ADVERTISEMENT

ಚಿಕ್ಕೋಡಿ | ರಾಜ್ಯ ಹೆದ್ದಾರಿ ನಿರ್ವಹಣೆಗೆ ಯಾರು ದಿಕ್ಕು?

ನಿರ್ಲಕ್ಷ್ಯಕ್ಕೆ ಒಳಗಾದ ನಿಪ್ಪಾಣಿ– ಮುಧೋಳ ರಾಜ್ಯ ಹೆದ್ದಾರಿ: ಪ್ರಯಾಣಿಕರು, ಪ್ರವಾಸಿಗರಿಗೆ ತಪ್ಪದ ಪಡಿಪಾಟಲು

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 2:46 IST
Last Updated 22 ಸೆಪ್ಟೆಂಬರ್ 2025, 2:46 IST
ನಿಪ್ಪಾಣಿ– ಮಧೋಳ ರಾಜ್ಯ ಹೆದ್ದಾರಿಯ ಸಮರ್ಪಕ ನಿರ್ವಹಣೆಯ ಕೊರತೆಯಿಂದ ಹೆದ್ದಾರಿಗೆ ಚಾಚಿಕೊಂಡಿರುವ ಮುಳ್ಳು ಕಂಟಿಗಳು  ‍ಪ್ರಜಾವಾಣಿ ಚಿತ್ರ
ನಿಪ್ಪಾಣಿ– ಮಧೋಳ ರಾಜ್ಯ ಹೆದ್ದಾರಿಯ ಸಮರ್ಪಕ ನಿರ್ವಹಣೆಯ ಕೊರತೆಯಿಂದ ಹೆದ್ದಾರಿಗೆ ಚಾಚಿಕೊಂಡಿರುವ ಮುಳ್ಳು ಕಂಟಿಗಳು  ‍ಪ್ರಜಾವಾಣಿ ಚಿತ್ರ   

ಚಿಕ್ಕೋಡಿ: ಜಿಲ್ಲೆಯಲ್ಲಿ ಹಾದು ಹೋಗಿರುವ 108 ಕಿ.ಮೀ ಉದ್ದದ ನಿಪ್ಪಾಣಿ- ಮುಧೋಳ ರಾಜ್ಯ ಹೆದ್ದಾರಿಯ ಸಮರ್ಪಕ ನಿರ್ವಹಣೆಯ ಕೊರತೆಯಿಂದಾಗಿ, ನಿತ್ಯ ಸಾವಿರಾರು ವಾಹನ ಸವಾರರು ಪರದಾಡುವಂತಾಗಿದೆ. ಹೆದ್ದಾರಿ ನಿರ್ಮಾಣ ಕಾಮಗಾರಿ ಗುತ್ತಿಗೆ ಪಡೆದ ಕಂಪನಿಯ ನಿರ್ವಹಣೆಯ ಅವಧಿ 2024ರ ಡಿಸೆಂಬರ್‌ನಲ್ಲಿಯೇ ಕೊನೆಗೊಂಡಿದೆ. ಇದರಿಂದ ಹೆದ್ದಾರಿ ತುಂಬ ಹಲವು ಸಮಸ್ಯೆಗಳು ತಾಂಡವಾಡುತ್ತಿದೆ.

ರಾಜ್ಯ ಲೋಕೋಪಯೋಗಿ ಇಲಾಖೆ ಅಡಿಯ ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ (ಕೆ-ಶಿಪ್) ಮುಖಾಂತರ ವಿಶ್ವಬ್ಯಾಂಕ್ ಸಹಾಯದೊಂದಿಗೆ ₹317.60 ಕೋಟಿ ವೆಚ್ಚದಲ್ಲಿ ನಿಪ್ಪಾಣಿ– ಮುಧೋಳ ರಾಜ್ಯ ಹೆದ್ದಾರಿ ನಿರ್ಮಿಸಲಾಗಿದೆ. 2014ರ ಡಿಸೆಂಬರ್‌ನಲ್ಲಿ ಆರಂಭಗೊಂಡ ಹೆದ್ದಾರಿ ಕಾಮಗಾರಿ 2016ರ ಡಿಸೆಂಬರ್‌ನಲ್ಲಿ ಪೂರ್ಣಗೊಂಡಿದೆ. ಹೆದ್ದಾರಿ ನಿರ್ಮಾಣ ಹಾಗೂ ನಿರ್ವಹಣೆಯ ಗುತ್ತಿಗೆ ಪಡೆದ ಕಂಪನಿಯ ಅವಧಿ ಪೂರ್ಣಗೊಂಡು 8 ತಿಂಗಳು ಕಳೆದಿವೆ.

