ADVERTISEMENT

ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ ಇಂಡೋನೇಷ್ಯಾದವರು ಬೆಳಗಾವಿಯಲ್ಲಿ!

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2020, 7:49 IST
Last Updated 1 ಏಪ್ರಿಲ್ 2020, 7:49 IST
ಅಧಿಕಾರಿಗಳು ಮಾಹಿತಿ ಪಡೆಯುತ್ತಿರುವುದು
ಅಧಿಕಾರಿಗಳು ಮಾಹಿತಿ ಪಡೆಯುತ್ತಿರುವುದು   

ಬೆಳಗಾವಿ: ದಕ್ಷಿಣ ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿರುವ ತಬ್ಲೀಗ್ ಜಮಾತ್ ಕೇಂದ್ರ ಕಚೇರಿಯಲ್ಲಿ ನಡೆದಿದ್ದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಇಂಡೋನೇಷ್ಯಾ ತಬ್ಲೀಗ್ ಜಮಾತ್ ನ 10 ಮಂದಿ ಧರ್ಮ ಪ್ರಚಾರಕರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಇಲ್ಲಿನ ಮಸೀದಿಯೊಂದರಲ್ಲಿ ಕ್ವಾರಂಟೈನ್ ಮಾಡಲಾಗಿದೆ.

ಅವರು ನಿಜಾಮುದ್ದೀಮ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡ ಬಳಿಕ ಧಾರ್ಮಿಕ ಮುಖಂಡರ ಆದೇಶದ ಮೇರೆಗೆ ಬೆಂಗಳೂರಿಗೆ, ನಂತರ ಬೆಳಗಾವಿಗೆ ಬಂದು ಧರ್ಮ ಪ್ರಚಾರ ಕೈಗೊಂಡಿದ್ದರು. ಲಾಕ್ ಡೌನ್ ಘೋಷಣೆಯಾದ ಸಂದರ್ಭದಲ್ಲಿ ಇವರೆಲ್ಲರೂ ಇಲ್ಲೇ ಇದ್ದರು. ನಂತರ ಅವರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

'ಅವರಲ್ಲಿ ಕೊರೊನಾ ವೈರಾಣು ಸೋಂಕು ಲಕ್ಷಣಗಳು ಕಂಡುಬಂದಿಲ್ಲ. ಆರೋಗ್ಯವಾಗಿದ್ದಾರೆ. ಆ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಇತರ ಪ್ರದೇಶದ ಕೆಲವರಲ್ಲಿ ಸೋಂಕು ಕಾಣಿಸಿಕೊಂಡಿದ್ದರಿಂದಾಗಿ ಮುಂಜಾಗ್ರತಾ ಕ್ರಮವಾಗಿ ಇವರ ಗಂಟಲು ದ್ರವದ ಮಾದರಿಗಳನ್ನೂ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಪರೀಕ್ಷಾ ವರದಿ ಬಂದಿಲ್ಲ' ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಬಿ.ಎನ್. ತುಕ್ಕಾರ ಸ್ಪಷ್ಟಪಡಿಸಿದರು.

ADVERTISEMENT

ಅವರ ಪಾಸ್ ಪೋರ್ಟ್‌ಗಳನ್ನು ಜಿಲ್ಲಾಡಳಿತ ವಶಕ್ಕೆ ಪಡೆದಿದೆ ಎಂದು ಮೂಲಗಳು ತಿಳಿಸಿವೆ.

ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಬೆಳಗಾವಿಯ ಇನ್ನೂ ಅನೇಕರು ಭಾಗವಹಿಸಿರುವ ಸಾಧ್ಯತೆ ಇದೆ. ಬೈಲಹೊಂಗಲ, ಹುಕ್ಕೇರಿ ಸೇರಿದಂತೆ ‌ವಿವಿಧ ತಾಲ್ಲೂಕುಗಳ ತಬ್ಲೀಗ್ ಜಮಾತ್ ಪರಿಪಾಲಕರು ಹತ್ತು ದಿನಗಳ ಸೇವೆಗೆಂದು ದೆಹಲಿಗೆ ಹೋಗುವ ಪರಿಪಾಠವಿದೆ. ಆ ಸಭೆಯಲ್ಲಿ ಪಾಲ್ಗೊಂಡಿದ್ದ ಸೇವಕರ ಕುರಿತ ಮಾಹಿತಿಯನ್ನು ಜಿಲ್ಲಾಡಳಿತ ಕಲೆ ಹಾಕುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.