ADVERTISEMENT

ಈ ಸಾರಿ ಗಣೇಶೋತ್ಸವದಲ್ಲಿ ಬೆಳಗಾವಿ ಜಿಲ್ಲೆಯಾದ್ಯಂತ ಡಿ.ಜೆ ಬಳಕೆ ನಿಷೇಧ

​ಪ್ರಜಾವಾಣಿ ವಾರ್ತೆ
Published 25 ಜುಲೈ 2022, 15:46 IST
Last Updated 25 ಜುಲೈ 2022, 15:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಳಗಾವಿ: ‘ಆಗಸ್ಟ್ 31ರಿಂದ ಸೆಪ್ಟೆಂಬರ್ 9 ರವರೆಗೆ ನಗರ ಹಾಗೂ ಜಿಲ್ಲೆಯಲ್ಲಿ ನಡೆಯುವ ಗಣೇಶೋತ್ಸವ ಸಂದರ್ಭದಲ್ಲಿ ಡಿ.ಜೆ ಬಳಕೆ ಮಾಡುವಂತಿಲ್ಲ’ ಎಂದು ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ತಾಕೀತು ಮಾಡಿದರು.

ಗಣೇಶೋತ್ಸವ ಅಂಗವಾಗಿ ನಗರದಲ್ಲಿ ಸೋಮವಾರ ನಡೆದ ಗಣೇಶೋತ್ಸವ ಮಂಡಳಿಗಳ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ‘ಸುಪ್ರೀಂ ಕೋರ್ಟ್‌ ನಿರ್ದೇಶನ ಹಾಗೂ ರಾಜ್ಯ ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರವೇ ಉತ್ಸವಕ್ಕೆ ಅವಕಾಶ ಕಲ್ಪಿಸಲಾಗುವುದು’ ಎಂದರು.

‘ಉತ್ಸವದಲ್ಲಿ ಹಿಂದೆ ದೊಡ್ಡ ಶಬ್ದದ ಡಿ.ಜೆ ಬಳಸಲಾಗುತ್ತಿತ್ತು. ಆದರೆ, ನಿಗದಿತ ಪ್ರಮಾಣದ ಶಬ್ದ ಹೊರಸೂಸುವ ಧ್ವನಿವರ್ಧಕ ಬಳಕೆಗೆ ಮಾತ್ರ ಸದ್ಯಕ್ಕೆ ಅವಕಾಶವಿದೆ. ಬೆಳಿಗ್ಗೆ 6ರಿಂದ ರಾತ್ರಿ 10 ರವರೆಗೆ ಧ್ವನಿವರ್ಧಕ ಬಳಕೆಗೆ ನಿಯಮಾವಳಿ ಪ್ರಕಾರ ಅನುಮತಿ ನೀಡಲಾಗುವುದು. ಏಕಗವಾಕ್ಷಿ ವ್ಯವಸ್ಥೆ ಮೂಲಕ ಆಯಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅನುಮತಿ ನೀಡಲಾಗುವುದು’ ಎಂದರು.

ADVERTISEMENT

‘ಪೊಲೀಸ್, ಹೆಸ್ಕಾಂ, ಮಾಲಿನ್ಯ ನಿಯಂತ್ರಣ ಮಂಡಳಿ, ಪಾಲಿಕೆ ಸೇರಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳು ಒಂದೇ ಕಡೆ ಲಭ್ಯವಿದ್ದು, ಅಗತ್ಯ ಅನುಮತಿಯನ್ನು ನೀಡಲಿದ್ದಾರೆ. ಡಿ.ಜೆ, ಧ್ವನಿವರ್ಧಕಗಳ ಬಳಕೆ, ‍ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ನ ಮೂರ್ತಿ ಬಳಕೆ ಸೇರಿದಂತೆ ವಿವಿಧ ವಿಷಯಗಳ ಮೇಲೆ ಇರುವ ನಿರ್ಬಂಧಗಳನ್ನು ಪಾಲಿಸಲೇಬೇಕು’ ಎಂದು ತಾಕೀತು ಮಾಡಿದರು.