ಹೀಗಾಗಿ ಈ ಹೆದ್ದಾರಿಯಲ್ಲಿ ಎಲ್ಲೆಂದರಲ್ಲಿ ತಗ್ಗು ಗುಂಡಿಗಳು ಬಿದ್ದಿದ್ದು, ಇಕ್ಕೆಲಗಳಲ್ಲಿ ಮುಳ್ಳು ಕಂಟಿಗಳು ಬೆಳೆದು ರಸ್ತೆಗೆ ಚಾಚಿಕೊಂಡಿವೆ. ವಾಹನ ಸವಾರರಿಗೆ ಕಿರಿಕಿರಿಯನ್ನುಂಟು ಮಾಡುತ್ತಿವೆ. ಹಲವು ಕಡೆಗೆ ಹೆದ್ದಾರಿಯ ಸೂಚನಾ ಫಲಕಗಳ ಬರಹ, ಚಿಹ್ನೆ ಅಳಸಿ ಹೋಗಿವೆ. ರೇಡಿಯಂ ಕಿತ್ತು ಹೋಗಿವೆ. ಹೆದ್ದಾರಿಗೆ ಹೊಂದಿಕೊಂಡಂತೆ ಹಲವು ಕಡೆಗೆ ಗುಂಡಿಗಳು ಬದ್ದಿವೆ. ಹೀಗೆ ಹತ್ತು ಹಲವು ಸಮಸ್ಯೆಗಳಿಂದ ಬಳಲುತ್ತಿದ್ದರೂ ಇದರ ನಿರ್ವಹಣೆಯ ಜವಾಬ್ದಾರಿ ಯಾರದು ಎಂಬ ಪ್ರಶ್ನೆ ಸಾರ್ವಜನಿಕರದಾಗಿದೆ.

ADVERTISEMENT

ಟೋಲ್ ಸಂಗ್ರಹಕ್ಕೆ ತಡೆ ಇಲ್ಲ: ವಿಶ್ವಬ್ಯಾಂಕ್ ಹಾಗೂ ಎಡಿಬಿಯಿಂದ ಸಾಲ ಪಡೆದುಕೊಂಡು ಹೆದ್ದಾರಿ ನಿರ್ಮಾಣ ಮಾಡಿದ್ದರಿಂದ ರಸ್ತೆಗಳಲ್ಲಿ ಶುಲ್ಕ ಸಂಗ್ರಹ ಮಾಡಲು ರಾಜ್ಯ ಸರ್ಕಾರ 2017ರಲ್ಲಿ ನಿರ್ಧರಿಸಿತು. ಹೀಗಾಗಿ 108 ಕಿ.ಮೀ ಉದ್ದದ ಹೆದ್ದಾರಿಯಲ್ಲಿ ತಾಲ್ಲೂಕಿನ ಚಿಂಚಣಿ ಹಾಗೂ ಕಬ್ಬೂರ ಬಳಿ ಎರಡು ಟೋಲ್ ನಾಕಾ ನಿರ್ಮಾಣ ಮಾಡಿ ಶುಲ್ಕ ಸಂಗ್ರಹಿಸಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಗಿಂತಲೂ ರಾಜ್ಯ ಹೆದ್ದಾರಿಗಳಲ್ಲಿ ಹೆಚ್ಚಿನ ಶುಲ್ಕ ಸಂಗ್ರಹ ಮಾಡಲಾಗುತ್ತಿದ್ದರೂ ನಿರ್ವಹಣೆ ಮಾತ್ರ ತೀವ್ರ ಕಳಪೆಯಾಗಿದೆ.

