ADVERTISEMENT

ಕಿವಿಯೊಲೆ ಮಾರಿ ಮಗಳಿಗೆ ಸ್ಮಾರ್ಟ್‌ ಫೋನ್‌ ಕೊಡಿಸಿದ ಜೋಗಮ್ಮ

ಆನ್‌ಲೈನ್‌ ಶಿಕ್ಷಣ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2020, 11:09 IST
Last Updated 4 ಆಗಸ್ಟ್ 2020, 11:09 IST
ತನ್ನ ಮಗಳೊಂದಿಗೆ ಜೋಗತಿ ಸರೋಜಿನಿ ಬೇವಿನಕಟ್ಟಿ.
ತನ್ನ ಮಗಳೊಂದಿಗೆ ಜೋಗತಿ ಸರೋಜಿನಿ ಬೇವಿನಕಟ್ಟಿ.   

ಬೆಳಗಾವಿ: ಎಸ್ಸೆಸ್ಸೆಲ್ಸಿ ಓದುತ್ತಿರುವ ಮಗಳಿಗೆ ಆನ್‌ಲೈನ್‌ ಶಿಕ್ಷಣ ಸಿಗಲೆಂದು ಇಲ್ಲಿನ ಜೋಗತಿಯೊಬ್ಬರು ತಮ್ಮ ಕಿವಿಯೊಲೆಯನ್ನು ಮಾರಿ ಸ್ಮಾರ್ಟ್‌ ಫೋನ್‌ ಕೊಡಿಸಿದ್ದಾರೆ.ಇಲ್ಲಿನ ಕ್ಲಬ್‌ ರೋಡ್‌ನಲ್ಲಿ ತಾತ್ಕಾಲಿಕ ಶೆಡ್‌ ಹಾಕಿಕೊಂಡು ವಾಸ ಮಾಡಿರುವ ಸರೋಜಿನಿ ಬೇವಿನಕಟ್ಟಿ ಅವರೇ ತಮ್ಮ ಕಿವಿಯೊಲೆ ಮಾರಿದವರು.

ಇವರ ಮಗಳು ನಗರದ ಸರ್ದಾರ್‌ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿದ್ದಾಳೆ. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಪಾಠ–ಪ್ರವಚನಗಳು ನಡೆಯುತ್ತಿಲ್ಲ. ಆನ್‌ಲೈನ್‌ ಮೂಲಕ ಬೋಧಿಸುತ್ತಿರುವ ಪಾಠಗಳನ್ನು ತಪ್ಪದೇ ಆಲಿಸಬೇಕೆಂದು ಶಿಕ್ಷಕರು ಹೇಳಿದ್ದರು.

ಸರೋಜಿನಿ ಅವರು ಮನೆಮನೆಗೆ ತೆರಳಿ ಭಿಕ್ಷೆ ಬೇಡಿ ಬದುಕು ಸಾಗಿಸುತ್ತಿದ್ದಾರೆ. ದೊಡ್ಡ ಮಗನೊಬ್ಬ ರೈಲ್ವೆ ಅಪಘಾತದಲ್ಲಿ ಕಾಲು ಮುರಿದುಕೊಂಡಿದ್ದಾರೆ. ಯಾವುದೇ ಕೆಲಸ ಮಾಡಲಿಕ್ಕಾಗದ ಅವರು, ದಿನವಿಡೀ ಮನೆಯಲ್ಲಿಯೇ ಕಾಲ ಕಳೆಯುತ್ತಾರೆ. ಭಿಕ್ಷೆಯಿಂದಲೇ ಮಗ ಹಾಗೂ ಮಗಳ ಹೊಟ್ಟೆ ಹೊರೆಯುತ್ತಿದ್ದಾರೆ.

ADVERTISEMENT

ಇಂತಹ ಸ್ಥಿತಿಯಲ್ಲಿ ಸ್ಮಾರ್ಟ್‌ ಫೋನ್‌ ಖರೀದಿ ಮಾಡುವಷ್ಟು ಹಣ ಅವರ ಬಳಿ ಇರಲಿಲ್ಲ. ಅದಕ್ಕಾಗಿ ತಾಯಿ ನೀಡಿದ್ದ ಬಂಗಾರದ ಕಿವಿಯೊಲೆಯನ್ನು ಮಾರಾಟ ಮಾಡಿ ₹ 10 ಸಾವಿರ ಪಡೆದುಕೊಂಡರು. ಅದೇ ಹಣದಲ್ಲಿ ಸ್ಮಾರ್ಟ್‌ ಫೋನ್‌ ಹಾಗೂ ಸಿಮ್ ಕಾರ್ಡ್‌ ಖರೀದಿಸಿ ಮಗಳಿಗೆ ಕೊಟ್ಟಿದ್ದಾರೆ. ಮಗಳು ಆನ್‌ಲೈನ್‌ ಪಾಠ ಆಲಿಸುತ್ತಿದ್ದಾರೆ.

‘ಸಾಲಿ ಕಲ್ಯಾಕ ಮಗಳಿಗೆ ಯಾವ್‌ ತ್ರಾಸೂ ಆಗಬಾರದ್ರಿ. ಅದ್ಕ ಜುಮ್ಕಿ (ಕಿವಿಯೊಲೆ) ಮಾರಿ ಮೊಬೈಲ್‌ ಕೊಡಿಸೇನ್ರಿ. ಬಾಳ ಕಷ್ಟದಾಗ ಇದೀವಿ. ಸರ್ಕಾರ ನಮಗೊಂದು ಮನಿ, ಮಗನಿಗೊಂದು ಕೆಲ್ಸ ಕೊಟ್ರ ಚಲೋ ಆಗೈತ್ರಿ’ ಎಂದು ಸರೋಜಿನಿ ಮನವಿ ಮಾಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.