ಪಿಒಪಿ ಮೂರ್ತಿ ನಿಷೇಧ

‘ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಪಿಒಪಿ ಮೂರ್ತಿಗಳನ್ನು ಪ್ರತಿಷ್ಠಾಪನೆಗೆ ಅವಕಾಶ ನೀಡುವುದಿಲ್ಲ. ಯಾವುದೇ ಉತ್ಸವ ಮಂಡಳಿ ಇದರಿಂದ ಮಾಡಿದ ಮೂರ್ತಿ ಪ್ರತಿಷ್ಠಾಪಿಸಬಾರದು. ಇಂಥ ಮೂರ್ತಿಗಳ ತಯಾರಕರಿಗೆ ಮುಂಚಿತವಾಗಿಯೇ ಮಾಹಿತಿ ನೀಡಬೇಕು’ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಉಪ ಪರಿಸರ ಅಧಿಕಾರಿ ರಾಜೇಶ್ವರಿ ಕುಳ್ಳಿ ತಿಳಿಸಿದರು.

‘ಈ ನಿಯಮಗಳು ಗಣೇಶೋತ್ಸವಕ್ಕೆ ಮಾತ್ರ ಸೀಮಿತವಲ್ಲ. ಎಲ್ಲ ಉತ್ಸವಗಳಿಗೂ ಅನ್ವಯಿಸುತ್ತವೆ. ವಾಯು ಮಾಲಿನ್ಯ, ಶಬ್ದ ಮಾಲಿನ್ಯ ಹಾಗೂ ಜಲಮಾಲಿನ್ಯದ ಗಂಭೀರತೆಯನ್ನು ಪರಿಗಣಿಸಿರುವ ನ್ಯಾಯಾಲಯ ಮತ್ತು ಸರ್ಕಾರ, ಮಾಲಿನ್ಯ ತಡೆಗಟ್ಟುವುದಕ್ಕಾಗಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತಿದೆ. ಎಲ್ಲರೂ ಸಹಕರಿಸಬೇಕು’ ಎಂದು ನಗರ ಪೊಲೀಸ್‌ ಕಮಿಷನರ್‌ ಡಾ.ಎಂ.ಬಿ. ಬೋರಲಿಂಗಯ್ಯ ತಿಳಿಸಿದರು.

378 ಸ್ಥಳಗಳಲ್ಲಿ ಮೂರ್ತಿ ಪ್ರತಿಷ್ಠಾಪನೆ

‘ನಗರದಲ್ಲಿ 378 ಮಂಡಳಿಗಳು ಗಣೇಶ ಪ್ರತಿಷ್ಠಾಪಿಸುತ್ತಿವೆ. ಕೋವಿಡ್ ಸಂದರ್ಭದಲ್ಲಿ ಸರ್ಕಾರದ ಮಾರ್ಗಸೂಚಿ ಪ್ರಕಾರ ಉತ್ಸವ ಆಚರಿಸಲಾಗಿದೆ. ನಗರದ ಎಲ್ಲ ಮಂಡಳಿಗಳ ಅಧ್ಯಕ್ಷರು, ಪದಾಧಿಕಾರಿಗಳ ಜತೆ ಚರ್ಚಿಸಿ ಬಳಿಕ ಜಿಲ್ಲಾಡಳಿತದ ಜತೆಗೆ ಮತ್ತೊಂದು ಸುತ್ತಿನ ಸಭೆ ನಡೆಸಲಾಗುವುದು’ ಎಂದು ಗಣೇಶೋತ್ಸವ ಮಂಡಳಿಗಳ ಮುಖಂಡ ವಿಕಾಸ ಕಲಘಟಗಿ ಹೇಳಿದರು.

ಗಣೇಶ ಮೂರ್ತಿ ವಿಸರ್ಜನೆಗೆ ಹೊಂಡಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಿಸಬೇಕು, ರಸ್ತೆ ದುರಸ್ತಿ, ವಿದ್ಯುತ್ ಕಂಬಗಳ ದುರಸ್ತಿ ಮಾಡಬೇಕು ಎಂದು ಕೋರಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ, ಉಪ ಪೊಲೀಸ್ ಆಯುಕ್ತ ರವೀಂದ್ರ ಗಡಾದಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹಾನಿಂಗ ನಂದಗಾವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.