ಚಿಕ್ಕೋಡಿ: ‘ಎನ್‌ಎಸ್‌ಎಸ್ ಶಿಬಿರವು ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ಸೇವಾ ಮನೋಭಾವ, ನಾಯಕತ್ವದ ಗುಣ, ಧೈರ್ಯವನ್ನು ಬೆಳೆಸುವ ಮೂಲಕ ಪ್ರಬುದ್ಧ ನಾಗಕರಿಕರನ್ನಾಗಿಸುತ್ತದೆ. ಇಡೀ ಜಗತ್ತು ಇಂದು ದೇಶದತ್ತ ನೋಡುತ್ತಿದ್ದು, ದೇಶದ ಪ್ರಗತಿಯಲ್ಲಿ ಯುವ ಜನಾಂಗದ ಕೊಡುಗೆ ಮಹತ್ತರವಾಗಿದೆ’ ಎಂದು ಚಿಕ್ಕೋಡಿಯ ಸಿಟಿಇ ಸಂಸ್ಥೆಯ ನಿರ್ದೇಶಕ ಸಂಜಯ ಅಡಕೆ ಹೇಳಿದರು.
ತಾಲ್ಲೂಕಿನ ಮಲಿಕವಾಡ ಗ್ರಾಮದಲ್ಲಿ ಚಿಕ್ಕೋಡಿಯ ಶ್ರೀಮತಿ ಎ.ಎ. ಪಾಟೀಲ ಮಹಿಳಾ ಮಹಾವಿದ್ಯಾಲಯ ಹಾಗೂ ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಎನ್‌ಎಸ್‌ಎಸ್ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾನ್ನಿಧ್ಯ ವಹಿಸಿದ್ದ ಚಿಕ್ಕೋಡಿ ಚರಮೂರ್ತಿ ಮಠದ ಸಂಪಾದನಾ ಸ್ವಾಮೀಜಿ ಮಾತನಾಡಿ, ‘ದೇಶದ ಬೆನ್ನೆಲುಬಾಗಿರುವ ಕೃಷಿ ಹಾಗೂ ಕೃಷಿಕರ ಏಳ್ಗೆಗೆ ಸರ್ಕಾರ ವಿವಿಧ ಕಾರ್ಯಕ್ರಮ ಹಾಕಿಕೊಳ್ಳಬೇಕು. ಅಲ್ಲದೇ, ಯುವ ಜನಾಂಗ ಎಂಜಿನಿಯರ್, ಡಾಕ್ಟರ್ ಆಗುವುದಷ್ಟೇ ಅಲ್ಲದೇ ರೈತರಾಗಿ ಕೃಷಿ ಕ್ಷೇತ್ರದಲ್ಲೂ ಪ್ರಗತಿ ಸಾಧಿಸುವಂತವರಾಗಬೇಕು’ ಎಂದು ಹೇಳಿದರು.
ಮಧು ಹಿರೇಮಠ, ಪ್ರತಿಭಾ ಭೋಗಲೆ, ವಿಕಾಸ ಲಕ್ಕೋಳೆ ಅನಿಸಿಕೆ ವ್ಯಕ್ತಪಡಿಸಿದರು. ಸಿಟಿಇ ಸಂಸ್ಥೆಯ ನಿರ್ದೇಶಕ ವಿ.ಸಿ. ಕುಲಕರ್ಣಿ, ಮಲಿಕವಾಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಿತಾ ಇಂಗಳೆ, ಉಪಾಧ್ಯಕ್ಷ ಸಂಭಾಜಿ ಪಾಟೀಲ, ಮಿಥುನ್ ದೇಶಪಾಂಡೆ, ವಿ.ಟಿ. ಬಿಕ್ಕನ್ನವರ, ಎಸ್.ಎ. ಭೋಗಲೆ, ಎಸ್.ಸಿ ಜಕಾತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.