ADVERTISEMENT

‘ಕೋವಾ’ದಿಂದ ಸಿಹಿ ಕಂಡ ಉದ್ಯಮಿ

'ಮೂಡಲಗಿ ಕೋವಾ'ಕ್ಕೆ ಹೆಸರು ತಂದ ಶಿವಾಜಿ

ಬಾಲಶೇಖರ ಬಂದಿ
Published 11 ಸೆಪ್ಟೆಂಬರ್ 2019, 19:30 IST
Last Updated 11 ಸೆಪ್ಟೆಂಬರ್ 2019, 19:30 IST
ಹಾಲು ಕಾಯಿಸುವ ಯಂತ್ರದೊಂದಿಗೆ ಶಿವಾಜಿ ಬೋಂಧರ್
ಹಾಲು ಕಾಯಿಸುವ ಯಂತ್ರದೊಂದಿಗೆ ಶಿವಾಜಿ ಬೋಂಧರ್   

ಮೂಡಲಗಿ: ಶ್ರದ್ಧೆ, ಪರಿಶ್ರಮ ಮತ್ತು ಸಾಧಿಸುವ ಛಲದಿದ್ದರೆ ಯಶಸ್ಸು ಬೆನ್ನು ಹತ್ತುತ್ತದೆ ಎನ್ನುವ ಮಾತಿಗೆ ಇಲ್ಲಿಯ ಕೋವಾ ತಯಾರಕ ಶಿವಾಜಿ ಬಾಪುರಾವ್ ಬೋಂಧರ್ ಉದಾ‌ಹರಣೆಯಾಗಿದ್ದಾರೆ. ತಮ್ಮದೇ ಮಟ್ಟದಲ್ಲಿ ಉದ್ಯಮಿಯಾಗಿ ಹೊರಹೊಮ್ಮಿ, ಕೆಲವರಿಗೆ ಆಸರೆಯೂ ಆಗಿದ್ದಾರೆ.

ಮಹಾರಾಷ್ಟ್ರದ ಇಂದಾಪುರದ ಶಿವಾಜಿ ಬಡತನದಲ್ಲೇ ಬೆಳೆದವರು. 1982ರಲ್ಲಿ ತಮ್ಮ 25ನೇ ವಯಸ್ಸಿನಲ್ಲಿ ಕೆಲಸ ಹುಡುಕಿಕೊಂಡು ಮೂಡಲಗಿಗೆ ಬಂದರು. ಹಾಲಿನ ಡೇರಿಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು. ಅದೇ ಸಂದರ್ಭದಲ್ಲಿ ಕೋವಾ ತಯಾರಿಕೆಯ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ‘ಸ್ವಂತ ಉದ್ಯೋಗ ಆರಂಭಿಸಬಾರದೇಕೆ?’ ಎಂದು, ಸಾಲ ಮಾಡಿ ಸಣ್ಣ ಬಂಡವಾಳದೊಂದಿಗೆ 1987ರಲ್ಲಿ ಕೋವಾ ತಯಾರಿಕೆ ಘಟಕ ಸ್ಥಾಪಿಸಿದ್ದಾರೆ. ಸದ್ಯ 12 ಜನರಿಗೆ ಕೆಲಸ ಕೊಟ್ಟಿದ್ದಾರೆ.

ಪ್ರಸಿದ್ಧ ಧಾರವಾಡ ಪೇಡ ಸೇರಿದಂತೆ ವಿವಿಧೆಡೆಯಲ್ಲಿ ಸಿದ್ಧಗೊಳ್ಳುವ ಪೇಡ, ಸಿಹಿ ತಿನಿಸುಗಳಿಗೆ ಬೇಕಾಗುವ ಕೋವಾ ಪೂರೈಕೆಯಲ್ಲಿ ಬೋಂಧರ್ ಅವರ ಪಾಲು ಇದೆ. ನಿತ್ಯ ಒಂದು ಟನ್‌ ಕೋವಾ ಉತ್ಪಾದಿಸುವ ಉದ್ಯಮಿಯಾಗಿ ಬೆಳೆದಿದ್ದಾರೆ. ‘ಕೋವಾ ಮೂಡಲಗಿಯದು, ಪೇಡ ಧಾರವಾಡದ್ದು’ ಎನ್ನುವಷ್ಟರ ಮಟ್ಟಿಗೆ ಕೋವಾಕ್ಕೆ ಹೆಸರು ತಂದಿದ್ದಾರೆ.

ADVERTISEMENT

ಹಾಲು ಸಂಗ್ರಹ:

ಕೋವಾ ತಯಾರಿಕೆಗಾಗಿ ಪ್ರತಿ ನಿತ್ಯ ಕನಿಷ್ಠ 1,500 ಲೀಟರ್‌ ಹಾಲು ಸಂಗ್ರಹಿಸುತ್ತಾರೆ. ಹಾಲಿನಲ್ಲಿಯ ಗುಣಮಟ್ಟ ತಕ್ಕಂತೆ ದರ ನೀಡುವುದರಿಂದ ರೈತರು ತಾವಾಗಿಯೇ ಮಾರಲು ಮುಂದೆ ಬರುತ್ತಾರೆ. ‘ದಸರಾ ಮತ್ತು ದೀಪಾವಳಿ ಟೈಮ್ದಾಗ ರೈತರಿಂದ ಹಾಲ ಹೆಚ್ಚ ಬರತೈತ್ರೀ. ಆಗ 2,500 ಲೀಟರ್ ಮ್ಯಾಲ್ ಹಾಲ ಕೂಡತೈತ್ರೀ’ ಎನ್ನುವರು ಶಿವಾಜಿ.

