ADVERTISEMENT

ಸಂದರ್ಶನ | ಬಿಎಸ್‌ವೈ ಒಬ್ಬರೇ ಅಲ್ಲ ನಾನೂ ಲಿಂಗಾಯತನೇ: ಆಶೋಕ ಪೂಜಾರಿ

ಸಂದರ್ಶನ; ಜೆಡಿಎಸ್‌ ಅಭ್ಯರ್ಥಿ ಅಶೋಕ ಪೂಜಾರಿ ಮಾತು

ಶ್ರೀಕಾಂತ ಕಲ್ಲಮ್ಮನವರ
Published 2 ಡಿಸೆಂಬರ್ 2019, 20:00 IST
Last Updated 2 ಡಿಸೆಂಬರ್ 2019, 20:00 IST
ಅಶೋಕ ಪೂಜಾರಿ
ಅಶೋಕ ಪೂಜಾರಿ   

ಬೆಳಗಾವಿ: ‘ವೀರಶೈವ– ಲಿಂಗಾಯತ ಸಮುದಾಯದ ಒಂದು ಮತವೂ ಬಿಜೆಪಿ ಬಿಟ್ಟು ಬೇರೆಡೆ ಹೋಗಬಾರದೆಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೀಡಿದ ಹೇಳಿಕೆ ಯಾವುದೇ ಪರಿಣಾಮ ಬೀರುವುದಿಲ್ಲ. ನಾನೂ ಅದೇ ಸಮುದಾಯದವನಾಗಿದ್ದು, ಸಮುದಾಯದ ಮತದಾರರು ಜಾಗೃತರಾಗಿದ್ದಾರೆ. ಸೂಕ್ತ ಅಭ್ಯರ್ಥಿಯನ್ನೇ ಆಯ್ಕೆ ಮಾಡಲಿದ್ದಾರೆ...’

ಗೋಕಾಕ ಉಪಚುನಾವಣೆಯ ಜೆಡಿಎಸ್‌ ಅಭ್ಯರ್ಥಿ, ಲಿಂಗಾಯತ (ಜಂಗಮ) ಸಮುದಾಯದ ಅಶೋಕ ಪೂಜಾರಿ ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ಹೇಳಿದ ಮಾತುಗಳಿವು.

* ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹೇಳಿಕೆಯಿಂದ ಚುನಾವಣಾ ಚಿತ್ರಣವೇ ಬದಲಾದಂತೆ ಕಾಣುತ್ತಿಲ್ಲವೇ?

ADVERTISEMENT

ಇಲ್ಲವೇ ಇಲ್ಲ. ಒಂದು ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಮತ ಕೇಳುವುದೇ ಅಪಚಾರ ಮಾಡಿದಂತೆ. ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯೂ ಆಗಿದೆ. ರಾಜ್ಯದ ಮುಖ್ಯಮಂತ್ರಿಯಾದವರೇ ಈ ರೀತಿ ಹೇಳಿದರೆ ಏನನ್ನ ಬೇಕು? ಇನ್ನುಳಿದ ಸಮುದಾಯದವರು ಏಲ್ಲಿಗೆ ಹೋಗಬೇಕು? ಯಾವುದೇ ಕ್ಷೇತ್ರ ಇರಲಿ, ಯಾರೇ ಅಭ್ಯರ್ಥಿಯಾಗಿರಲಿ ಯಾವುದೋ ಒಂದು ಸಮುದಾಯವನ್ನು ನೆಚ್ಚಿಕೊಂಡು ಗೆಲ್ಲಲು ಸಾಧ್ಯವಿಲ್ಲ.

ಬಿಜೆಪಿಯಿಂದ ರಮೇಶ ಜಾರಕಿಹೊಳಿ, ಕಾಂಗ್ರೆಸ್‌ನಿಂದ ಲಖನ್‌ ಜಾರಕಿಹೊಳಿ, ಘಟಾನುಘಟಿಗಳ ಜೊತೆ ಸ್ಪರ್ಧೆಗೆ ಇಳಿದಿದ್ದೀರಾ, ಭಯವಾಗುವುದಿಲ್ಲವೇ?

