ADVERTISEMENT

ನಿಪ್ಪಾಣಿ: ಸರ್ಕಾರಿ ಕಚೇರಿಗಳಿಗೆ ಬೇಕಿದೆ ಸ್ವಂತ ಕಟ್ಟಡ!

ತಾಲ್ಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಬೇಕಿದೆ ನಗರ ಸಮುದಾಯ ಆರೋಗ್ಯ ಕೇಂದ್ರ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 7:31 IST
Last Updated 2 ಮಾರ್ಚ್ 2026, 7:31 IST
ನಿಪ್ಪಾಣಿ ಪ್ರವಾಸಿ ಮಂದಿರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಹಶೀಲ್ದಾರ್‌ ಕಚೇರಿ 
ನಿಪ್ಪಾಣಿ ಪ್ರವಾಸಿ ಮಂದಿರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಹಶೀಲ್ದಾರ್‌ ಕಚೇರಿ    

ನಿಪ್ಪಾಣಿ: ಗಡಿಭಾಗದ ನಿಪ್ಪಾಣಿಯು ತಾಲ್ಲೂಕು ಕೇಂದ್ರವಾಗಿ ರಚನೆಯಾಗಿ ಎಂಟು ವರ್ಷವಾಗಿದೆ. ಆದರೆ, ಕೆಲವೇ ಇಲಾಖೆಗಳ ಕಚೇರಿಗಳಷ್ಟೇ ಕಾರ್ಯಾರಂಭ ಮಾಡಿವೆ. ವಿವಿಧ ಇಲಾಖೆಗಳ ಕಚೇರಿಗಳು ಇನ್ನೂ ಬಾರದ್ದರಿಂದ ಜನರ ಪರದಾಟ ಮುಂದುವರಿದಿದೆ. ಸರ್ಕಾರಿ ಕೆಲಸಗಳು, ದಾಖಲೆಗಾಗಿ ಹಳೇ ತಾಲ್ಲೂಕಾದ ಚಿಕ್ಕೋಡಿಗೆ ಅಲೆದಾಡಬೇಕಿದೆ.

ಈಗ ನಿಪ್ಪಾಣಿಯಲ್ಲಿ ಕೆಲಸ ಮಾಡುತ್ತಿರುವ ವಿವಿಧ ಇಲಾಖೆಗಳ ಕಚೇರಿಗಳಿಗೆ ಸ್ವಂತ ಕಟ್ಟಡ ಇಲ್ಲದ್ದರಿಂದ ಬಾಡಿಗೆ ಕಟ್ಟಡಗಳಲ್ಲೇ ಕಾರ್ಯನಿರ್ವಹಿಸುತ್ತಿವೆ. ಅಲ್ಲಿ ಹೇಳಿಕೊಳ್ಳುವಂಥ ಸೌಕರ್ಯಗಳಿಲ್ಲ.

ಮೂರು ದಶಕಗಳಿಂದ ಪ್ರವಾಸಿ ಮಂದಿರದಲ್ಲಿದ್ದ ಉಪ ತಹಶೀಲ್ದಾರ್ ಕಚೇರಿಯನ್ನು ತಹಶೀಲ್ದಾರ್‌ ಕಚೇರಿಯಾಗಿ ಮೇಲ್ದರ್ಜೆಗೇರಿಸಲಾಗಿದೆ. ಆದರೆ, ಸ್ವಂತ ಕಟ್ಟಡಕ್ಕೆ ಜಾಗ ಸಿಗದ ಕಾರಣ ಇನ್ನೂ ಪ್ರವಾಸಿ ಮಂದಿರದಲ್ಲೇ ಅದು ಕಾರ್ಯನಿರ್ವಹಿಸುತ್ತಿದೆ.

ADVERTISEMENT

60 ವರ್ಷಗಳ ಹಿಂದೆ ಆರಂಭಗೊಂಡ ಗ್ರಾಮ ಲೆಕ್ಕಾಧಿಕಾರಿ ಕಚೇರಿಗೆ ಪ್ರತ್ಯೇಕ ಕಟ್ಟಡವಿತ್ತು. ಆದರೆ, ಆ ಕಟ್ಟಡವನ್ನು ಮತ್ತೊಂದು ಸರ್ಕಾರಿ ಕಚೇರಿಗೆ ನೀಡಲಾಯಿತು. ಹಾಗಾಗಿ ಅದು ಈಗ ಲೋಕಮಾನ್ಯ ತಿಲಕ ಉದ್ಯಾನದ ಹಿಂಭಾಗದಲ್ಲಿರುವ ಹಳೆಯ ಶಾಲೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಕಟ್ಟಡದ ಚಾವಣಿ, ಗೋಡೆ ಕುಸಿಯುತ್ತಿದ್ದು, ಆತಂಕದಲ್ಲೇ ನೌಕರರು ಅಲ್ಲಿ ಕೆಲಸ ಮಾಡುತ್ತಿದ್ದಾರೆ. ವಿವಿಧ ಇಲಾಖೆ ಕಚೇರಿಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಿಲ್ಲ.

