ ಎಸ್ಸೆಸ್ಸೆಲ್ಸಿ ಉತ್ತೀರ್ಣಗೊಂಡಿದ್ದಾರೆ. ಆದರೂ ಅಂಗವಿಕಲರ ಕೋಟಾದಲ್ಲಿ ನೌಕರಿ ಸಿಗುತ್ತಿಲ್ಲ. ಕುಬ್ಜ ಇರುವುದರಿಂದ ಕೂಲಿ ಇಲ್ಲವೇ ಬೇರೆ ಉದ್ಯೋಗಕ್ಕೂ ಯಾರೂ ಕರೆಯುವುದಿಲ್ಲ.  ಬೆಂಗಳೂರಿನಲ್ಲಿ ಒಂದು ಖಾಸಗಿ ಕೆಲಸ ಇತ್ತು. ಅಕ್ಕನಿಗೆ ಅನಾರೋಗ್ಯ ಕಾಡಿತು. ಕೆಲಸ ಬಿಟ್ಟು ಸ್ವಗ್ರಾಮಕ್ಕೆ ಬಂದಿದ್ದಾರೆ.

ADVERTISEMENT

‘ಸ್ವಂತ ಉದ್ಯೋಗ ಮಾಡಬೇಕೆಂದರೂ ಹಣಕಾಸಿನ ತೊಂದರೆ ಅಡ್ಡಿಯಾಗಿದೆ. ಬ್ಯಾಂಕ್‌ನವರೂ ಸಾಲ ನೀಡುತ್ತಿಲ್ಲ. ಕೆಲಸ ಇಲ್ಲದಿದ್ದರೂ ಬದುಕಬೇಕು ಎಂದರೂ ಗ್ರಾಮಸ್ಥರ ಅಸಹಕಾರವಿದೆ. ಕೆಲವರು ವಿನಾಕಾರಣ ಪೊಲೀಸರಿಗೆ ದೂರು ನೀಡಿ ಅಲೆದಾಡುವಂತೆ ಮಾಡಿದ್ದಾರೆ. ಅಕ್ಕ ಬೇಗಂಗೆ ಆರೋಗ್ಯ ಸಮಸ್ಯೆ ಕಾಡುತ್ತಿರುವುದರಿಂದ ಬದುಕು ಕಷ್ಟಕರವಾಗಿದೆ. ಗ್ರಾಮದಲ್ಲಿಯ ಜನರ ತೊಂದರೆಗೆ ಹೆದರಿ ಗ್ರಾಮವನ್ನೇ ತೊರೆದು ರಾಮದುರ್ಗದಲ್ಲಿ ನೆಲೆಸಿದ್ದೇವೆ. ಮನೆ ಮಂಜೂರಾದರೆ ಗ್ರಾಮಕ್ಕೆ ಮರಳಿ ದುಡಿಮೆ ಮಾಡಿಕೊಂಡು ಬದುಕುತ್ತೇವೆ’ ಎಂದು ರೋಷನ್‌ಬಿ ‘ಪ್ರಜಾವಾಣಿ‘ ಮುಂದೆ ನೊಂದು ನುಡಿದರು.

ಮಲಪ್ರಭೆಗೆ 2019ರಲ್ಲಿ ಪ್ರವಾಹ ಎದುರಾಗಿ ಹಂಪಿಹೊಳಿ ಗ್ರಾಮದ ಬಹುತೇಕರು ಮನೆ ಕಳೆದುಕೊಂಡು ನಿರ್ಗತಿಕರಾದರು. ಅದರಲ್ಲಿ ಇಮಾಮ್‌ಬಿ ಅವರ ಕುಟುಂಬವೂ ಒಂದು. ಶಾರೀರಿಕವಾಗಿ ಎರಡು ಮುಕ್ಕಾಲು ಅಡಿ ಎತ್ತರದ ಮಹಿಳೆಯರು ಕಳೆದುಕೊಂಡ ಮನೆ ನಿರ್ಮಿಸಿಕೊಡಲು ಎಲ್ಲರ ದುಂಬಾಲು ಬಿದ್ದರೂ ಯಾರೂ ಮುಂದಾಗಿಲ್ಲ.

ಹಂಪಿಹೊಳಿ ಗ್ರಾಮದಲ್ಲಿ ಒಂದು ಜಾಗದಲ್ಲಿ ಸುತ್ತಲೂ ಮಣ್ಣಿನ ಗೋಡೆ ಇದ್ದು, ಅದರ ಮೇಲೆ ತಗಡು ಹಾಕಿಕೊಂಡು ರೋಷನ್‌ಬಿ ಇಮಾಮ್‌ ಬಾಯಿ, ಬೇಗಂ ಇಮಾಮ್‌ಬಾಯಿ ಜೀವನ ನಡೆಸುತ್ತಿದ್ದರು. ಮಲಪ್ರಭೆಗೆ ಪ್ರವಾಹ ಎದುರಾಗಿ ಎಲ್ಲವೂ ನೆಲಸಮಗೊಂಡಿತು. ಮನೆ ಕೇಳಿದರೆ ನಿಮ್ಮದು ತಗಡಿನ ಮನೆ ಇದ್ದ ಕಾರಣ ಪ್ರವಾಹ ಸಂತ್ರಸ್ತರಿಗಾಗಿ ನೀಡುವ ಮನೆ ಮಂಜೂರು ಮಾಡುವುದಿಲ್ಲ. ಅಂಗವಿಕಲ ಕೋಟಾದಡಿ ಮನೆ ಬಂದರೆ ನೀಡುವುದಾಗಿ ಪಂಚಾಯಿತಿಯವರು ಹೇಳುತ್ತಿದ್ದಾರೆ ಎನ್ನುತ್ತಾರೆ.

‘ಖಾಲಿ ಜಾಗವಿದೆ. ಮನೆ ಕಟ್ಟಿಸಿಕೊಡಿ ಎಂದು ಶಾಸಕರು, ಅಧಿಕಾರಿಗಳಿಗೆ ಸಾಕಷ್ಟು ಮನವಿ ಮಾಡಿದ್ದೇವೆ. ನಮ್ಮನ್ನು ನೋಡಿ ಅಪಹಾಸ್ಯ ಮಾಡುತ್ತಾರೆ. ಸಹಾಯ ಮಾಡಿಲ್ಲ’ ಎನ್ನುವುದು ಅವರ ನೋವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.