ಸಂಗ್ರಹಿಸುವ ಹಾಲು ಕೆಡದಂತೆ 2,200 ಲೀಟರ್‌ ಸಾಮರ್ಥ್ಯದ ಕೋಲ್ಡ್‌ ಸ್ಟೋರೇಜ್ ಘಟಕವಿದೆ. ಬೇಡಿಕೆಗೆ ಅನುಗುಣವಾಗಿ ನಿತ್ಯವೂ ಕೋವಾ ತಯಾರಿಸುತ್ತಾರೆ. ಅದಕ್ಕಾಗಿ 10 ಯಂತ್ರಗಳನ್ನು ಹಾಕಿದ್ದಾರೆ. ದಿನಕ್ಕೆ ಕನಿಷ್ಠ 300ರಿಂದ 500 ಕೆಜಿಯಷ್ಟು ಕೋವಾ ಇಲ್ಲಿ ಸಿದ್ಧಗೊಳ್ಳುತ್ತದೆ. ದಸರಾ, ದೀಪಾವಳಿ ಸಂದರ್ಭದಲ್ಲಿ ದಿನಕ್ಕೆ ಒಂದು ಟನ್‌ನಷ್ಟು ಕೋವಾ ತಯಾರಿಸಿ ಬೇಡಿಕೆಗೆ ತಕ್ಕಂತೆ ಧಾರವಾಡ, ಹುಬ್ಬಳ್ಳಿ, ಬೆಂಗಳೂರು, ಪುಣೆ, ಗೋವಾ ಮೊದಲಾದ ಕಡೆಗಳಿಗೆ ಕಳುಹಿಸುತ್ತಾರೆ.

ಉರುವಲು ಬಳಕೆ:

ಹಾಲು ಕುದಿಸಲು ಬಾಯ್ಲರ್ ಬಳಸುತ್ತಿಲ್ಲ. ಉರುವಲಾಗಿ ಕಟ್ಟಿಗೆ ಬಳಸುತ್ತಾರೆ. ಹೀಗಾಗಿ, ಕೋವಾಕ್ಕೆ ವಿಶಿಷ್ಟ ರುಚಿ ಬರುತ್ತದೆ. ಆದ್ದರಿಂದ ಅವರು ಉತ್ಪಾದಿಸುವ ಕೋವಾಕ್ಕೆ ಹೆಚ್ಚಿನ ಬೇಡಿಕೆ ಇದೆ. ‘ಒಲೆಯಿಂದ ಬಿಸಿಯಾಗಿ ತಯಾರಾಗುವ ಕೋವಾಕ್ಕೆ ದೇಸಿ ಸ್ವಾದ ಇರತೈತ್ರೀ, ಈಗಲೂ ಕಟ್ಟಿಗೆ ಬಳಸಿ ಹಾಲು ಕಾಯಿಸೋದರ್ರೀ’ ಎನ್ನುತ್ತಾರೆ ಅವರು.

ಹಾಲು ಕೆಡದಂತೆ ಕಾಪಾಡುವುದು ಮತ್ತು ಸಮಯ ನಿರ್ವಹಣೆ ಮಹತ್ವದ್ದಾಗಿದೆ. ನಿರ್ಲಕ್ಷ್ಯಕ್ಕೆ ಈ ಉದ್ಯಮದಲ್ಲಿ ಅವಕಾಶವಿಲ್ಲ. ‘ಒಂಚೂರ್ ನಜರ್ ತಪ್ಪಿತಂದ್ರ ಬಾಳ್ ಲುಕ್ಸಾನ್ ಆಗತೈತ್ರಿ’ ಎನ್ನುವುದು ಅವರ ಅನುಭವದ ಮಾತು.

ಬಾಸುಂದಿ, ಮೊಸರು, ಮಜ್ಜಿಗೆ, ತುಪ್ಪ, ಪನ್ನೀರ್ ಕೂಡ ಮಾಡುತ್ತಾರೆ. ಮಕ್ಕಳಾದ ಸುಭಾಷ ಮತ್ತು ರಮೇಶ ತಂದೆಗೆ ಸಾಥ್ ನೀಡುತ್ತಿದ್ದಾರೆ. ತಮ್ಮದೇ ಬ್ರಾಂಡ್‌ನಲ್ಲಿ ಹಾಲು ಮಾರಾಟದ ಯೋಜನೆ ಹೊಂದಿದ್ದಾರೆ.

ಸಂಪರ್ಕಕ್ಕೆ ಮೊ:9448859528.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.