ADVERTISEMENT

ಬೆಳಗಾವಿ: ಫಿಟ್‌ನೆಸ್‌ಗೆ ಜಿಮ್‌, ವಿರಾಮಕ್ಕೆ ಉದ್ಯಾನ

‘ಅಮೃತ್’ ಯೋಜನೆಯಡಿ ₹ 2.50 ಕೋಟಿ ವೆಚ್ಚದಲ್ಲಿ ನಿರ್ಮಾಣ

ಎಂ.ಮಹೇಶ
Published 24 ಜೂನ್ 2019, 19:30 IST
Last Updated 24 ಜೂನ್ 2019, 19:30 IST
ಬೆಳಗಾವಿಯ ಬಾಕ್ಸೈಟ್ ರಸ್ತೆಯಲ್ಲಿ ಪಾಲಿಕೆಯಿಂದ ಉದ್ಯಾನ ಅಭಿವೃದ್ಧಿಪಡಿಸುವ ಕಾಮಗಾರಿ ನಡೆದಿದೆ– ಪ್ರಜಾವಾಣಿ ಚಿತ್ರ
ಬೆಳಗಾವಿಯ ಬಾಕ್ಸೈಟ್ ರಸ್ತೆಯಲ್ಲಿ ಪಾಲಿಕೆಯಿಂದ ಉದ್ಯಾನ ಅಭಿವೃದ್ಧಿಪಡಿಸುವ ಕಾಮಗಾರಿ ನಡೆದಿದೆ– ಪ್ರಜಾವಾಣಿ ಚಿತ್ರ   

ಬೆಳಗಾವಿ: ಇಲ್ಲಿನ ಬಾಕ್ಸೈಟ್‌ ರಸ್ತೆಯ ಗ್ರೀನ್ ಗಾರ್ಡನ್‌ ಕಲ್ಯಾಣಮಂಟಪದ ಎದುರಿನಲ್ಲಿ, ಎಚ್‌.ಡಿ. ಕುಮಾರಸ್ವಾಮಿ ಬಡಾವಣೆಯ ಸಮೀಪದಲ್ಲಿ ನಗರಪಾಲಿಕೆಯಿಂದ ₹ 2.50 ಕೋಟಿ ವೆಚ್ಚದಲ್ಲಿ ದೊಡ್ಡದಾದ ಉದ್ಯಾನ, ಬಯಲು ವ್ಯಾಯಾಮಶಾಲೆ (ಓಪನ್ ಜಿಮ್), ಈಜುಕೊಳ ನಿರ್ಮಿಸಲಾಗುತ್ತಿದೆ.

ಕೇಂದ್ರ ಪುರಸ್ಕೃತ ‘ಅಮೃತ್’ ಯೋಜನೆಯಲ್ಲಿ ಉದ್ಯಾನ ಮೈದಳೆಯುತ್ತಿದೆ. ಕಲ್ಲು ಬಂಡೆಗಳಿಂದ ಕೂಡಿದ್ದ, ಬಹುತೇಕ ಕಂದಕದಂತಿದ್ದ ಈ ಪ್ರದೇಶವನ್ನು ಸಮತಟ್ಟು ಮಾಡಿ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ. ಕಾಂಪೌಂಡ್‌ ನಿರ್ಮಿಸಲಾಗಿದೆ. ಇನ್ನೊಂದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದ್ದು, ನಂತರ ಈ ಭಾಗದ ಜನರಿಗೆ ವಿಶ್ರಾಂತಿ ಪಡೆಯಲು, ವಾಯುವಿಹಾರ ಮಾಡಲು ಅನುಕೂಲವಾಗಲಿದೆ.

