ADVERTISEMENT

ಬೆಳಗಾವಿ| ಕೊನೆಗೂ ಇಳಿಕೆಯಾದ ಈರುಳ್ಳಿ ಬೆಲೆ

ಅಗ್ಗದಲ್ಲಿ ಸೊಪ್ಪು ಮಾರಾಟ : ಮಾಂಸ ದರದಲ್ಲಿ ಸ್ಥಿರ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2019, 19:45 IST
Last Updated 12 ಡಿಸೆಂಬರ್ 2019, 19:45 IST
ಈರುಳ್ಳಿ
ಈರುಳ್ಳಿ   

ಬೆಳಗಾವಿ: ಕಳೆದ ವಾರ ಗಗನಕ್ಕೇರಿದ್ದ ಈರುಳ್ಳಿ ಬೆಲೆ ಕಡಿಮೆಯಾಗಿದ್ದು, ಗ್ರಾಹಕರು ನಿಟ್ಟುಸಿರು ಬಿಟ್ಟಿದ್ದಾರೆ.

ಒಂದು ಕೆ.ಜಿ. ಈರುಳ್ಳಿಗೆ ₹ 200ರ ಗಡಿ ತಲುಪಿದ್ದ ಈರುಳ್ಳಿ ಗಣನೀಯವಾಗಿ ಇಳಿಕೆ ಕಂಡಿದೆ. ಗುರುವಾರ ₹ 70ರಿಂದ ₹ 120ಕ್ಕೆ ಬಂದಿದೆ. ಕಳೆದ ವಾರದಲ್ಲಿ ಈರುಳ್ಳಿ ಕೊರತೆ ಉಂಟಾಗಿದ್ದರಿಂದ ಬೆಲೆ ಏರಿಕೆಯಾಗಿ ಇದುವರೆಗಿನ ಎಲ್ಲ ದಾಖಲೆಗಳನ್ನು ಅಳಿಸಿ ಹಾಕಿತ್ತು. ಆದರೆ, ಈಗ ಅರ್ಧದಷ್ಟು ಬೆಲೆ ಕಡಿಮೆಯಾಗಿದೆ.

‘ಬೆಳಗಾವಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಳೆದವಾರಷ್ಟೇ ಪ್ರತಿ ಕ್ವಿಂಟಲ್‌ ಈರುಳ್ಳಿಗೆ ₹14ಸಾವಿರದಿಂದ ₹18ಸಾವಿರಕ್ಕೆ ಮಾರಾಟವಾಗಿತ್ತು. ಆದರೆ, ಈ ವಾರ ಮಾರುಕಟ್ಟೆಗೆ ಹೆಚ್ಚಿನ ಈರುಳ್ಳಿ ಆವಕ ಆಗಿರುವುದರಿಂದಾಗಿ ₹ 2ಸಾವಿರದಿಂದ ₹ 9ಸಾವಿರದವರೆಗೆ ಮಾರಾಟವಾಗಿದೆ. ಬೆಲೆ ಕಡಿಮೆಯಾಗಿರುವುದರಿಂದ, ಗ್ರಾಹಕರು ಈರುಳ್ಳಿ ಖರೀದಿಗೆ ಮುಂದಾಗುತ್ತಿದ್ದಾರೆ’ಎಂದು ಚಿಲ್ಲರೆ ವ್ಯಾಪಾರಿಯೊಬ್ಬರು ತಿಳಿಸಿದರು.

