ADVERTISEMENT

ಸಾಕಾರಗೊಳ್ಳದ ರೈಲ್ವೆ ಯೋಜನೆಗಳು; ನಿರಾಸೆ ಮೂಡಿಸಿದ ಬಜೆಟ್‌

ಶ್ರೀಕಾಂತ ಕಲ್ಲಮ್ಮನವರ
Published 5 ಜುಲೈ 2019, 16:49 IST
Last Updated 5 ಜುಲೈ 2019, 16:49 IST
ಬೆಳಗಾವಿ ರೈಲ್ವೆ ನಿಲ್ದಾಣ
ಬೆಳಗಾವಿ ರೈಲ್ವೆ ನಿಲ್ದಾಣ   

ಬೆಳಗಾವಿ: ಇತರ ಕ್ಷೇತ್ರಗಳಿಗಿಂತ ರೈಲ್ವೆಯಲ್ಲಿ ಏನು ಸಿಗಬಹುದು ಎಂದು ಬಹಳ ಕುತೂಹಲ ಹೊಂದಿದ್ದ ಜಿಲ್ಲೆಯ ಜನರಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಶುಕ್ರವಾರ ಲೋಕಸಭೆಯಲ್ಲಿ ಮಂಡಿಸಿದ 2019–20ನೇ ಸಾಲಿನ ಕೇಂದ್ರ ಬಜೆಟ್‌ ನಿರಾಸೆ ತಂದಿದೆ.

ಸ್ಥಳೀಯ ಸಂಸದರಾದ ಸುರೇಶ ಅಂಗಡಿ ಅವರು ರೈಲ್ವೆ ಖಾತೆಯ ರಾಜ್ಯ ಸಚಿವರಾಗಿದ್ದರಿಂದ ಜಿಲ್ಲೆಯ ಜನರು ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳಲು ಕಾರಣವಾಗಿತ್ತು. ಇತ್ತೀಚೆಗೆ ಬೆಂಗಳೂರು– ಬೆಳಗಾವಿ ಸೂಪರ್‌ಫಾಸ್ಟ್‌ ರೈಲಿಗೆ ಚಾಲನೆ ನೀಡಿದ್ದರಿಂದ, ಬಜೆಟ್‌ನಲ್ಲಿ ಇನ್ನಷ್ಟು ಹೆಚ್ಚಿನ ಯೋಜನೆಗಳು, ಹೊಸ ರೈಲುಗಳು ಲಭಿಸಬಹುದು ಎಂದು ಅಂದಾಜಿಸಿದ್ದರು. ಆದರೆ, ಅವರ ನಿರೀಕ್ಷೆಗಳು ಸಾಕಾರಗೊಳ್ಳಲಿಲ್ಲ.

ಹಲವು ನಿರೀಕ್ಷೆಗಳು:

ADVERTISEMENT

ಬೆಳಗಾವಿ– ಕಿತ್ತೂರು– ಧಾರವಾಡ ರೈಲು ಮಾರ್ಗ ಕುರಿತು 2–3 ಬಾರಿ ಸಮೀಕ್ಷೆಯಾಗಿತ್ತು. ಈ ಸಲ ಅದು ಸಾಕಾರಗೊಳ್ಳಬಹುದು ಎಂದು ಜನರು ನಿರೀಕ್ಷೆ ಇಟ್ಟುಕೊಂಡಿದ್ದರು. ಇದರ ಜೊತೆಗೆ ಮುಂಬೈಗೆ ಇನ್ನೊಂದು ರೈಲು, ಪುಣೆಗೆ ಪುಷ್‌ಪುಲ್‌ ರೈಲು, ಶ್ರೀ ಕ್ಷೇತ್ರ ಯಲ್ಲಮ್ಮನ ಗುಡ್ಡಕ್ಕೆ ರೈಲು ಸಂಪರ್ಕ, ದ್ವಿಪಥ ರೈಲು ಹಳಿ ನಿರ್ಮಾಣ ಪೂರ್ಣಗೊಳಿಸುವುದು, ಮಿರಜ್‌ಗೆ ಪ್ಯಾಸೆಂಜರ್‌ ರೈಲಿನ ಬೇಡಿಕೆಗಳು ಇದ್ದವು. ಈ ಯೋಜನೆಗಳ ಬಗ್ಗೆ ಯಾವುದೂ ಪ್ರಸ್ತಾಪವಾಗಲಿಲ್ಲ. ಇದು ಜನರಲ್ಲಿ ನಿರಾಸೆ ತಂದಿದೆ.

ಮೂಲಸೌಕರ್ಯಕ್ಕೆ ಒತ್ತು:

ಹೊಸ ರೈಲು ಯೋಜನೆಗಳನ್ನು ಘೋಷಿಸುವುದಕ್ಕಿಂತ ಹಳೆಯ ಯೋಜನೆಗಳನ್ನು ಅನುಷ್ಠಾನಗೊಳಿಸಲು ಹೆಚ್ಚು ಒತ್ತು ಕೊಡುವುದಾಗಿ ಬಜೆಟ್‌ ಮಂಡನೆ ವೇಳೆ ನಿರ್ಮಲಾ ಹೇಳಿದ್ದಾರೆ. ಅದಕ್ಕಾಗಿ ₹ 1.56 ಲಕ್ಷ ಕೋಟಿ ಹಣ ಮೀಸಲು ಇಟ್ಟಿದ್ದಾರೆ. ಆದರೆ, ಈ ಹಣವನ್ನು ಯಾವ ರೀತಿ ಬಳಕೆ ಮಾಡುತ್ತಾರೆ ಎನ್ನುವುದನ್ನು ಬಿಡಿಸಿ ಹೇಳಿಲ್ಲ. ಇದರಲ್ಲಿ ಎಷ್ಟು ಪಾಲು ಬೆಳಗಾವಿ ನಿಲ್ದಾಣಕ್ಕೆ ಲಭ್ಯವಾಗಲಿದೆ ಎನ್ನುವುದನ್ನು ಕಾದುನೋಡಬೇಕಾಗಿದೆ.

100 ಕಿ.ಮೀ ರೈಲು ಹಳಿ ಸಿಕ್ಕೀತೆ?

‘ಈ ವರ್ಷ300 ಕಿ.ಮೀ ಹೊಸ ರೈಲು ಹಳಿ ನಿರ್ಮಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಇದರ ಪೈಕಿ 100 ಕಿ.ಮೀ ಹಳಿಯನ್ನು ಸುರೇಶ ಅಂಗಡಿಯವರು ಬೆಳಗಾವಿಗೆ ತರಲಿ. ಅದರಲ್ಲಿ, ಬೆಳಗಾವಿ– ಕಿತ್ತೂರು– ಧಾರವಾಡ ಮಾರ್ಗವನ್ನು ನಿರ್ಮಿಸಲಿ. ರೈಲ್ವೆ ಖಾತೆಯ ರಾಜ್ಯ ಸಚಿವರಾದವರು ಮನಸ್ಸು ಮಾಡಿದರೆ ಇದು ಅಸಾಧ್ಯವಾದುದೇನಲ್ಲ’ ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.