ADVERTISEMENT

ಇ.ಡಿ. ಹೆಸರಿನಲ್ಲಿ ಬ್ಯಾಂಕ್ ಅಧಿಕಾರಿಗಳಿಂದಲೇ ಮಾಹಿತಿ ಪಡೆದು ವಂಚಿಸಲು ಯತ್ನ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2021, 7:03 IST
Last Updated 6 ಫೆಬ್ರುವರಿ 2021, 7:03 IST

ಬೆಳಗಾವಿ: ಗ್ರಾಹಕರ ಖಾತೆಗಳಿಂದ ಹಣ ಸೆಳೆಯಲು ಬೇಕಾಗುವ ಮಾಹಿತಿಯನ್ನು ಬ್ಯಾಂಕ್‌ ಅಧಿಕಾರಿಗಳಿಂದಲೆ ಪಡೆದು ವಂಚಿಸಲು ಸೈಬರ್‌ ಖದೀಮರು ಜಾರಿ ನಿರ್ದೇಶನಾಲಯ (ಇ.ಡಿ.)ದ ಹೆಸರು ಬಳಸಿಕೊಂಡಿರುವ ಬಗ್ಗೆ ದೂರು ದಾಖಲಾಗಿದೆ.

ಕೆಲವು ಗ್ರಾಹಕರ ಬ್ಯಾಂಕ್ ಖಾತೆ ಸ್ಥಗಿತಗೊಳಿಸುವಂತೆ (ಫ್ರೀಜ್) ಸೂಚಿಸಿ ಜಾರಿ ನಿರ್ದೇಶನಾಲಯದ ವಿಳಾಸದಿಂದ ವಿವಿಧ ಬ್ಯಾಂಕ್‌ಗಳಿಗೆ ನೋಟಿಸ್ ಜಾರಿಯಾಗಿದೆ. ಸೈಬರ್‌ ಕಳ್ಳರು ನೋಟಿಸ್‌ಗಳನ್ನು ಅಂಚೆ ಮೂಲಕ ಕಳುಹಿಸಿದ್ದಾರೆ.

‘ನಿಮ್ಮಲ್ಲಿ ಖಾತೆ ಹೊಂದಿರುವ ನಿರ್ದಿಷ್ಟ ಗ್ರಾಹಕರ ಖಾತೆ ಫ್ರೀಜ್ ಮಾಡಬೇಕು. ಆ ಖಾತೆಗಳ ಕೆವೈಸಿ ಮಾಹಿತಿ ಕಳುಹಿಸಬೇಕು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿತ್ತು. ಅವು ಅಸಲಿ ನೋಟಿಸ್‌ಗಳು ಎಂದು ಭಾವಿಸಿದ ಬ್ಯಾಂಕ್‌ಗಳವರು ನಿರ್ದಿಷ್ಟ ಗ್ರಾಹಕರ ಮಾಹಿತಿಯನ್ನು ಇ.ಡಿ. ಕಚೇರಿಯ ವಿಳಾಸಕ್ಕೆ ಕಳುಹಿಸಿದ್ದಾರೆ. ಕೆಲವೇ ದಿನಗಳಲ್ಲಿ, ಇ.ಡಿ.ಯಿಂದ ಬಂದ ಪತ್ರದಲ್ಲಿ, ‘ನಾವು ಆ ರೀತಿ ಗ್ರಾಹಕರ ಖಾತೆ ಡೆಬಿಟ್ ಫ್ರೀಜ್ ಮಾಡುವಂತೆ ನೋಟಿಸ್ ಜಾರಿ ಮಾಡಿಲ್ಲ. ನಿಮಗೆ ಬಂದಿರುವ ನೋಟಿಸ್‌ಗಳ ಬಗ್ಗೆ ಅನುಮಾನವಿದೆ. ಹೀಗಾಗಿ ಪೊಲೀಸ್ ಠಾಣೆಗೆ ದೂರು ದಾಖಲಿಸಿ ಕ್ರಮ ಕೈಗೊಂಡ ಬಗ್ಗೆ ವರದಿ ಸಲ್ಲಿಸಬೇಕು’ ಎಂದು ತಿಳಿಸಲಾಗಿತ್ತು. ಆಗ, ಸೈಬರ್ ಖದೀಮರು ಇ.ಡಿ. ಹೆಸರಲ್ಲಿ ವಂಚಿಸಲು ಯತ್ನಿಸಿರುವುದು ಬ್ಯಾಂಕ್ ಅಧಿಕಾರಿಗಳಿಗೆ ಮನವರಿಕೆಯಾಗಿದೆ ಎಂದು ತಿಳಿದುಬಂದಿದೆ.

ADVERTISEMENT

ಕನಿಷ್ಠ ₹ 10 ಲಕ್ಷದಿಂದ ಗರಿಷ್ಠ ₹ 30 ಲಕ್ಷ ನಗದನ್ನು ಹೊಂದಿರುವ ಖಾತೆ ಫ್ರೀಜ್ ಆಗಿದೆ. ಹಣ ಡ್ರಾ ಮಾಡಲಾಗದೆ ತೊಂದರೆ ಅನುಭವಿಸಿದ ಗ್ರಾಹಕರು, ಬ್ಯಾಂಕ್ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಬಳಿಕ, ಅಧಿಕಾರಿಗಳು ಸತ್ಯಾಸತ್ಯತೆ ತಿಳಿಯಲು ಇ.ಡಿ.ಗೆ ಪತ್ರ ವ್ಯವಹಾರ ನಡೆಸಿದ್ದರು ಎಂದು ಮೂಲಗಳು ತಿಳಿಸಿವೆ.

ಇಡಿ ಸೂಚನೆಯಂತೆ, ಬ್ಯಾಂಕ್ ಅಧಿಕಾರಿಗಳು ನಗರದ ಸಿಇಎನ್ (ಸೈಬರ್, ಎಕನಾಮಿಕ್ಸ್‌ ಆ್ಯಂಡ್ ನಾರ್ಕೋಟಿಕ್) ಠಾಣೆಗೆ ದೂರು ನೀಡಿದ್ದಾರೆ. ನಗರದಲ್ಲಿ 6 ಸೇರಿಜಿಲ್ಲೆಯಾದ್ಯಂತ ಈವರೆಗೆ 10 ಪ್ರಕರಣಗಳು ದಾಖಲಾಗಿವೆ. ತನಿಖೆ ಪ್ರಗತಿಯಲ್ಲಿದೆ. ಖಾತೆ ಫ್ರೀಜ್ ಆದ ನಂತರ ಸೈಬರ್ ಖದೀಮರು ನಿರ್ದಿಷ್ಟ ಗ್ರಾಹಕರನ್ನು ಸಂಪರ್ಕಿಸಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

‘ಪತ್ರಗಳನ್ನು ಕಳುಹಿಸಿದ್ದು ಯಾರು ಎನ್ನುವ ಬಗ್ಗೆ ತನಿಖೆ ನಡೆದಿದೆ. ಆರೋಪಿಯ ಸುಳಿವು ದೊರೆತಿದೆ’ ಎಂದು ಮೂಲಗಳು ತಿಳಿಸಿವೆ.

‘ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಸಿಇಎನ್ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ’ ಎಂದು ನಗರ ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.