ಗುತ್ತಿಗೆ ಪಡೆದ ಕಂಪನಿ ನಿರ್ವಹಣೆಯ ಅವಧಿ ಮುಕ್ತಾಯಗೊಂಡಿದ್ದರಿಂದ ನಿಪ್ಪಾಣಿ– ಮುಧೋಳ ರಾಜ್ಯ ಹೆದ್ದಾರಿ ನಿರ್ವಹಣೆಯ ಜವಾಬ್ದಾರಿ ಲೋಕೋಪಯೋಗಿ ಇಲಾಖೆಯದ್ದಾಗಿದೆ. ಇಲಾಖೆಯು ಕೂಡಲೇ ತಾನಾಗಲೀ, ಬೇರೆ ಯಾವುದಾದರೂ ಕಂಪನಿಗೆ ಹೆದ್ದಾರಿ ನಿರ್ವಹಣೆಯ ಜವಾಬ್ದಾರಿ ವಹಿಸಿದ್ದೇ ಆದಲ್ಲಿ ಸುಗಮ ಸಂಚಾರಕ್ಕೆ ಅನುಕೂಲವಾಗುತ್ತದೆ. ಇಲ್ಲದೇ ಹೋದಲ್ಲಿ ಒಂದೂವರೆ ದಶಕದ ಹಿಂದೆ ನಿಪ್ಪಾಣಿ-ಮುಧೋಳ ಹೆದ್ದಾರಿಯಲ್ಲಿ ಸಂಚರಿಸಲು ಹೇಗೆಲ್ಲ ತೊಂದರೆ ಪಡುತ್ತಿದರೋ ಅದೇ ಪರಿಸ್ಥಿತಿ ಮರುಕಳಿಸಿದರೆ ಆಶ್ಚರ್ಯ ಪಡಬೇಕಿಲ್ಲ ಎನ್ನುವುದು ಜನರ ದೂರು.

ಚಿಕ್ಕೋಡಿ ತಾಲ್ಲೂಕಿನ ನಾಗರಮುನ್ನೋಳಿ ಗ್ರಾಮದ ಬಳಿ ನಿಪ್ಪಾಣಿ– ಮುಧೋಳ ಹೆದ್ದಾರಿಯ ಸೂಚನಾ ಫಲಕಗಳು ಗಿಡದ ಟೊಂಗೆಗಳಲ್ಲಿ ಮುಚ್ಚಿಕೊಂಡಿವೆ  ಪ್ರಜಾವಾಣಿ ಚಿತ್ರ
ಚಿಕ್ಕೋಡಿ ತಾಲ್ಲೂಕಿನ ಕಬ್ಬೂರ ಪಟ್ಟಣದ ಬಳಿಯಲ್ಲಿ ಸಿಬಿಸಿ ಕಾಲುವೆಯ ಮೇಲೆ ಇಕ್ಕಟ್ಟಾದ ಸೇತುವೆಯ ಮೇಲಿಂದ ವಾಹನಗಳು ಸಂಚರಿಸುತ್ತಿರುವುದು  ಪ್ರಜಾವಾಣಿ ಚಿತ್ರ
ಚಿಕ್ಕೋಡಿ ತಾಲ್ಲೂಕಿನ ಕಬ್ಬೂರ ಪಟ್ಟಣದ ಬಳಿ ನಿಪ್ಪಾಣಿ– ಮುಧೋಳ ಹೆದ್ದಾರಿಯಲ್ಲಿ ಟೋಲ್ ಸಂಗ್ರಹಿಸುತ್ತಿರುವುದು  ಪ್ರಜಾವಾಣಿ ಚಿತ್ರ

ಒಂದೇ ತಾಲ್ಲೂಕಿನಲ್ಲಿ ಎರಡೂ ಟೋಲ್‌!

