ADVERTISEMENT

ಯಡಿಯೂರಪ್ಪ ಪ್ರವಾಸಕ್ಕೆ ಯಾರೂ ಬ್ರೇಕ್ ಹಾಕಿಲ್ಲ: ಸಚಿವ ಬಿ.ಸಿ.‌ಪಾಟೀಲ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2021, 16:57 IST
Last Updated 29 ಸೆಪ್ಟೆಂಬರ್ 2021, 16:57 IST
ಬಿ.ಸಿ. ಪಾಟೀಲ
ಬಿ.ಸಿ. ಪಾಟೀಲ    

ಬೆಳಗಾವಿ: ‘ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪಕ್ಷ ಸಂಘಟನೆಗೆ ಕೈಗೊಂಡಿರುವ ರಾಜ್ಯ ಪ್ರವಾಸಕ್ಕೆ ಯಾರೂ ಬ್ರೇಕ್ ಹಾಕಿಲ್ಲ’ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

ಇಲ್ಲಿ ಪತ್ರಕರ್ತರೊಂದಿಗೆ ಬುಧವಾರ ಮಾತನಾಡಿದ ಅವರು, ‘ಯಡಿಯೂರಪ್ಪ ಅವರ ಮಾರ್ಗದರ್ಶನ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಮುಂದಿನ ವಿಧಾನಸಭೆ ಚುನಾವಣೆ ಹೋಗುತ್ತೇವೆ. ಹಾನಗಲ್ ಮತ್ತು ಸಿಂದಗಿ ಉಪ ಚುನಾವಣೆಯನ್ನು ಗೆಲ್ಲುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಹಾನಗಲ್‌ನಲ್ಲಿ ತಕ್ಷಣ ಸಭೆ ನಡೆಸಿ, ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಸಿದ್ಧಪಡಿಸಿ ಕಳುಹಿಸುವಂತೆ ಪಕ್ಷದಿಂದ ನನಗೆ ಸೂಚನೆ ಬಂದಿದೆ. ಜಿಲ್ಲಾ ಉಸ್ತುವಾರಿ ಸಚಿವನಾಗಿರುವುದರಿಂದಾಗಿ, ಶುಕ್ರವಾರ ಹಾನಗಲ್‌ನಲ್ಲಿ ಸಭೆ ನಡೆಸಿ ಆಕಾಂಕ್ಷಿಗಳ ಪಟ್ಟಿಯ‌ನ್ನು ಹೈಕಮಾಂಡ್‌ಗೆ ಕಳುಹಿಸುತ್ತೇವೆ. ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷರೂ ಆಗಿರುವ ಬಿ.ವೈ. ವಿಜಯೇಂದ್ರ ಹಾನಗಲ್‌‌ನಿಂದ ಸ್ಪರ್ಧಿಸುವ ವಿಷಯ ನನಗೆ ಗೊತ್ತಿಲ್ಲ’ ಎಂದು ಪ್ರತಿಕ್ರಿಯಿಸಿದರು.

ADVERTISEMENT

‘ದಿ.ಸಿ.ಎಂ.ಉದಾಸಿ ಅವರ ಕುಟುಂಬಕ್ಕೆ ಟಿಕೆಟ್ ನೀಡುವ ವಿಚಾರ ನಾವು ತೀರ್ಮಾನಿಸಲು ಆಗುವುದಿಲ್ಲ. ಹೈಕಮಾಂಡ್ ನಿರ್ಧರಿಸುತ್ತದೆ. ಆಕಾಂಕ್ಷಿಗಳ ಪಟ್ಟಿಯನ್ನು ಅಳೆದು ತೂಗಿ ಗೆಲ್ಲಲು ಸಾಮರ್ಥ್ಯ ಇರುವ ಅಭ್ಯರ್ಥಿಗೆ ಟಿಕೆಟ್ ಕೊಡುತ್ತೇವೆ’ ಎಂದರು.

–––

ಬಟ್ಟೆ ಹಾವು ಬಿಡುತ್ತಿರುವ ಕಾಂಗ್ರೆಸ್‌: ಪಾಟೀಲ ಟೀಕೆ

ಬೆಳಗಾವಿ: ‘ನಾವ್ಯಾರೂ ಕಾಂಗ್ರೆಸ್‌ಗೆ ಮರಳುವ ಪ್ರಶ್ನೆಯೇ ಇಲ್ಲ. ಆದರೆ, ಆ ಪಕ್ಷದ ನಾಯಕರು ಸುಮ್ಮನೆ ಬಟ್ಟೆಯ ಹಾವು ಬಿಡುವಂತಹ ಕೆಲಸವನ್ನು ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಬೆಂಕಿ ಹಚ್ಚಬೇಕು ಎನ್ನುವುದು ಅವರ ಉದ್ದೇಶವಾಗಿದೆ’ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಟೀಕಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಬುಧವಾರ ಮಾತನಾಡಿದ ಅವರು, ‘ಬಿಜೆಪಿಯಲ್ಲಿ ನಾವ್ಯಾರೂ ವಲಸಿಗರಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಮತ್ತೆ ಚುನಾವಣೆಯಲ್ಲಿ ನಿಂತು ಗೆದ್ದು ಬಂದವರು’ ಎಂದರು.

‘ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಆರ್‌ಎಸ್‌ಎಸ್‌ ಅನ್ನು ತಾಲಿಬಾನ್‌ ಸಂಘಟನೆಗೆ ಹೋಲಿಕೆ ಮಾಡಿರುವುದು ಬಾಲಿಶ ಹೇಳಿಕೆ. ತಾಲಿಬಾನ್ ಅಥವಾ ಪಾಕಿಸ್ತಾನಕ್ಕೆ ಬೆಂಬಲ ಕೊಡುವವರು ಯಾರು ಎನ್ನುವುದು ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್‌ನವರು ತಾಲಿಬಾನ್, ಪಾಕಿಸ್ತಾನ ಬೆಂಬಲಿಸುವವರಿಗೆ ಬೆಂಬಲ ಕೊಡುತ್ತಾ ಬೇರೆಯವರತ್ತ ಬೊಟ್ಟು ಮಾಡುತ್ತಿದ್ದಾರೆ’ ಎಂದು ತಿರುಗೇಟು ನೀಡಿದರು.

‘ರಾಷ್ಟ್ರೀಯವಾದ ಮತ್ತು ಏಕತೆಗೆ ಒತ್ತು ಕೊಡುವುದು ಬಿಜೆಪಿಯ ಧ್ಯೇಯವಾಗಿದೆ’ ಎಂದರು.

‘ಶಾಸಕ ರಮೇಶ ಜಾರಕಿಹೊಳಿ ಹಾಗೂ ಮಿತ್ರಮಂಡಳಿ ಶಾಸಕರ ನಡುವೆ ಬ್ರೇಕ್ ಆಗಿಲ್ಲ. ಫೇಕ್ ಕೂಡ ಆಗಿಲ್ಲ. ಪ್ರೀತಿ ಇದ್ದೇ ಇರುತ್ತದೆ’ ಎಂದು ಪ್ರತಿಕ್ರಿಯಿಸಿದರು.

‘ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪಕ್ಷ ಸಂಘಟನೆಗೆ ಕೈಗೊಂಡಿರುವ ರಾಜ್ಯ ಪ್ರವಾಸಕ್ಕೆ ಯಾರೂ ಬ್ರೇಕ್ ಹಾಕಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.