ಬೆಳಗಾವಿ: ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ(ಆರ್‌ಸಿಯು) ವ್ಯಾಪ್ತಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅಡಿ ಸ್ನಾತಕ ಕೋರ್ಸ್‌ಗಳ ಮೂರನೇ ಸೆಮಿಸ್ಟರ್ ಮರುಪ್ರವೇಶಕ್ಕೆ ಅವಕಾಶ ಕಲ್ಪಿಸದಿರುವುದು ವಿದ್ಯಾರ್ಥಿಗಳ ಆತಂಕಕ್ಕೆ ಕಾರಣವಾಗಿದೆ.
2021–22ನೇ ಸಾಲಿನಲ್ಲಿ ಆರ್‌ಸಿಯುನಲ್ಲಿ ಎನ್‌ಇಪಿ ಅನುಷ್ಠಾನಗೊಳಿಸಲಾಗಿತ್ತು. ಈ ಪೈಕಿ ಎರಡು ಬ್ಯಾಚ್‌ನವರು ಮೂರು ವರ್ಷಗಳ ಪದವಿ ಓದು ಪೂರ್ಣಗೊಳಿಸಿದ್ದಾರೆ. ಮೂರನೇ ಬ್ಯಾಚ್‌ನವರು ಈಗ ಅಂತಿಮ ವರ್ಷದಲ್ಲಿ ಓದುತ್ತಿದ್ದಾರೆ.
ಈ ಮಧ್ಯೆ, ಆರ್‌ಸಿಯುನಲ್ಲಿ 2024–25ರಲ್ಲಿ ರಾಜ್ಯ ಶಿಕ್ಷಣ ನೀತಿ(ಎಸ್‌ಇಪಿ) ಅನುಷ್ಠಾನಕ್ಕೆ ತರಲಾಗಿದೆ. ಕಳೆದ ವರ್ಷ ಸ್ನಾತಕ ಕೋರ್ಸ್‌ಗಳ ಪ್ರಥಮ ಸೆಮಿಸ್ಟರ್‌ಗೆ ಪ್ರವೇಶ ಪಡೆದವರು ಈಗ ಮೂರನೇ ಸೆಮಿಸ್ಟರ್‌ನಲ್ಲಿದ್ದಾರೆ.
ಆದರೆ, ಪರೀಕ್ಷೆ ಶುಲ್ಕ ಭರಿಸದಿರುವುದು, ಹಾಜರಾತಿ ಕೊರತೆಯಿಂದಾಗಿ ಎನ್‌ಇಪಿ ಅಡಿ ಮೂರು, ನಾಲ್ಕನೇ ಸೆಮಿಸ್ಟರ್ ಪೂರ್ಣಗೊಳಿಸದ ವಿದ್ಯಾರ್ಥಿಗಳಿಗೆ ಈಗ ಮೂರನೇ ಸೆಮಿಸ್ಟರ್‌ಗೆ ಮರುಪ್ರವೇಶ ಕಲ್ಪಿಸುತ್ತಿಲ್ಲ. ಬದಲಿಗೆ ಎಸ್‌ಇಪಿ ಅಡಿ ಮೊದಲ ಸೆಮಿಸ್ಟರ್‌ಗೆ ಪ್ರವೇಶ ಪಡೆಯುವಂತೆ ಆದೇಶಿಸಿರುವುದು ಗೊಂದಲಕ್ಕೆ ಕಾರಣವಾಗಿದೆ.
ಮಾಹಿತಿ ಸಂಗ್ರಹಿಸಿತ್ತು: ತನ್ನ ವ್ಯಾಪ್ತಿಯ ಎಲ್ಲ ಕಾಲೇಜುಗಳ ಪ್ರಾಚಾರ್ಯರಿಗೆ ಸುತ್ತೋಲೆ ಹೊರಡಿಸಿದ್ದ ಆರ್‌ಸಿಯು, 2025–26ನೇ ಸಾಲಿನಲ್ಲಿ ಮೂರನೇ ಸೆಮಿಸ್ಟರ್‌ಗೆ ಮರುಪ್ರವೇಶ ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳ ಮಾಹಿತಿ ಸಂಗ್ರಹಿಸಿತ್ತು.