ADVERTISEMENT

‘ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಗೆ ಬುಧವಾರ ಮಹಾರಾಷ್ಟ್ರದಿಂದ 41 ಲಾರಿಗಳು ಹಾಗೂ ಸ್ಥಳೀಯವಾಗಿ ಈರುಳ್ಳಿ ತುಂಬಿದ 7 ಲಾರಿಗಳು ಬಂದಿದ್ದವು. ಒಟ್ಟು 48 ಲಾರಿ ಈರುಳ್ಳಿ ಆವಕವಾಗಿರುವುದರಿಂದ ಈರುಳ್ಳಿ ಬೆಲೆ ಕಡಿಮೆಯಾಗಿದೆ. ಈ ಹಿಂದೆಹೊರರಾಜ್ಯದ ಈರುಳ್ಳಿ ಬರದಿದ್ದರಿಂದ ದರ ಹೆಚ್ಚಾಗಿತ್ತು’ ಎಂದು ಎಪಿಎಂಸಿ ಕಾರ್ಯದರ್ಶಿ ಡಾ.ಕೆ. ಕೋಡಿಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ಉಳಿದಂತೆ ಆಲೂಗಡ್ಡೆ, ಟೊಮೆಟೊ ದರದಲ್ಲಿ ವ್ಯತ್ಯಾಸಗಳಾಗಿವೆ. ಕೆ.ಜೆ ಆಲೂಗಡ್ಡೆ ₹ 20–40 (ಕಳೆದವಾರ ₹ 20–₹30) ಇತ್ತು. ಟೊಮೆಟೊ ಹಿಂದಿನ ವಾರಕ್ಕಿಂತ ಕಡಿಮೆಯಾಗಿದ್ದು, ₹ 10ರಿಂದ ₹ 30 ಇದೆ. ಇತರ ಯಾವುದೇ ತರಕಾರಿ ದರ ಹೆಚ್ಚಳವಾಗಿಲ್ಲ. ಬೆಂಡೆಕಾಯಿ ₹ 30ರಿಂದ ₹ 50 ಇದೆ. ದೊಡ್ಡಮೆಣಸಿನಕಾಯಿ ₹ 40ರಿಂದ ‌₹ 60, ಬದನೆಕಾಯಿ ₹ 40ರಿಂದ ₹ 60, ಮೆಣಸಿನಕಾಯಿ ₹ 30ರಿಂದ ₹ 50, ಸೌತೆಕಾಯಿ ₹ 60ರಿಂದ ₹ 80 ಇದೆ.

ಸೊಪ್ಪಿನ ದರದಲ್ಲಿ ಇಳಿಕೆ: ಚಳಿಗಾಲ ಆರಂಭವಾಗಿದ್ದರಿಂದತರಕಾರಿ ಚೆನ್ನಾಗಿ ಬೆಳೆದಿದೆ. ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಆವಕವಾಗುತ್ತಿದೆ. ಇದರ ಪರಿಣಾಮ ದರಗಳು ಕಡಿಮೆಯಾಗಿವೆ ಎನ್ನುತ್ತಾರೆ ವ್ಯಾಪಾರಿಗಳು. ಕೊತ್ತಂಬರಿ ಸೊಪ್ಪು (ಒಂದು ಕಂತೆಗೆ ₹ 5ರಿಂದ ₹ 10), ಮೆಂತ್ಯೆ ಸೊಪ್ಪು (₹ 5–₹8 ), ಪುದೀನಾ (₹ 5–₹ 10), ಸಬ್ಬಸಗಿ (₹ 10– ₹ 15) ಬೆಲೆ ಇಳಿಕೆ ಕಂಡಿದೆ.

ಬಾರೆ ಹಣ್ಣು ಕೆ.ಜಿ.ಗೆ ₹ 30– ₹ 40 ಇತ್ತು. ಅನಾನಸ್ (ಒಂದಕ್ಕೆ) ₹ 30ರಿಂದ ₹ 50ರವರೆಗೆ ಇದೆ. ಸೇಬು ಕೆ.ಜಿ.ಗೆ ಸರಾಸರಿ ₹ 60 ರಿಂದ ₹ 120 ಇತ್ತು. ಹೋದ ವಾರವೂ ಇಷ್ಟೇ ಇತ್ತು. ಪೇರಲ, ಚಿಕ್ಕು, ದಾಳಿಂಬೆ ಹಣ್ಣುಗಳು ಕೂಡ ಮಾರುಕಟ್ಟೆಯಲ್ಲಿ ಲಭ್ಯ ಇವೆ.

ಕೋಳಿ ಮಾಂಸ (ಕೆ.ಜೆ.ಗೆ ₹ 150–₹ 160), ಕುರಿ ಮಾಂಸದ (₹ 520–₹ 540) ಬೆಲೆ ಹಿಂದಿನ ವಾರದಷ್ಟೇ ಇದೆ. ಮೀನುಗಳ ಬೆಲೆ ಯಥಾಸ್ಥಿತಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.