ADVERTISEMENT

ಗೋವಾ ಮುಖ್ಯಮಂತ್ರಿ ಹೇಳಿಕೆಗೆ ಖಂಡನೆ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2020, 15:05 IST
Last Updated 29 ನವೆಂಬರ್ 2020, 15:05 IST
ಅಶೋಕ ಚಂದರಗಿ
ಅಶೋಕ ಚಂದರಗಿ   

ಬೆಳಗಾವಿ: ‘ಮಹದಾಯಿ ನದಿ ನೀರು ಹಂಚಿಕೆ ವಿವಾದ ಕುರಿತುಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮತ್ತೊಮ್ಮೆ ಹಸಿ ಸುಳ್ಳು ಹೇಳಿ ಜನರನ್ನು ತಪ್ಪು ದಾರಿಗೆ ಎಳೆದಿದ್ದಾರೆ. ಕರ್ನಾಟಕವು ಮಹದಾಯಿ ನದಿಯ ನೀರನ್ನು ತಿರುಗಿಸಿಕೊಂಡಿದ್ದರಿಂದ ನದಿಯ ನೀರಿನಲ್ಲಿ ಅಭಾವವಾಗಿದೆ ಎಂದು ಅವರು ಹೇಳಿರುವುದು ಅಪ್ಪಟ ಸುಳ್ಳು’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ತಿರುಗೇಟು ನೀಡಿದ್ದಾರೆ.

‘ಈ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಸಿದ್ಧರಿಲ್ಲ ಎಂದೂ ಅವರು ಹೇಳಿದ್ದಾರೆ. ಅವರೊಂದಿಗೆ ಇತ್ತೀಚೆಗೆ ಮಾತುಕತೆ ನಡೆಸಿದ್ದ ನವದೆಹಯಲಿಯಲ್ಲಿ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ ಅವರು ಸಾವಂತ್ ಮಾತುಕತೆಗೆ ಸಿದ್ಧರಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಆದರೆ, ಈಗ ಸಾವಂತ್‌ ನಿರಾಕರಿಸಿದ್ದಾರೆ. ಇದರಿಂದ ದೆಹಲಿ ಪ್ರತಿನಿಧಿಗೆ ಮುಖಭಂಗ ಆಗಿದೆ. ಈ ಹಿಂದೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೂ ಇದೇ ರೀತಿ ಭರವಸೆ ಕೊಟ್ಟಿದ್ದ ಗೋವಾ ಮುಖ್ಯಮಂತ್ರಿ, ಬಳಿಕ ಹಿಂದೆ ಸರಿದಿದ್ದರು’ ಎಂದು ಹೇಳಿದ್ದಾರೆ.

‘ಮಹದಾಯಿ ನದಿ ನೀರಿನ ಹಂಚಿಕೆ ಸಂಬಂಧ ನ್ಯಾಯಮಂಡಳಿ ನೀಡಿದ ಐತೀರ್ಪಿನಂತೆ ಕರ್ನಾಟಕವು ತನ್ನ ಪಾಲಿನ ನೀರಿನ ಬಳಕೆಗೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದು, ಕೇಂದ್ರ ಅರಣ್ಯ ಮತ್ತು ವನ್ಯಜೀವಿ ಇಲಾಖೆಗಳ ಅನುಮತಿಗಾಗಿ ಕಾಯುತ್ತಿದೆ. ಈ ಹಂತದಲ್ಲಿ ಸಾವಂತ್‌ ಅವರು ಹತಾಶರಾಗಿ ಹೇಳಿಕೆ ನೀಡುವುದು ಸರಿಯಲ್ಲ’ ಎಂದು ತಿಳಿಸಿದ್ದಾರೆ.

ADVERTISEMENT

‘ನ್ಯಾಯಮಂಡಳಿ, ಸುಪ್ರೀಂ ಕೋರ್ಟ್‌ ಮತ್ತು ಉಭಯ ರಾಜ್ಯಗಳ ನಡುವಿನ ಮಾತುಕತೆ ಇದ್ಯಾವುದರಲ್ಲೂ ವಿಶ್ವಾಸವಿಡದ ಗೋವಾ ಒಂದಿಲ್ಲೊಂದು ನೆಪದಲ್ಲಿ ಕಳಸಾ ಬಂಡೂರಿ ಯೋಜನೆಗೆ ಅಡ್ಡಿ ಉಂಟು ಮಾಡಲು ಯತ್ನಿಸುತ್ತಿರುವುದನ್ನು ಸಮಿತಿಯು ತೀವ್ರವಾಗಿ ಖಂಡಿಸುತ್ತದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.