ADVERTISEMENT

ಬೆಳಗಾವಿ | ಒಕ್ಕುಂದ ಉತ್ಸವಕ್ಕೆ ₹5 ಲಕ್ಷ ನೀಡಿ: ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 2:06 IST
Last Updated 22 ಜನವರಿ 2026, 2:06 IST
ಒಕ್ಕುಂದ ಉತ್ಸವಕ್ಕೆ ₹5 ಲಕ್ಷ ಅನುದಾನ ನೀಡಬೇಕು ಎಂದು ಆಗ್ರಹಿಸಿ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್ ಅವರಿಗೆ ತಿರುಳ್ಗನ್ನಡನಾಡು ಒಕ್ಕುಂದ ಉತ್ಸವ ಸಂಘದಿಂದ ಬುಧವಾರ ಮನವಿ ಸಲ್ಲಿಸಲಾಯಿತು
ಒಕ್ಕುಂದ ಉತ್ಸವಕ್ಕೆ ₹5 ಲಕ್ಷ ಅನುದಾನ ನೀಡಬೇಕು ಎಂದು ಆಗ್ರಹಿಸಿ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್ ಅವರಿಗೆ ತಿರುಳ್ಗನ್ನಡನಾಡು ಒಕ್ಕುಂದ ಉತ್ಸವ ಸಂಘದಿಂದ ಬುಧವಾರ ಮನವಿ ಸಲ್ಲಿಸಲಾಯಿತು   

ಬೆಳಗಾವಿ: ಜಿಲ್ಲೆಯ ಲಹೊಂಗಲ ತಾಲ್ಲೂಕಿನ ಐತಿಹಾಸಿಕ ಒಕ್ಕುಂದ ಗ್ರಾಮದಲ್ಲಿ ಫೆ.1ರಂದು ನಡೆಯಲಿರುವ ‘ತಿರುಳ್ಗನ್ನಡ ನಾಡು ಒಕ್ಕುಂದ ಉತ್ಸವ’ಕ್ಕೆ ₹5 ಲಕ್ಷ ಅನುದಾನ ಒದಗಿಸಬೇಕು’ ಎಂದು ತಿರುಳ್ಗನ್ನಡನಾಡು ಒಕ್ಕುಂದ ಉತ್ಸವ ಸಂಘದ ಮುಖಂಡರು ಬುಧವಾರ ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌ ಅವರಿಗೆ ಮನವಿ ಸಲ್ಲಿಸಿದರು.

ಕಲೆ, ಸಾಹಿತ್ಯ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ತನ್ನದೇ ಆದ ಹಿರಿಮೆಯನ್ನು ಹೊಂದಿರುವ ಈ ಗ್ರಾಮದ ಇತಿಹಾಸವನ್ನು ನವ ಪೀಳಿಗೆಗೆ ತಿಳಿಸುವ ಉದ್ದೇಶದಿಂದ 2016ರಿಂದ ಒಕ್ಕುಂದ ಉತ್ಸವವನ್ನು ಆಚರಿಸುತ್ತ ಬರಲಾಗಿದೆ. ಈ ಬಾರಿ ಅನುದಾನ ಒದಗಿಸಿ ವೈಭವ ಮರುಕಳಿಸುವಂತೆ ಮಾಡಲು ಅನುಕೂಲ ಕಲ್ಪಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

ಕ್ರಿ.ಶ. 850ರಲ್ಲಿ ರಾಷ್ಟ್ರಕೂಟ ದೊರೆ ಅಮೋಘವರ್ಷ ನೃಪತುಂಗರ ಕಾಲದಲ್ಲಿ ರಚನೆ ಆಗಿರುವ ಕನ್ನಡದ ಮೊಟ್ಟ ಮೊದಲ ಆದ್ಯಗ್ರಂಥ ‘ಕವಿರಾಜಮಾರ್ಗ’ದಲ್ಲಿ ನಾಲ್ಕು ತಿರುಳ್ಗನ್ನಡನಾಡುಗಳನ್ನು ಉಲ್ಲೇಖ ಮಾಡಲಾಗಿದೆ. ಅವುಗಳ ಪೈಕಿ ಒಕ್ಕುಂದ ಕೂಡ ಒಂದು. ಗ್ರಾಮದ ಹೊರ ವಲಯದಲ್ಲಿ ಮಲಪ್ರಭಾ ನದಿ ದಂಡೆಯ ಮೇಲಿರುವ ಪ್ರಾಚೀನ‌ ತ್ರಿಕೂಟೇಶ್ವರ ಮಂದಿರದ ಶಿಲ್ಪಕಲೆ ಇತಿಹಾಸದ ಕುರುಹು ಆಗಿದೆ ಎಂದು ತಿಳಿಸಲಾಗಿದೆ.

