ADVERTISEMENT

ಹಿರೇಬಾಗೇವಾಡಿಯಲ್ಲಿ ಹೊಸ ಜೀವನ

ಕೊರೊನಾ ಸೋಂಕಿನಿಂದ ಕಂಗೆಟ್ಟಿದ್ದ ಗ್ರಾಮ

​ಪ್ರಜಾವಾಣಿ ವಾರ್ತೆ
Published 7 ಜೂನ್ 2020, 19:30 IST
Last Updated 7 ಜೂನ್ 2020, 19:30 IST
ಹಿರೇಬಾಗೇವಾಡಿ ಗ್ರಾಮದ ನೋಟ
ಹಿರೇಬಾಗೇವಾಡಿ ಗ್ರಾಮದ ನೋಟ   

ಹಿರೇಬಾಗೇವಾಡಿ: ಕೋವಿಡ್–19 ಸೋಂಕು ಕಾಣಿಸಿಕೊಂಡು ಕಂಗೆಟ್ಟಿದ್ದ ಗ್ರಾಮವು ಶನಿವಾರದಿಂದ ಹೊಸ ಜೀವನಕ್ಕೆ ತೆರೆದುಕೊಂಡಿದೆ.

ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಇಲ್ಲಿ 19ಸಾವಿರ ಜನಸಂಖ್ಯೆ ಇದೆ. ಸೌಹಾರ್ದಕ್ಕೆ ಹೆಸರಾಗಿದೆ. ಕೊರೊನಾದಿಂದ ಎರಡು ತಿಂಗಳಿಗೂ ಅಧಿಕ ಸಮಯ ನರಳಿತು. ಇಲ್ಲಿ ಬೆಳಗಾವಿ ಜಿಲ್ಲೆಯಲ್ಲೇ ಅತಿ ಹೆಚ್ಚು (49) ಸೋಂಕು ಪ್ರಕರಣಗಳು ಕಾಣಿಸಿಕೊಂಡಿದ್ದವು. ಸದ್ಯ ಎಲ್ಲರೂ ಗುಣಮುಖರಾಗಿ ಮನೆಯಲ್ಲಿದ್ದಾರೆ. ಕೆಂಪು ವಲಯ, ನಿರ್ಬಂಧಿತ ಪ್ರದೇಶ, ಸೀಲ್‌ಡೌನ್‌ ಹೇಳಿಕೆಗಳಿಂದಾಗಿ ಜನರು ಅಕ್ಷರಶಃ ಕುಗ್ಗಿ ಹೋಗಿದ್ದರು. ಈಗ ಸಹಜ ಸ್ಥಿತಿಗೆ ಮರಳುತ್ತಿದೆ. ಅಂತರ ಕಾಯ್ದುಕೊಳ್ಳುವ ಮೂಲಕ ಕೊರೊನಾ ಕಲಿಸಿದ ಪಾಠಗಳನ್ನು ಜನರು ಪಾಲಿಸುತ್ತಿದ್ದಾರೆ.

ಕ್ವಾರಂಟೈನ್‌ ನೆನಪುಗಳು:

ADVERTISEMENT

ದಿನಸಿ, ಹಾಲು, ಔಷಧ ಖರೀದಿ, ರೈತರು ಜಮೀನಿಗೆ ಹೋಗುವುದಕ್ಕೂ ವೇಳಾಪಟ್ಟಿ ಮಾಡಲಾಗಿತ್ತು. ಅಂಗಡಿಗಳ ಜನರು ಕಾಯುವ ಸ್ಥಿತಿ ಇತ್ತು. ಬಡವರು, ಕೂಲಿ ಕಾರ್ಮಿಕರ ಬದುಕು ದುಸ್ತರವಾಗಿತ್ತು. ದಿನವಿಡೀ ಪೊಲೀಸರ ಪಹರೆ, ವಾಹನಗಳ ಸೈರನ್ ಜನರನ್ನು ಎಚ್ಚರಿಸುತ್ತಲೇ ಇದ್ದವು. ಹರಟೆ ಕಟ್ಟೆಗೆ ಬರುತ್ತಿದ್ದವರು ದಿಕ್ಕಾಪಾಲಾಗಿ ಓಡಿಹೋಗುತ್ತಿದ್ದುದು ಕಂಡುಬರುತ್ತಿತ್ತು. ಅನಗತ್ಯವಾಗಿ ಓಡಾಡುವವರಿಗೆ, ಬ್ಯಾರಿಕೇಡ್‌ ತೆಗೆದು ನಿಯಮಗಳನ್ನು ಉಲ್ಲಂಘಿಸುತ್ತಿದ್ದರಿಗೆ ಲಾಠಿ ಏಟು ಸಿಗುತ್ತಿತ್ತು. ಕ್ಷೌರಿಕರ ಅಂಗಡಿ ತೆರೆಯಲು ಅವಕಾಶವಿಲ್ಲದೆ ಕೆರೆ ಓಣಿಯ ಯುವಕರೆಲ್ಲ ಪರಸ್ಪರ ಕ್ಷೌರ ಮಾಡಿಕೊಂಡಿದ್ದರು. ಈ ನೆನಪುಗಳನ್ನು ಜನರು ಮೆಲುಕು ಹಾಕುತ್ತಿದ್ದಾರೆ.