ತಾಲ್ಲೂಕು ಆಸ್ಪತ್ರೆಯಾಗುವುದು ಯಾವಾಗ?:
ನಿಪ್ಪಾಣಿಯಲ್ಲಿ ಹಲವು ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ನಗರ ಸಮುದಾಯ ಆರೋಗ್ಯ ಕೇಂದ್ರವನ್ನು ತಾಲ್ಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಬೇಕಿದೆ. ರೋಗಿಗಳ ಸಂಖ್ಯೆಗೆ ತಕ್ಕಂತೆ ಆರೋಗ್ಯ ಸೇವೆಗಳನ್ನು ಹೆಚ್ಚಿಸಬೇಕಿದೆ. 

ನಗರ ಹಾಗೂ ತಾಲ್ಲೂಕಿನ ವಿವಿಧ ಹಳ್ಳಿಗಳಲ್ಲಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಗಳು ಹಾದುಹೋಗಿವೆ. ಆದರೆ, ಅಪಘಾತದಲ್ಲಿ ಗಾಯಗೊಂಡವರಿಗೆ ತ್ವರಿತವಾಗಿ ಚಿಕಿತ್ಸೆ ಕೊಡಿಸಲು ನಿಪ್ಪಾಣಿಯಲ್ಲಿ ಟ್ರಾಮಾಕೇರ್‌ ಸೆಂಟರ್‌ ಇಲ್ಲ. ಹಾಗಾಗಿ ಅಪಘಾತಕ್ಕೀಡಾದವರನ್ನು ಚಿಕಿತ್ಸೆಗಾಗಿ  ಕೊಲ್ಹಾಪುರ ಅಥವಾ ಬೆಳಗಾವಿಯ ಆಸ್ಪತ್ರೆಗೆ  ಕಳುಹಿಸಲಾಗುತ್ತಿದೆ. ನಿಪ್ಪಾಣಿಯಲ್ಲಿ ತುರ್ತಾಗಿ ಟ್ರಾಮಾಕೇರ್‌ ಸೆಂಟರ್‌ ಆರಂಭಿಸಬೇಕಿದೆ.

ಜಿಲ್ಲಾ ಕೇಂದ್ರವಾಗುವ ಅರ್ಹತೆ ಹೊಂದಿರುವ ನಿಪ್ಪಾಣಿಗೆ ಅಗತ್ಯವಿರುವ ಸೌಲಭ್ಯಗಳನ್ನು ಈ ಬಜೆಟ್‌ನಲ್ಲಿ ಸರ್ಕಾರ ಘೋಷಿಸಬೇಕು
ಸಂಜಯ ಸೂರ್ಯವಂಶಿ ಸಾಮಾಜಿಕ ಕಾರ್ಯಕರ್ತ

ಬೇಕಿದೆ ಟೆಕ್ಸ್‌ಟೈಲ್‌ ಕ್ಲಸ್ಟರ್‌

ನಿಪ್ಪಾಣಿಯಲ್ಲಿ ಟೆಕ್ಸ್‌ಟೈಲ್‌ ಮತ್ತು ಬೆಳ್ಳಿ ಕ್ಲಸ್ಟರ್‌ ಆರಂಭಿಸಬೇಕು ಎಂಬ ಬೇಡಿಕೆ ದಶಕಗಳಿಂದಲೂ ಇದೆ. ಆದರೆ ಇಂದಿಗೂ ಬೇಡಿಕೆ ಈಡೇರದಿರುವುದು ಸ್ಥಳೀಯರ ನಿರಾಸೆಗೆ ಕಾರಣವಾಗಿದೆ. ಇಲ್ಲಿ ಪಾದರಕ್ಷೆ ಕ್ಲಸ್ಟರ್‌ ಆರಂಭಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದ್ದವು. ಆದರೆ ಈಗ ಆ ಯೋಜನೆಯೂ ಬಹುತೇಕ ಕುಂಠಿತಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.