ADVERTISEMENT

ಅಥಣಿ, ಕಾಗವಾಡ: ಅಬ್ಬರದ ಪ್ರಚಾರಕ್ಕೆ ತೆರೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2019, 16:03 IST
Last Updated 3 ಡಿಸೆಂಬರ್ 2019, 16:03 IST

ಬೆಳಗಾವಿ: ಜಿಲ್ಲೆಯ ಗಡಿಯಲ್ಲಿರುವ ಅಥಣಿ ಹಾಗೂ ಕಾಗವಾಡ ವಿಧಾನಸಭಾ ಕ್ಷೇತ್ರಗಳಲ್ಲಿ ಕಣದಲ್ಲಿರುವ ಅಭ್ಯರ್ಥಿಗಳ ಪರ ರಾಜಕೀಯ ಪಕ್ಷಗಳ ಮುಖಂಡರು ಮತ್ತು ಬೆಂಬಲಿಗರು ಹಲವು ದಿನಗಳಿಂದ ನಡೆಸುತ್ತಿದ್ದ ಅಬ್ಬರದ ಪ್ರಚಾರಕ್ಕೆ ಮಂಗಳವಾರ ತೆರೆ ಬಿದ್ದಿತು. ಬುಧವಾರ ಮನೆ ಮನೆಗಳಿಗೆ ತೆರಳಿ ಮತಯಾಚಿಸಲು ಅವಕಾಶವಿದೆ. ಡಿ.5ರಂದು (ಗುರುವಾರ) ನಡೆಯಲಿರುವ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ.

ಅಥಣಿಯಲ್ಲಿ 8 ಮಂದಿ ಕಣದಲ್ಲಿದ್ದಾರೆ. ಎಲ್ಲರೂ ಪ್ರಚಾರದಲ್ಲಿ ನಿರತರಾಗಿದ್ದರು. ಬಿಜೆಪಿಯಿಂದ ಮಹೇಶ ಕುಮಠಳ್ಳಿ ಹಾಗೂ ಕಾಂಗ್ರೆಸ್‌ನ ಗಜಾನನ ಅಭ್ಯರ್ಥಿಗಳ ಪರವಾಗಿ ಆಯಾ ಪಕ್ಷದ ನಾಯಕರು ಸಭೆ, ಸಮಾರಂಭ ಹಾಗೂ ಸಮಾವೇಶಗಳ ಮೂಲಕ ಪ್ರಚಾರ ನಡೆಸಿದರು.

ಪಕ್ಕದ ಕಾಗವಾಡ ಕ್ಷೇತ್ರದಲ್ಲಿ 9 ಮಂದಿ ಕಣದಲ್ಲಿದ್ದಾರೆ. ಈ ಪೈಕಿ ಬಿಜೆಪಿಯ ಶ್ರೀಮಂತ ಪಾಟೀಲ ಹಾಗೂ ಕಾಂಗ್ರೆಸ್‌ನ ಭರಮಗೌಡ (ರಾಜು) ಕಾಗೆ ನಡುವೆ ತೀವ್ರ ಹಣಾಹಣಿ ಕಂಡುಬಂದಿತು. ಜೆಡಿಎಸ್‌ನ ಶ್ರೀಶೈಲ ತುಗಶೆಟ್ಟಿ ಕೂಡ ಪೈಪೋಟಿ ನೀಡಿದ್ದಾರೆ. ಅಲ್ಲೂ ಆಯಾ ಪಕ್ಷದ ಮುಖಂಡರು ದಂಡು ದಂಡಾಗಿ ಬಂದು ಜೋರಾಗಿಯೇ ಪ್ರಚಾರ ನಡೆಸಿದ್ದಾರೆ.

ADVERTISEMENT

ಬಿಜೆಪಿ ಪರವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 2 ಸುತ್ತಿನ ಪ್ರಚಾರ ನಡೆಸಿದ್ದಾರೆ. ಅಲ್ಲದೇ, ವಾಸ್ತವ್ಯವನ್ನೂ ಹೂಡಿದ್ದರು. ಅವರೊಂದಿಗೆ ಉಪ ಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ ಹಾಗೂ ಗೋವಿಂದ ಕಾರಜೋಳ, ಸಚಿವರಾದ ಸಿ.ಸಿ. ಪಾಟೀಲ, ಜಗದೀಶ ಶೆಟ್ಟರ್, ಕೆ.ಎಸ್. ಈಶ್ವರಪ್ಪ, ಶಶಿಕಲಾ ಜೊಲ್ಲೆ, ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ಸಂಸದ ಅಣ್ಣಾಸಾಹೇಬ ಜೊಲ್ಲೆ, ವಿಧಾನಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್ ಮೊದಲಾದ ಪ್ರಮುಖರು ಬಿಜೆಪಿ ಪರವಾಗಿ ಕ್ಷೇತ್ರ ಸಂಚಾರ ಮಾಡಿದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿಗಳ ಪರವಾಗಿ ವಿಧಾನಸಭೆ ವಿರೋಧಪಕ್ಷದ ನಾಯಕ ಒಂದು ಸುತ್ತಿನ ಪ್ರಚಾರ ನಡೆಸಿದರು. ಒಂದು ದಿನ ಅಲ್ಲೇ ತಂಗಿದ್ದರು. ಅವರೊಂದಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಶಾಸಕರಾದ ಎಂ.ಬಿ. ಪಾಟೀಲ, ಲಕ್ಷ್ಮಿ ಹೆಬ್ಬಾಳಕರ, ಸತೀಶ ಜಾರಕಿಹೊಳಿ ಮತ್ತಿತರರು ಪ್ರಚಾರ ನಡೆಸಿದ್ದಾರೆ.

ಕಾಗವಾಡದಲ್ಲಿ ಜೆಡಿಎಸ್‌ ಅಭ್ಯರ್ಥಿ ಪರವಾಗಿ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಪ್ರಚಾರ ಮಾಡಿದ್ದಾರೆ.

ಆರೋಪ–ಪ್ರತ್ಯಾರೋಪ, ಟೀಕೆ–ಪ್ರತಿ ಟೀಕೆಗಳಿಗೆ ವೇದಿಕೆಯಾಗಿದ್ದ ಈ ಕ್ಷೇತ್ರಗಳಲ್ಲಿ ಚುನಾವಣೆಯು ಮುಖ್ಯ ಘಟ್ಟಕ್ಕೆ ಬಂದು ನಿಂತಿದೆ. ಕೊನೆ ಕ್ಷಣದ ತಂತ್ರ–ಪ್ರತಿತಂತ್ರಗಳ ಮೂಲಕ ಮತದಾರರ ಮನಗೆಲ್ಲಲು ಪಕ್ಷಗಳವರು ಆದ್ಯತೆ ನೀಡಿದ್ದಾರೆ. ಮತದಾರರು ಹಕ್ಕು ಚಲಾಯಿಸಲು ಅಗತ್ಯವಾದ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿದೆ. ಕಣದಲ್ಲಿರುವ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಬರೆಯಲು ಜನರು ಕೂಡ ಸಿದ್ಧವಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.