ನಿಪ್ಪಾಣಿ– ಮುಧೋಳ ರಾಜ್ಯ ಹೆದ್ದಾರಿಯು ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳ ವ್ಯಾಪ್ತಿಯಲ್ಲಿ ಹಾದು ಹೋಗಿದೆ. ಎರಡೂ ಜಿಲ್ಲೆಯಲ್ಲಿ ತಲಾ ಒಂದೊಂದು ಟೋಲ್ ನಾಕಾ ತೆರೆದರೆ ಒಂದೇ ಜಿಲ್ಲೆಯ ಜನರಿಗೆ ಟೋಲ್ ಹೊರೆಯಾಗುತ್ತಿರಲಿಲ್ಲ. ಆದರೆ ಎರಡೂ ಟೋಲ್ ನಾಕಾಗಳನ್ನೂ ಬೆಳಗಾವಿ ಜಿಲ್ಲೆಯಲ್ಲಿಯೇ; ಅದೂ ಚಿಕ್ಕೋಡಿ ತಾಲ್ಲೂಕು ವ್ಯಾಪ್ತಿಯಲ್ಲಿಯೇ ತೆರೆದಿದ್ದರಿಂದ ಸ್ಥಳೀಯ ವಾಹನ ಸವಾರರ ಜೇಬಿಗೆ ಪ್ರತಿನಿತ್ಯ ಕತ್ತರಿ ಬೀಳುತ್ತಿದೆ. ಮಹಾರಾಷ್ಟ್ರದಿಂದ ಇದೇ ಹೆದ್ದಾರಿಗುಂಟ ಸವದತ್ತಿ ಯಲ್ಲಮ್ಮ ಹಾಗೂ ಚಿಂಚಣಿ ಮಾಯಕ್ಕಾದೇವಿಗೆ ಸಹಸ್ರಾರು ಭಕ್ತರು ಆಗಮಿಸುತ್ತಿದ್ದು ಅವರಿಗೆ ತೊಂದರೆಯಾಗುತ್ತಿದೆ. ಅಲ್ಲದೇ ಸ್ಥಳೀಯವಾಗಿ ತಿರುಗಾಡುವ ವಾಹನ ಸವಾರರಿಗೂ ರಸ್ತೆ ಶುಲ್ಕವನ್ನು ದುಪ್ಪಟ್ಟು ನೀಡಬೇಕಾಗಿದೆ. ಒಂದೆಡೆ ಅಪಾರ ಪ್ರಮಾಣದಲ್ಲಿ ರಸ್ತೆ ಶುಲ್ಕ ಸಂಗ್ರಹ ಮಾಡುತ್ತಿದ್ದು ಇನ್ನೊಂದೆಡೆ ಹೆದ್ದಾರಿ ನಿರ್ವಹಣೆ ಮಾಡದೇ ನಿರ್ಲಕ್ಷ್ಯ ಮಾಡಿದ್ದರಿಂದ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಜನರು ಹಿಡಿಶಾಪ ಹಾಕುತ್ತಿದ್ದಾರೆ.

ಇವರೇನಂತಾರೆ?

ಚಿಕ್ಕೋಡಿ ಪಟ್ಟಣದಲ್ಲಿ ನಿಪ್ಪಾಣಿ– ಮುಧೋಳ ಹಾಗೂ ಸಂಕೇಶ್ವರ– ಜೇವರ್ಗಿ ಹೆದ್ದಾರಿಗಳು ಹಾದು ಹೋಗಿದ್ದರೂ ಪಟ್ಟಣದ ವ್ಯಾಪ್ತಿಯಲ್ಲಿ ಹೆದ್ದಾರಿಯ ವಿಸ್ತರಣೆ ಇಲ್ಲದ್ದರಿಂದ ಹೆದ್ದಾರಿಯಿಂದ ತೊಂದರೆಯೇ ಹೆಚ್ಚಾಗಿದೆ. ಹೀಗಾಗಿ ಸಂಚಾರ ದಟ್ಟಣೆ ಹೆಚ್ಚಿದೆ

–ರಾಜೇಂದ್ರ ಪಾಟೀಲ ಚಿಂಚಣಿ ನಿವಾಸಿ

10ರಿಂದ 15 ವರ್ಷಗಳ ಹಿಂದೆ ನಿಪ್ಪಾಣಿ– ಮುಧೋಳ ಹೆದ್ದಾರಿಯಲ್ಲಿ ಹಾದು ಹೋಗಲು ಜನರು ಭಯ ಪಡುವಂತಿತ್ತು. ಇದೀಗ ಹೆದ್ದಾರಿ ಉತ್ತಮವಾಗಿದ್ದರೂ ನಿರ್ವಹಣೆ ಮಾತ್ರ ಕಳಪೆಯಿಂದ ಕೂಡಿದೆ. ಕೂಡಲೇ ಹೆದ್ದಾರಿ ನಿರ್ವಹಣೆಯ ಜವಾಬ್ದಾರಿಯನ್ನು ಲೋಕೋಪಯೋಗಿ ಇಲಾಖೆ ಸೂಕ್ತ ರೀತಿಯಿಂದ ನಿರ್ವಹಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು.