ಕ್ಷೇತ್ರದ ರಾಜಕೀಯ ವಲಯದಲ್ಲಿ ಒಂದು ರೀತಿಯ ಭಯದ ವಾತಾವರಣ ಸೃಷ್ಟಿಸಲಾಗಿದೆ. ಯಾರ ಜೊತೆ ಗುರುತಿಸಿಕೊಂಡರೂ ಕಷ್ಟ ಎನ್ನುವಂತಹ ಪರಿಸ್ಥಿತಿ ನಿರ್ಮಿಸಲಾಗಿದೆ. ಈ ಕಾರಣಕ್ಕಾಗಿಯೇ ಹಲವರು ಮುಕ್ತವಾಗಿ ನನ್ನ ಜೊತೆ ಗುರುತಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಪ್ರಚಾರಕ್ಕೂ ಬರುತ್ತಿಲ್ಲ. ಆದರೆ, ಇವರೆಲ್ಲ ಮತದಾನದ ಮೂಲಕ ಇದಕ್ಕೆ ತಕ್ಕ ಉತ್ತರ ನೀಡುತ್ತಾರೆ ಎನ್ನುವ ವಿಶ್ವಾಸ ನನಗಿದೆ. ಕಳೆದ 11 ವರ್ಷಗಳಿಂದ ರಾಜಕೀಯ ಸರ್ವಾಧಿಕಾರದ ವಿರುದ್ಧ ಹೋರಾಡುತ್ತಿದ್ದೇನೆ. ನನಗ್ಯಾರ ಭಯವೂ ಇಲ್ಲ. ಭಯ ಇದ್ದಿದ್ದರೆ ಇಷ್ಟು ವರ್ಷಗಳ ಕಾಲ ಹೋರಾಟ ಮಾಡಲು ಸಾಧ್ಯವಾಗುತ್ತಿರಲಿಲ್ಲ.

* ಬಿಜೆಪಿಯ ರಮೇಶ ಅಥವಾ ಕಾಂಗ್ರೆಸ್‌ನ ಲಖನ್‌ ಯಾರು ನಿಮಗೆ ತೀವ್ರ ಸ್ಪರ್ಧೆಯೊಡ್ಡಲಿದ್ದಾರೆ?

ಚುನಾವಣಾ ಕಣದಲ್ಲಿರುವ ಎಲ್ಲ 10 ಜನ ಅಭ್ಯರ್ಥಿಗಳೂ ನನಗೆ ಬಲಿಷ್ಠ ಪ್ರತಿಸ್ಪರ್ಧಿಯಾಗಿದ್ದಾರೆ. ರಮೇಶ ಅಥವಾ ಲಖನ್‌ ಇರಲಿ ಯಾರನ್ನೂ ನಾನು ಲಘುವಾಗಿ ಪರಿಗಣಿಸಿಲ್ಲ. ಮತದಾರರ ಮನವೊಲಿಸುವುದಷ್ಟೇ ನನ್ನ ಕೆಲಸ. ಯಾರಿಗೆ ಯಾರು ಪೈಪೋಟಿ ಎನ್ನುವುದನ್ನು ಮತದಾರನೇ ನಿರ್ಧರಿಸುತ್ತಾನೆ.

* ಜನರು ನಿಮಗೆ ಏಕೆ ಮತ ಹಾಕಬೇಕು?

ಗೋಕಾಕದಲ್ಲಿರುವ ಸರ್ವಾಧಿಕಾರ ರಾಜಕೀಯ ವ್ಯವಸ್ಥೆ ಕೊನೆಗಾಣಬೇಕು. ಭ್ರಷ್ಟಾಚಾರ ತೊಲಗಬೇಕು. ಸ್ವಚ್ಚ, ಮುಕ್ತ, ಸ್ವತಂತ್ರ ರಾಜಕೀಯ ವ್ಯವಸ್ಥೆ ಬರಬೇಕು. ಈಗಿನ ವ್ಯವಸ್ಥೆ ಬದಲಾಗಬೇಕು ಎನ್ನುವವರು ನನಗೆ ಮತ ನೀಡುವಂತೆ ಕೇಳಿಕೊಳ್ಳುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.