ADVERTISEMENT

ಜಿಎಸ್‌ಟಿ ವಿರುದ್ಧ ಹೋರಾಟಕ್ಕೆ ನೇಕಾರರ ನಿರ್ಧಾರ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2021, 14:42 IST
Last Updated 28 ನವೆಂಬರ್ 2021, 14:42 IST
ಬೆಳಗಾವಿಯ ಹಳೇ ಬೆಳಗಾವಿಯ ಕಲ್ಮೇಶ್ವರ ದೇವಸ್ಥಾನದಲ್ಲಿ ನೇಕಾರರು ಭಾನುವಾರ ಸಭೆ ನಡೆಸಿದರು
ಬೆಳಗಾವಿಯ ಹಳೇ ಬೆಳಗಾವಿಯ ಕಲ್ಮೇಶ್ವರ ದೇವಸ್ಥಾನದಲ್ಲಿ ನೇಕಾರರು ಭಾನುವಾರ ಸಭೆ ನಡೆಸಿದರು   

ಬೆಳಗಾವಿ: ‘ಪ್ರಸ್ತುತ ಜೆಎಸ್‌ಟಿ ದರ ಏರಿಕೆ ಮೇಲ್ನೋಟಕ್ಕೆ ಜವಳಿ ಉದ್ಯಮಿಗಳ ಪರ ಎನಿಸಿದರೂ ದೀರ್ಘಾವಧಿ ಪರಿಣಾಮವು ಉದ್ಯಮಕ್ಕೆ ಅತ್ಯಂತ ಮಾರಕವಾಗಿದೆ. ಇದರ ವಿರುದ್ಧ ಹೋರಾಟ ರೂಪಿಸಲಾಗುವುದು’ ಎಂದು ನೇಕಾರರು ತಿಳಿಸಿದರು.

ಕೇಂದ್ರ ಸರ್ಕಾರವು ಜವಳಿ ಉತ್ಪನ್ನಗಳ ಮೇಲಿನ ಜಿಎಸ್‌ಟಿ ದರ ಏರಿಸಿರುವ ಹಿನ್ನೆಲೆಯಲ್ಲಿ ಇಲ್ಲಿನ ಹಳೇ ಬೆಳಗಾವಿಯ ಕಲ್ಮೇಶ್ವರ ದೇವಸ್ಥಾನದಲ್ಲಿ ಭಾನುವಾರ ನಡೆದ ಸಭೆಯಲ್ಲಿ, ಹೋರಾಟಕ್ಕೆ ತಯಾರಾಗಲು ನಿರ್ಣಯಿಸಲಾಯಿತು’ ಎಂದು ಮಾಹಿತಿ ನೀಡಿದರು.

‘ವಾಜಪೇಯಿ ಸರ್ಕಾರ ಜಾರಿಗೊಳಿಸಿದ್ದ ವ್ಯಾಟ್‌ನ ಮತ್ತೊಂದು ಮುಖವೇ ಜಿಎಸ್‌ಟಿ. ಸಣ್ಣ ಕೈಗಾರಿಕೆ ಅಥವಾ ಉದ್ಯಮಗಳ ಮೇಲೆ ಇದರ ಅಡ್ಡ ಪರಿಣಾಮಗಳನ್ನು ಅರಿತಿದ್ದ ಅರ್ಥಶಾಸ್ತ್ರಜ್ಞರೂ ಆದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ತಮ್ಮ ಅಧಿಕಾರದ ಅವಧಿಯಲ್ಲಿ ರದ್ದುಪಡಿಸಿದ್ದರು. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಜಿಎಸ್‌ಟಿ ಹೆಸರಿನಲ್ಲಿ ಮತ್ತಷ್ಟು ಮಾರಕವಾದ ರೂಪದಲ್ಲಿ ಜಾರಿಗೊಳಿಸಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

