
ನಿಪ್ಪಾಣಿ: ರೈತರಿಂದ ಬಾಡಿಗೆ ಸ್ವರೂಪದಲ್ಲಿ ಟ್ರ್ಯಾಕ್ಟರಗಳನ್ನು ಪಡೆದು ಬಾಡಿಗೆ ಕೊಡದೆ ತಲೆಮರೆಸಿಕೊಂಡಿದ್ದ ಐವರು ಆರೋಪಿಗಳನ್ನು ಬಂಧಿಸಿದ ಸ್ಥಳೀಯ ಪೊಲೀಸರು ₹37 ಲಕ್ಷ ಮೌಲ್ಯದ 8 ಟ್ರ್ಯಾಕ್ಟರಗಳನ್ನು ವಶಪಡಿಸಿಕೊಂಡಿದ್ದಾರೆ.
ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ಜಾವಳಿ ತಾಲ್ಲೂಕಿನ ಸರತಾಳೆ ಗ್ರಾಮದ ಅಜಯ ಸಂತೋಷ ಚವ್ಹಾಣ (23), ಪುಣೆ ಜಿಲ್ಲೆಯ ಇಂದಾಪುರ ತಾಲ್ಲೂಕಿನ ಮ್ಹಸೋಬಾಚಿವಾಡಿಯ ಪುಷ್ಕರ ಪುಷ್ಪಶೀಲ ಸಾಳುಂಖೆ(31), ಸೋಮನಾಥ ಸಸಂಕರ ಢಮಾಳ(36), ಬಾರಾಮತಿ ತಾಲ್ಲೂಕಿನ ವಾಕಿ ಚೋಪಡಜ ಗ್ರಾಮದ ದತ್ತಾತ್ರಯ ಸಂತಾಜಿ ಗಾಡೆಕರ(23), ಮುರುಮ ಗ್ರಾಮದ ಆಕಾಶ ಅಂಕುಶ ಗಾಡೆ(33) ಬಂಧಿತರು.
ಘಟನೆ ಹಿನ್ನೆಲೆ: ಸೆಪ್ಟೆಂಬರ್ 2024ರಿಂದ ನವೆಂಬರ್ 2025ರ ವರೆಗೆ ಸ್ಥಳೀಯ ನ್ಯಾಯಾಲಯದ ಆವರಣದಲ್ಲಿ ನೋಟರಿ ಬಾಂಡ್ ಪತ್ರ ಬರೆಯಿಸಿಕೊಂಡು ಪ್ರತಿ ತಿಂಗಳು ₹30 ಸಾವಿರ ಬಾಡಿಗೆ ಕೊಡುವುದಾಗಿ ಹೇಳಿ ಒಟ್ಟು ₹68 ಲಕ್ಷ ಮೌಲ್ಯದ 15 ಟ್ರ್ಯಾಕ್ಟರಗಳನ್ನು ಪಡೆದುಕೊಂಡು ಕರಾರಿನಂತೆ ಅವರಿಗೆ ಕೊಡಬೇಕಾಗಿದ್ದ ₹35.30 ಲಕ್ಷ ಹಣವನ್ನು ಟ್ರ್ಯಾಕ್ಟರ್ ಮಾಲೀಕರಿಗೆ ಮರಳಿ ಕೊಡದೇ ಆರೋಪಿ ತಲೆಮರೆಸಿಕೊಂಡಿದ್ದ. ಈ ಕುರಿತು ಕ್ರಮ ಕೈಗೊಳ್ಳಬೇಕೆಂದು ಚಿಕ್ಕೋಡಿ ತಾಲ್ಲೂಕಿನ ಪಾಂಗೇರಿ(ಎ) ಗ್ರಾಮದ ರಮೇಶ ಸಿದಗೊಂಡಾ ಮಾಳಿ ಮತ್ತು ಇತರ 14 ಜನರು 2025ರ ನವೆಂಬರ್‌ನಲ್ಲಿ ಸ್ಥಳೀಯ ಬಸವೇಶ್ವರ ವೃತ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಆರೋಪಿಗಳು ಜಿಲ್ಲೆಯ ನಿಪ್ಪಾಣಿ, ಚಿಕ್ಕೋಡಿ, ರಾಯಬಾಗ ಹಾಗೂ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಕಾಗಲ ತಾಲ್ಲೂಕುಗಳಲ್ಲಿಯ ರೈತರನ್ನು ಬಾಡಿಗೆ ಕೊಡುವುದಾಗಿ ನಂಬಿಸಿ ಮಹಾರಾಷ್ಟ್ರದ ಪುಣೆ, ಸಾತಾರಾ, ನಾಶಿಕ ಜಿಲ್ಲೆಗಳ ವಿವಿಧ ಭಾಗಗಳಲ್ಲಿ ಮಾರಾಟ ಮಾಡಿದ್ದರು. ಇನ್ನುಳಿದ ಟ್ರ್ಯಾಕ್ಟರ್‌ಗಳಿಗಾಗಿ ತನಿಖೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಸ್ಥಳೀಯ ಸಿಪಿಐ ಬಿ.ಎಸ್. ತಳವಾರ ನೇತೃತ್ವದಲ್ಲಿ ಪಿಎಸ್ಐ ರಮೇಶ ಪವಾರ ಮತ್ತು ಸಿಬ್ಬಂದಿ ಸುಮಾರು 10 ದಿನಗಳವರೆಗೆ ಕಾರ್ಯಾಚರಣೆ ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.