ಡಾ. ಎಚ್.ಸಿ. ಮಹದೇವಪ್ಪ
ಬೆಳಗಾವಿ: 'ವಾಲ್ಮೀಕಿ ಸಮುದಾಯಕ್ಕೆ ಸೇರಿದ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಮಣಿಸಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಬಿಜೆಪಿ ನಾಯಕ ಬಿ.ಶ್ರೀರಾಮುಲು ಅವರನ್ನು ಕಾಂಗ್ರೆಸ್ ಗೆ ಸೇರಿಸಿಕೊಳ್ಳಲು ಪ್ರಯತ್ನ ನಡೆಸಿದ್ದಾರೆ ಎಂಬುದು ಊಹಾಪೋಹ. ಅಂಥ ಪ್ರಸ್ತಾಪ ಪಕ್ಷದ ಮುಂದೆ ಇಲ್ಲ' ಎಂದು ಸಮಾಜಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದರು.
ಇಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಸತೀಶ ಮಣಿಸಲು ಶ್ರೀರಾಮುಲು ಅವರನ್ನು ಕಾಂಗ್ರೆಸ್ ಗೆ ಕರೆತರಲಾಗುತ್ತಿದೆ ಎಂಬ ಮಾಹಿತಿ ಹರಡುವ ಮೂಲಕ ಕಾಂಗ್ರೆಸ್ ನಲ್ಲಿ ಬಿರುಕು ಮೂಡಿಸಲು ಯತ್ನ ನಡೆದಿದೆ' ಎಂದು ದೂರಿದರು
'ಚುನಾವಣೆ ಸಂದರ್ಭ ಶ್ರೀರಾಮುಲು ಅವರನ್ನು ಪಕ್ಷಕ್ಕೆ ಆಹ್ವಾನಿಸಲು ಅನೇಕ ತಂತ್ರಗಾರಿಕೆ ನಡೆದಿರಬಹುದು. ಈಗ ರಾಜ್ಯದಲ್ಲಿ ಸ್ಪಷ್ಟ ಬಹುಮತದೊಂದಿಗೆ ಜನರು ನಮಗೆ ಅಧಿಕಾರ ಕೊಟ್ಟಿದ್ದಾರೆ.
ನಾವೂ ಅಧಿಕಾರ ನಡೆಸುತ್ತಿದ್ದೇವೆ. ಅಹಿಂದ ನಾಯಕರಾಗಿ ಸತೀಶ ಜಾರಕಿಹೊಳಿ ಬೆಳೆಯುತ್ತಿದ್ದಾರೆ. ಹೀಗಿರುವಾಗ, ಈ ಪ್ರಶ್ನೆಯೇ ಈಗ ಅಪ್ರಸ್ತುತ' ಎಂದರು.
'ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಆಸ್ತಿ ವಿಚಾರದಲ್ಲಿ ಮೈಸೂರು ರಾಜವಂಶಸ್ಥರನ್ನು ಟಾರ್ಗೆಟ್ ಮಾಡಿಲ್ಲ. ಸ್ವಾತಂತ್ರ್ಯದ ನಂತರ, ಎಲ್ಲ ರಾಜಪ್ರಭುತ್ವದ ರಾಜ್ಯಗಳು ಭಾರತೀಯ ಗಣರಾಜ್ಯದ ಭಾಗವಾದವು. ಅವುಗಳ ಆಸ್ತಿಗಳನ್ನು ಸರ್ಕಾರಕ್ಕೆ ವರ್ಗಾಯಿಸಲಾಯಿತು. ಮೈಸೂರಿನಲ್ಲಿ ಕೆಲವು ಆಸ್ತಿಗಳಿಗೆ ಸಂಬಂಧಿಸಿದಂತೆ ವಿವಾದವಿದೆ. ಶುಕ್ರವಾರ ನಡೆದ ತುರ್ತು ಸಚಿವ ಸಂಪುಟ ಸಭೆಯಲ್ಲಿ, ರಸ್ತೆಗಳು ಮತ್ತು ಇತರೆ ಅಭಿವೃದ್ಧಿ ಯೋಜನೆಗಳಿಗಾಗಿ ಸ್ವಾಧೀನಪಡಿಸಿಕೊಂಡ ಭೂಮಿಗೆ ರಾಜಮನೆತನಕ್ಕೆ ಹೆಚ್ಚಿನ ಪರಿಹಾರವನ್ನು ನೀಡಲಾಗುವುದಿಲ್ಲ ಎಂದು ನಿರ್ಧರಿಸಲಾಯಿತು' ಎಂದು ತಿಳಿಸಿದರು.
'ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ರಾಜ್ಯದ ಮುಂದಿರುವ ವಿಷಯಗಳಲ್ಲ. ಪಕ್ಷದಿಂದ ಹೈಕಮಾಂಡ್ ಮುಂದಿರುವ ವಿಷಯಗಳು. ಆ ಬಗ್ಗೆ ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.