
ಬೆಳಗಾವಿ: 'ರಾಜಕೀಯ ಕಾರಣಕ್ಕಾಗಿ ಯಾವುದೇ ಮೀಟಿಂಗ್ ಆಗಿಲ್ಲ. ಪಕ್ಷದಲ್ಲಿ ಯಾವುದೇ ಗೊಂದಲ ಕೂಡ ಇಲ್ಲ ಎಂದು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಹೈಕಮಾಂಡ್ ಹೇಳಿದಂತೆ ಕೇಳುತ್ತೇವೆ ಎಂದಿದ್ದಾರೆ. ಸುಮ್ಮನೇ ಮಾಧ್ಯಮಗಳು ಗೊಂದಲ ಸೃಷ್ಟಿಸುತ್ತಿವೆ' ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.
ನಗರದಲ್ಲಿ ಶುಕ್ರವಾರ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು,
'ಕಾಂಗ್ರೆಸ್ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ಪಕ್ಷ. ಇಲ್ಲಿ ವಾಕ್ ಸ್ವಾತಂತ್ರ್ಯ ಇದೆ. ಆದರೆ, ಬಿಜೆಪಿಯಲ್ಲಿ ಸರ್ವಾಧಿಕಾರಿ ವ್ಯವಸ್ಥೆ ಇದೆ. ಯಾರಾದರೂ ತುಟಿ ಪಿಟಕ್ ಎಂದರೆ ಮುಂದೆ ಕ್ರಮ ಆಗುತ್ತದೆ. ನಮ್ಮಲ್ಲಿ ಆಂತರಿಕ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ. ಹಾಗಾಗಿ, ಇಲ್ಲಿ ಮಾತನಾಡುತ್ತಾರೆ' ಎಂದರು.
'ಅವರು ಮಾಡಿದರೆ ಪವಾಡ, ನಾವು ಮಾಡಿದರೆ ವಾಗ್ವಾದವೇ? ಎಂಬ ಇಕ್ಬಾಲ್ ಅನ್ಸಾರಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, 'ಆ ರೀತಿ ಏನೂ ಇಲ್ಲ. ನಮ್ಮ ಸರ್ಕಾರ ಯಾವತ್ತೂ ಜನಪರ ಮತ್ತು ಅಭಿವೃದ್ಧಿ ಪರವಾಗಿ ಆಲೋಚನೆ ಮಾಡುತ್ತದೆ. ಯಾವುದೇ ಕೆಲಸ ನಿಂತಿಲ್ಲ. ಬಹಳಷ್ಟು ಶಾಸಕರು ಮಾತನಾಡಿದ್ದಾರೆ. ಹಾಗಂತ ಎಲ್ಲರ ಮೇಲೂ ಕ್ರಮ ತೆಗೆದುಕೊಂಡಿದ್ದಿವಾ? ನಮ್ಮದು ಶಿಸ್ತು ಮತ್ತು ಪ್ರಜಾಪ್ರಭುತ್ವದ ವ್ಯವಸ್ಥೆ ಹೊಂದಿರುವ ಪಕ್ಷ' ಎಂದು ಹೇಳಿಸರು.
ಉತ್ತರ ಕರ್ನಾಟ ಪ್ರತ್ಯೇಕ ರಾಜ್ಯ ವಿಚಾರಕ್ಕೆ ಉತ್ತರಿಸಿದ ಅವರು, 'ನಮ್ಮ ಹಿರಿಯರು ಬಹಳ ಆಲೋಚಿಸಿ ಭಾಷಾವಾರು ಪ್ರಾಂತ ರಚನೆ ಮಾಡಿದ್ದಾರೆ. ಕನ್ನಡ ಭಾಷೆ ಮಾತನಾಡುವರೆಲ್ಲಾ ಒಂದೇ ಸೂರಿನಡಿ ಇರಬೇಕು ಎಂಬ ಸದುದ್ದೇಶದಿಂದ ಈಗಾಗಲೇ ಚೆಲುವ ಕನ್ನಡನಾಡು ಮಾಡಿ ಆಗಿದೆ. ಉತ್ತರ ಕರ್ನಾಟಕದಲ್ಲಿ ಇನ್ನು ಹೆಚ್ಚಿನ ಅಭಿವೃದ್ಧಿ ಆಗಬೇಕು ಎನ್ನುವುದು ನಿಜ' ಎಂದರು.
ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸಚಿವರಾಗಿದ್ದಾಗ 371 ಜೆ ಜಾರಿಗೆ ತಂದರು. ಅದೇರೀತಿ ಉತ್ತರಕರ್ನಾಟಕಕ್ಕೆ ಆಧ್ಯತೆ ನೀಡುವುದಕ್ಕಾಗಿಯೇ ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ಕಟ್ಟಿ, ಪ್ರತಿವರ್ಷ ಅಧಿವೇಶನ ನಡೆಸುತ್ತಿರುವುದು ಎಂದು ಡಾ.ಶರಣಪ್ರಕಾಶ ಪಾಟೀಲ ಹೇಳಿದರು.
ಕರ್ನಾಟಕ ಅತೀ ಹೆಚ್ಚು ವೈದ್ಯಕೀಯ ಕಾಲೇಜುಗಳನ್ನು ಹೊಂದಿರುವ ರಾಜ್ಯ. ಕಾಂಗ್ರೆಸ್ ಯಾವಾಗೆಲ್ಲಾ ಅಧಿಕಾರಕ್ಕೆ ಬಂದಿದೆ ಆಗ ಉತ್ತರಕರ್ನಾಟಕಕ್ಕೆ ಆಧ್ಯತೆ ನೀಡಿದೆ. ಕೃಷ್ಣಾ ಮೇಲ್ದಂಡೆ ಯೋಜನೆ ಸೇರಿ ಇನ್ನಿತರ ನೀರಾವರಿ ಯೋಜನೆಗಳಿಗೆ ನಮ್ಮ ಸರ್ಕಾರ ಸಹಕಾರ ನೀಡುತ್ತಿದೆ. ಎಲ್ಲಾ ಶಾಸಕರು ಅವರ ಕ್ಷೇತ್ರದಲ್ಲಿ ಇನ್ನು ಹೆಚ್ಚು ಕೆಲಸ ಮಾಡಬೇಕು ಎನ್ನುವ ಅಭಿಲಾಷೆ ಆಗಿರುತ್ತದೆ. ಅದು ತಪ್ಪೇನಲ್ಲ ಎಂದರು.
ಉತ್ತರ ಕರ್ನಾಟಕ ಭಾಗದ ಚರ್ಚೆ ವೇಳೆ ಈ ಭಾಗದ ಶಾಸಕರ ನಿರ್ಲಕ್ಷ್ಯ ತಳ್ಳಿ ಹಾಕಿದ ಡಾ.ಶರಣಪ್ರಕಾಶ ಪಾಟೀಲ, 'ಉತ್ತರ ಕರ್ನಾಟಕದಲ್ಲಿ ಆರಿಸಿ ಬಂದ ಎಲ್ಲ ಪಕ್ಷದ ಶಾಸಕರು ತಮ್ಮ ಕ್ಷೇತ್ರದ ಮೇಲಿನ ಕಳಕಳಿಯಿಂದಲೇ ಕೆಲಸ ಮಾಡುತ್ತಿರುತ್ತಾರೆ. ಹಾಗಾಗಿ, ದಕ್ಷಿಣ ಕರ್ನಾಟಕಕ್ಕೆ ಹೋಲಿಸಿದರೆ ಉ.ಕ. ಭಾಗದಲ್ಲಿ ಇನ್ನು ಹೆಚ್ಚು ಅಭಿವೃದ್ಧಿ ಆಗಬೇಕಿದೆ. ಹಾಗಂತಾ ಇಲ್ಲಿ ಏನೂ ಅಭಿವೃದ್ಧಿ ಆಗಿಲ್ಲ ಎನ್ನಲು ಬರಲ್ಲ. ಸ್ವಾತಂತ್ರ್ಯ ಪೂರ್ವದಲ್ಲೆ ಮೈಸೂರು ಅರಸರು ಬಹಳಷ್ಟು ಪ್ರಗತಿಪರ ಕೆಲಸ ಮಾಡಿದ್ದರಿಂದ ದಕ್ಷಿಣ ಕರ್ನಾಟಕ ಮುಂದುವರಿದಿದೆ. ಆಗಿನ ಹೈದರಾಬಾದ್ ಕರ್ನಾಟಕ ನಿಜಾಮರ ಆಳ್ವಿಕೆಯಲ್ಲಿತ್ತು. ಇದಕ್ಕೆಲ್ಲಾ ಕೆಲ ಐತಿಹಾಸಿಕ ಕಾರಣ ಕೂಡ ಇದೆ' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.