ವಿಶ್ವವಿದ್ಯಾಲಯದ ಅರ್ಹತಾ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸಿದ ನಂತರ, ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಒಂದು ನಿರ್ಧಾರಕ್ಕೆ ಬರುವುದಾಗಿ ತಿಳಿಸಿತ್ತು. ನಂತರ ಯಾವ ಕ್ರಮ ವಹಿಸಿಲ್ಲ.
‘ಆರ್ಥಿಕ ಸಂಕಷ್ಟದಿಂದ ನಾನು ಸ್ನಾತಕ ಕೋರ್ಸ್‌ನ ನಾಲ್ಕನೇ ಸೆಮಿಸ್ಟರ್‌ನ ಪರೀಕ್ಷೆ ಶುಲ್ಕ ತುಂಬಿಲ್ಲ. ಈಗ ಮೂರನೇ ಸೆಮಿಸ್ಟರ್ ಮರುಪ್ರವೇಶಕ್ಕೆ ಮುಂದಾಗಿದ್ದೇನೆ. ಆದರೆ, ಎಸ್‌ಇಪಿ ಅಡಿ ಮೊದಲ ಸೆಮಿಸ್ಟರ್‌ಗೆ ಪ್ರವೇಶ ಪಡೆಯಲು ಹೇಳುತ್ತಾರೆ. ಹಾಗಾದರೆ ಮತ್ತೊಂದು ವರ್ಷ ವ್ಯರ್ಥವಾಗುತ್ತದೆ. ನಾನು ಇಲ್ಲಿಗೆ ಓದು ಮೊಟಕುಗೊಳಿಸುತ್ತೇನೆ’ ಎಂದು ಮೂಡಲಗಿಯ ವಿದ್ಯಾರ್ಥಿನಿಯೊಬ್ಬರು ಹೇಳಿದರು.
‘ಎನ್‌ಇಪಿ ಅಡಿ ಮೂರು, ನಾಲ್ಕನೇ ಸೆಮಿಸ್ಟರ್ ಪೂರ್ಣಗೊಳಿಸದ ವಿದ್ಯಾರ್ಥಿಗಳಿಗೆ ಈಗ ಮರುಪ್ರವೇಶಕ್ಕೆ ಅವಕಾಶ ನೀಡಬೇಕು’ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರೊಬ್ಬರು ಹೇಳಿದರು.
ಎನ್ಇಪಿ ಮತ್ತು ಎಸ್‌ಇಪಿ ಅಡಿ ಅಂಕಗಳು(ಕ್ರೆಡಿಟ್‌ಗಳು) ಭಿನ್ನವಾಗಿವೆ. ಹೀಗಾಗಿ ಎನ್‌ಇಪಿ ಅಡಿ ಮೂರನೇ ಸೆಮಿಸ್ಟರ್‌ಗೆ ಮರುಪ್ರವೇಶ ನೀಡಲು ಸಾಧ್ಯವಿಲ್ಲ.
–ಸಂತೋಷ ಕಾಮಗೌಡ ಕುಲಸಚಿವ ಆರ್‌ಸಿಯು
ಅನಧಿಕೃತವಾಗಿ ಗೈರು: ಕುಲಸಚಿವ
‘ಸ್ನಾತಕ ಕೋರ್ಸ್‌ಗಳ ಮೂರು ನಾಲ್ಕನೇ ಸೆಮಿಸ್ಟರ್‌ಗೆ 250 ವಿದ್ಯಾರ್ಥಿಗಳು ಅನಧಿಕೃತವಾಗಿ ಗೈರು ಆಗಿದ್ದರು. ಪರೀಕ್ಷಾ ಶುಲ್ಕ ಭರಿಸಿರಲಿಲ್ಲ. ಕಾಲೇಜಿನಿಂದ ಹೊರಗುಳಿದ ಅವರಿಗೆ ಮೂರನೇ ಸೆಮಿಸ್ಟರ್‌ಗೆ ಮರುಪ್ರವೇಶ ನಿರಾಕರಿಸಿದ್ದು ಮೊದಲ ಸೆಮಿಸ್ಟರ್‌ಗೆ ಪ್ರವೇಶ ಪಡೆಯಲು ಕೋರಿದ್ದೇವೆ’ ಎಂದು ಆರ್‌ಸಿಯು ಕುಲಸಚಿವ ಸಂತೋಷ ಕಾಮಗೌಡ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.