‘ಜವಳಿ ಹಾಗೂ ಚರ್ಮ ಉತ್ಪನ್ನಗಳ ಮೇಲಿನ ಜಿಎಸ್‌ಟಿ ಏರಿಸಿ ಉದ್ದಿಮೆದಾರರಿಗೆ ತೆರಿಗೆ ಹೊರೆ ಕಡಿಮೆ ಮಾಡುತ್ತಿರುವುದಾಗಿ ಸರ್ಕಾರ ಹೇಳಿದೆ. ಆದರೆ, ಇದರಿಂದ ಗ್ರಾಹಕರ ಮೇಲೆ ತೆರಿಗೆ ಹೊರೆ ಹೆಚ್ಚಾಗುತ್ತದೆ. ಬೆಲೆ ಹೆಚ್ಚಾದರೆ ಬೇಡಿಕೆ ಕಡಿಮೆ ಆಗುತ್ತದೆ. ಬೇಡಿಕೆ ಕಡಿಮೆಯಾದರೆ ಸಣ್ಣ ಉದ್ದಿಮೆದಾರರಲ್ಲಿ ಅನಾರೋಗ್ಯಕರ ಸ್ಪರ್ಧೆ ಹೆಚ್ಚಾಗುತ್ತದೆ. ಇದರಿಂದ ಅತಿ ಸಣ್ಣ ಉದ್ಯಮಿಗಳು ತತ್ತರಿಸುವಂತಾಗುತ್ತದೆ. ಕೆಲವು ದೊಡ್ಡ ಉದ್ದಿಮೆದಾದರ ಏಕಸ್ವಾಮ್ಯತೆಗೆ ಬಲಿ ಆಗಬೇಕಾಗುತ್ತದೆ’ ಎಂದು ತಿಳಿಸಿದರು.

‌‘ಜಿಎಸ್‌ಟಿಯಿಂದ ಸರ್ಕಾರದ ಬೊಕ್ಕಸಕ್ಕೆ ಸಾಕಷ್ಟು ತೆರಿಗೆ ಬರುತ್ತಿದ್ದರೂ, ಜವಳಿ ಉದ್ಯಮ ಉತ್ತೇಜಿಸುವ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ದೂರಿದರು.

ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ, ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲ ಅಧಿವೇಶನದ ವೇಳೆ ಶಾಸಕ ಸತೀಶ ಜಾರಕಿಹೊಳಿ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮೂಲಕ ಮುಖ್ಯಮಂತ್ರಿ ಮತ್ತು ಜವಳಿ ಸಚಿವರನ್ನು ಭೇಟಿಯಾಗಿ ಅಹವಾಲು ಸಲ್ಲಿಸಲಾಗುವುದು ಎಂದರು.

ಹಿರಿಯರಾದ ಭೋಜಪ್ಪಾ ಹಜೇರಿ, ರಾಘವೇಂದ್ರ ಲೋಕರಿ, ಬಲರಾಮ ಸಂಗೊಳ್ಳಿ, ಗಣಪತಿ ಅಲಕುಂಟೆ, ತಿಮ್ಮಣ್ಣ ಪರಿಶ್ವಡ್, ದೀಪಕ್ ಕಾಮಕರ, ವಿಶ್ವನಾಥ ಕಾಮಕರ, ರಾಜು ಹರಣಿ, ಸುರೇಶ ಭಂಡಾರಿ, ವಿಜಯ ಸಾತ್ಪುತೆ, ರಾಜು ಕ್ಯಾರಕಟ್ಟಿ, ಸಾಗರ ಸಾತ್ಪುತೆ, ನಾಗರಾಜ ಬೆಟಗೇರಿ, ಶೇಖರ್ ಕಾಮಕರ, ರುದ್ರಪ್ಪ ಢವಳಿ, ಸಂತೋಷ ಸಾತ್ಪುತೆ, ರವಿ ತಾವರೆ, ಶಂಕರ ಲೋಲಿ, ಅನಿಲ್ ಉಪರಿ, ಆನಂದ ಭಗವಂತನವರ, ಶಿವು ಸೊಂಟಕ್ಕಿ, ಸರಳಾ ಸಾತ್ಪುತೆ ಪಾಲ್ಗೊಂಡಿದ್ದರು.

ಆಗ್ರಹಗಳು

* ಕಾಂಗ್ರೆಸ್ ಸರ್ಕಾರವಿದ್ದಾಗ ಜಾರಿಯಲ್ಲಿದ್ದ ಜನಶ್ರೀ ಬಿಮಾ ಯೋಜನೆ ಸೌಲಭ್ಯ ಒದಗಿಸಬೇಕು

* ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಇರುವಂತೆ ನೇಕಾರರ ಕಲ್ಯಾಣ ಮಂಡಳಿ ರಚಿಸಿ ಸವಲತ್ತು ಕಲ್ಪಿಸಬೇಕು

* ನೇಕಾರರನ್ನು ಅಸಂಘಟಿತ ಕಾರ್ಮಿಕರೆಂದು ಗುರುತಿಸಿ ಕಾರ್ಮಿಕರ ಸೌಲಭ್ಯ ಒದಗಿಸಬೇಕು

* ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯ ಸೇರಿದಂತೆ ಜವಳಿ ಉದ್ಯಮ ಉತ್ತೇಜಕ ಹಾಗೂ ಕೂಲಿ ಕಾರ್ಮಿಕರ ಪರ ನೀತಿ ರೂಪಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.