ನೋವುಂಡಿದ್ದೇವೆ:

‘ಅನಿವಾರ್ಯವಾಗಿ ಬೇರೆ ಊರಿಗೆ ಹೋದ ಗ್ರಾಮಸ್ಥರು ನಿಂದನೆಗೆ ಒಳಗಾದೆವು. ಕೆಲವು ಗ್ರಾಮಗಳಲ್ಲಿ ಈ ಊರಿನವರಿಗೆ ನಿರ್ಬಂಧ ಹೇರಿದರು. ಅಂತ್ಯಸಂಸ್ಕಾರಕ್ಕೆ ಹೋಗಲಾಗಲಿಲ್ಲ; ಬರುವುದಕ್ಕೂ ಆಗಲಿಲ್ಲ. ಬಂಧುಗಳ ಅಂತಿಮ ದರ್ಶನಕ್ಕೆ ಅವಕಾಶ ಆಗಲಿಲ್ಲ. ತುರ್ತು ವೈದ್ಯಕೀಯ ಸೇವೆ ಪಡೆಯಲು ನಗರಕ್ಕೆ ಹೋದರೆ ಗ್ರಾಮದ ಹೆಸರು ತಿಳಿದು ಚಿಕಿತ್ಸೆ ನೀಡಲು ನಿರಾಕರಿಸಿದರು. ಬ್ಯಾಂಕ್, ಅಂಚೆ ಕಚೇರಿ ಬಂದ್ ಆಗಿದ್ದರಿಂದ ಹಣಕ್ಕಾಗಿ ಪರದಾಡಿದೆವು. ಕೆಲಸಕ್ಕೂ ಹೋಗಲಾಗಲಿಲ್ಲ. ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಗ್ರಾಮದ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿ ನೋವು ನೀಡಿದರು. ಈ ನಡುವೆಯೂ ಕೊರೊನಾ ಸೇನಾನಿಗಳಾದ ಪೊಲೀಸರು, ವೈದ್ಯಕೀಯ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಹಗಲಿರುಳೆನ್ನದೆ ಶ್ರಮಿಸಿದ್ದಾರೆ’ ಎಂದು ಗ್ರಾಮದ ಬಿ.ಎನ್. ಪಾಟೀಲ, ಸಿ.ಸಿ. ಪಾಟೀಲ ಹಾಗೂ ಶ್ರೀಶೈಲ ಪಡಗಲ್ ಹೇಳಿದರು.

ಶಾಸಕಿ ಲಕ್ಷ್ಮಿ ಹೆಬ್ಬಾಳಕರ ತಮ್ಮ ಲಕ್ಷ್ಮಿತಾಯಿ ಪ್ರತಿಷ್ಠಾನದಿಂದ ಅಗತ್ಯ ಸಾಮಗ್ರಿಗಳನ್ನು ವಿತರಿಸಿ ಜನರ ಸಂಕಷ್ಟಗಳಿಗೆ ಸ್ಪಂದಿಸಿದರು. ಕೆಲ ಜನಪ್ರತಿನಿಧಿಗಳು, ದಾನಿಗಳು ಕೂಡ ನೆರವಾದರು. ಇದನ್ನು ಜನರು ನೆನೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.