ADVERTISEMENT

ಉತ್ಸವ ಸಮಿತಿ ಗೌರವಾಧ್ಯಕ್ಷ ಸಿ.ಕೆ.ಮೆಕ್ಕೇದ ಮಾತನಾಡಿ, ಇತಿಹಾಸ ಪ್ರಸಿದ್ಧ ಉತ್ಸವವನ್ನು ಸರ್ಕಾರದಿಂದಲೇ ಆಚರಿಸಬೇಕು ಎನ್ನುವುದು ನಮ್ಮ ಬೇಡಿಕೆ. ಆ ಪ್ರಕಾರ ಕಳೆದ ಎರಡು ವರ್ಷಗಳಿಂದ ಜಿಲ್ಲಾಡಳಿತ ₹2 ಲಕ್ಷ ಅನುದಾನ ನೀಡಿದೆ. ಈ ವರ್ಷ ಇನ್ನು ವಿಜೃಂಭಣೆಯಿಂದ ಆಚರಿಸಲು ₹5 ಲಕ್ಷಕ್ಕೆ ಏರಿಸಬೇಕು. ಜೊತೆಗೆ ಶಿಲ್ಪ ಮಂದಿರ ಜೀರ್ಣೋದ್ಧಾರ ಕೂಡ ಶೀಘ್ರವೇ ಪುನಃ ಆರಂಭಿಸುವಂತೆ ಜಿಲ್ಲಾಧಿಕಾರಿಗಳಿಗೆ ಕೋರಿದ್ದೇವೆ. ನಮ್ಮ ಮನವಿಗೆ ಜಿಲ್ಲಾಧಿಕಾರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ, ಸ್ವಾಗತ ಸಮಿತಿ ಅಧ್ಯಕ್ಷ ಸಿ.ಬಿ‌.ಗಣಾಚಾರಿ, ಸಲಹಾ ಸಮಿತಿ ಅಧ್ಯಕ್ಷ ಬಸನಗೌಡ ಪೊಲೀಸ್ ಪಾಟೀಲ, ಸಂಘದ ಕಾರ್ಯದರ್ಶಿ ಅಶೋಕ ಭದ್ರಶೆಟ್ಟಿ, ಖಜಾಂಚಿ ಪರ್ವತಗೌಡ ಪಾಟೀಲ, ನಿರ್ದೇಶಕರಾದ ಜಿ‌.ಎಂ.ಸುತಗಟ್ಟಿ, ಮಡಿವಾಳಪ್ಪ ತಡಸಲ್, ಸಿದ್ದನಗೌಡ ಪಾಟೀಲ, ಗ್ರಾಮಸ್ಥರಾದ ಮಲ್ಲಿಕಾರ್ಜುನ ಕಲ್ಲಿ, ಮಂಜುನಾಥ ಹೂವಿನ, ನಾಗಪ್ಪ ಸೊಂಟಕ್ಕಿ ನೇತೃತ್ವ ವಹಿಸಿದ್ದರು.

‘ದೇವಸ್ಥಾನ ಜೀರ್ಣೋದ್ಧಾರ ಆರಂಭಿಸಿ’

ಪುರಾತತ್ವ ಇಲಾಖೆಗೆ ಒಳಪಟ್ಟ ಒಕ್ಕುಂದದ ತ್ರಿಕೂಟೇಶ್ವರ ಮಂದಿರದ ಜೀರ್ಣೋದ್ಧಾರ ಸ್ಥಗಿತಗೊಂಡಿದೆ. ಜೀರ್ಣೋದ್ಧಾರಕ್ಕೆ ತಂದಿದ್ದ ಮರಳು ಇಟ್ಟಿಗೆ ಹಾಳಾಗಿದ್ದು ಯಂತ್ರಗಳು ಇಟ್ಟಲ್ಲಿಯೇ ಇಟ್ಟು ತುಕ್ಕು ಹಿಡಿಯುತ್ತಿವೆ. ತಕ್ಷಣವೇ ಅಭಿವೃದ್ಧಿ ಕೆಲಸ ಶುರು ಮಾಡಬೇಕು. ಶಿಲ್ಪ ಮಂದಿರ ನಡುಗಡ್ಡೆಯಾಗಿದ್ದು ಗ್ರಾಮದ ದರ್ಗಾದಿಂದ ಮಂದಿರವರೆಗೆ ತೂಗು ಸೇತುವೆ ನಿರ್ಮಿಸಬೇಕು. ಇಷ್ಟು ಮಾಡಿದರೆ ಇದೊಂದು ಪ್ರಸಿದ್ಧ ಪ್ರವಾಸಿ ತಾಣ ಆಗಲಿದೆ ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿಗೆ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.