–ಚಿದಾನಂದ ಅಥಣಿ ವಿಜಯನಗರ ನಿವಾಸಿ

ಚಿಕ್ಕೋಡಿ ತಾಲ್ಲೂಕು ವ್ಯಾಪ್ತಿಯಲ್ಲಿ ಎರಡು ಟೋಲ್ ನಾಕಾಗಳಿದ್ದರೂ ಟೋಲ್ ನಾಕಾ ಬಳಿಯಲ್ಲಿಯೇ ಹೆದ್ದಾರಿ ನಿರ್ವಹಣೆ ಸಮರ್ಪಕವಾಗಿಲ್ಲ. ವಾಹನ ಸವಾರರು ಶುಲ್ಕ ದುಪ್ಪಟ್ಟು ನೀಡಿದರೂ ಯಾವುದೇ ಪ್ರಯೋಜವಾಗುತ್ತಿಲ್ಲ. ಒಂದು ಟೋಲ್ ನಾಕಾವನ್ನು ಬಾಗಲಕೋಟೆ ಜಿಲ್ಲಾ ವ್ಯಾಪ್ತಿಗೆ ಸ್ಥಳಾಂತರಿಸಬೇಕು.

–ಸುಧಾಕರ ಪಾಟೀಲ ವಕೀಲ ಕಬ್ಬೂರ

ಪ್ರತಿದಿನ ವಾಹನ ಸವಾರರಿಂದ ಲಕ್ಷಾಂತರ ಹಣ ಸಂಗ್ರಹ ಮಾಡಲಾಗುತ್ತಿದ್ದರೂ ಕಳೆದ ಎಂಟು ತಿಂಗಳಿನಿಂದ ಹೆದ್ದಾರಿಯ ಸಮರ್ಪಕ ನಿರ್ವಹಣೆ ಇಲ್ಲದಿರುವುದು ನಾಚಿಕೆಗೇಡಿನ ಸಂಗತಿ. ಕೂಡಲೇ ಲೋಕೋಪಯೋಗಿ ಇಲಾಖೆ ಈ ಕುರಿತು ಕ್ರಮ ಕೈಗೊಳ್ಳಬೇಕು.

–ತ್ಯಾಗರಾಜ ಕದಂ ಕಂಕಣವಾಡಿ ನಿವಾಸಿ

ಲೋಕೋಪಯೋಗಿ ಇಲಾಖೆಯ ವತಿಯಿಂದ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದ್ದು ಕೆಲವೇ ದಿನಗಳಲ್ಲಿ ನಿಪ್ಪಾಣಿ– ಮುಧೋಳ ರಾಜ್ಯ ಹೆದ್ದಾರಿ ನಿರ್ವಹಣೆಯನ್ನು ಬೇರೊಂದು ಕಂಪನಿಗೆ ಗುತ್ತಿಗೆ ನೀಡಲು ನಿರ್ಧರಿಸಲಾಗಿದೆ.

–ಎಸ್.ಕೆ. ಎಂಟೆತ್ತಿನವರ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಲೋಕೋಪಯೋಗಿ ಇಲಾಖೆ ಚಿಕ್ಕೋಡಿ

ಅಗತ್ಯವಿದೆ ಬೃಹತ್ ಸೇತುವೆ

ಕಬ್ಬೂರು ಪಟ್ಟಣ ಸಮೀಪದ ಟೋಲ್ ನಾಕಾ ಬಳಿಯಲ್ಲಿ ಚಿಕ್ಕೋಡಿ ಉಪ ಕಾಲುವೆಯ (ಸಿಬಿಸಿ) ಹೆದ್ದಾರಿ ನಿರ್ಮಾಣ ಮಾಡಿದ್ದರೂ ಸೇತುವೆ ಇಕ್ಕಟ್ಟಾಗಿದೆ. ಸೇತುವೆಯ ಮೇಲೆ ಬೃಹತ್ ಗುಂಡಿ ಬಿದ್ದಿದ್ದು ವಾಹನಗಳು ಆಯತಪ್ಪಿ ಕಾಲುವೆಯ ಪಾಲಾಗುವ ಸಾಧ್ಯತೆಗಳಿವೆ. ಅನೇಕಬಾರಿ ಅಪಘಾತಗಳು ಸಂಭವಿಸಿದ ಉದಾಹರಣೆಗಳಿದ್ದು ಕೂಡಲೇ ಇಲ್ಲೊಂದು ಬೃಹತ್ ಸೇತುವೆ ನಿರ್ಮಾಣ ಮಾಡಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಹಾಗೆಯೇ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.