‘ಇಲ್ಲಿ ಏಕಕಾಲಕ್ಕೆ 25 ಮಂದಿ ವ್ಯಾಯಾಮ ಮಾಡುವುದಕ್ಕೆ ಬೇಕಾದ ಸಲಕರಣೆಗಳನ್ನು ಅಳವಡಿಸಲಾಗುತ್ತಿದೆ. ವಾಕ್‌ ಮಾಡುವುದಕ್ಕಾಗಿ ಪ್ರತ್ಯೇಕ ಪಥವನ್ನು ನಿರ್ಮಿಸಲಾಗುತ್ತಿದೆ. ಮಕ್ಕಳಿಗಾಗಿ ಪ್ರತ್ಯೇಕ ವಿಭಾಗ ಮಾಡಲಾಗಿದ್ದು, ಅವರ ಆಟಕ್ಕಾಗಿ ಆಟಿಕೆಗಳನ್ನು ಅಳವಡಿಸಲಾಗಿದೆ. ‘ನಿಶ್ಯಬ್ದ ವಲಯ’ವೆಂಬ ಪ್ರತ್ಯೇಕ ವಿಭಾಗದಲ್ಲಿ ಯೋಗ ಮಾಡುವುದಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಕುಡಿಯುವ ನೀರು, ಅಲ್ಲಲ್ಲಿ ಆಸನಗಳ ವ್ಯವಸ್ಥೆ ಮಾಡಲಾಗುವುದು’ ಎಂದು ನಗರಪಾಲಿಕೆ ಆಯುಕ್ತ ಶಶಿಧರ ಕುರೇರ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಹುಲ್ಲುಹಾಸು ಹಾಕುವ, ಸಸಿಗಳನ್ನು ನೆಡುವ ಕಾರ್ಯ ಶೀಘ್ರವೇ ಆರಂಭವಾಗಲಿದ್ದು, ಒಂದು ತಿಂಗಳಲ್ಲಿ ಉದ್ಯಾನ ಮತ್ತಷ್ಟು ಗಮನಸೆಳೆಯಲಿದೆ. ಈಗಾಗಲೇ ಕೆಲವರು ಅಲ್ಲಿಗೆ ಬಂದು ವಾಕ್‌ ಮಾಡುತ್ತಿದ್ದಾರೆ. ಕಾಮಗಾರಿ ಮುಗಿದ ನಂತರ ಅಧಿಕೃತವಾಗಿ ಉದ್ಘಾಟನೆ ನೆರವೇರಿಸಲಾಗುವುದು. ಆ ಭಾಗದಲ್ಲಿ ಉದ್ಯಾನಗಳ ಕೊರತೆ ಇತ್ತು. ಸುಸಜ್ಜಿತವಾದ ’ ಎಂದು ನಗರಪಾಲಿಕೆ ಆಯುಕ್ತ ಶಶಿಧರ ಕುರೇರ ‘ಪ್ರಜಾವಾಣಿ’ಗೆ ತಿಳಿಸಿದರು.

ಶಾಹು ನಗರ, ನೆಹರೂ ನಗರ, ಅಜಂ ನಗರ, ಸಂಗಮೇಶ್ವರ ನಗರ, ಎಚ್‌.ಡಿ. ಕುಮಾರಸ್ವಾಮಿ ಬಡಾವಣೆ, ಹನುಮಾನ್‌ ನಗರ ಮೊದಲಾದ ಬಡಾವಣೆಗಳ ನೂರಾರು ಮಂದಿ ಎಪಿಎಂಸಿ ಠಾಣೆ ಎದುರಿನ ಬಾಕ್ಸೈಟ್‌ ರಸ್ತೆ ಬದಿಯಲ್ಲಿ ನಿತ್ಯವೂ ಬೆಳಿಗ್ಗೆ ಮತ್ತು ಸಂಜೆ ವಾಕಿಂಗ್, ಜಾಗಿಂಗ್‌ನಲ್ಲಿ ತೊಡಗುವುದು ಕಂಡುಬರುತ್ತದೆ. ಇವರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಉದ್ಯಾನ ನಿರ್ಮಿಸಲಾಗಿದೆ.

ಗುತ್ತಿಗೆದಾರರಿಗೆ ನೀಡಿದ್ದ ಗಡುವಿನ ಪ್ರಕಾರ, ಈ ವೇಳೆಗಾಗಲೇ ಕಾಮಗಾರಿ ಪೂರ್ಣಗೊಳ್ಳಬೇಕಾಗಿತ್ತು. ಆದರೆ, ಗಡುವು ಮುಗಿದು ಆರು ತಿಂಗಳು ಕಳೆದಿದ್ದರೂ ಅಂತಿಮ ಹಂತದ ಕೆಲಸಗಳು ಬಾಕಿ ಉಳಿದಿವೆ. ‘ಸಮತಟ್ಟಾದ ಜಾಗವಾಗಿದ್ದರೆ ಗಡುವು ಪ್ರಕಾರ ಕಾಮಗಾರಿ ಮುಗಿಯುತ್ತಿತ್ತು. ಕಲ್ಲು ಬಂಡೆಗಳಿಂದ ಕೂಡದ್ದ ಸ್ಥಳ ಇದಾಗಿದ್ದರಿಂದ ಅವುಗಳನ್ನು ತೆರವುಗೊಳಿಸಿ, ಮಣ್ಣು ತುಂಬಿ ಹದಗೊಳಿಸಬೇಕಾಯಿತು. ನಂತರ ಪೈಪ್‌ಲೈನ್ ಕಾಮಗಾರಿ ನಡೆಸಲಾಯಿತು’ ಎಂದು ಕುರೇರ ಹೇಳಿದರು.

‘ಅಮೃತ್‌ ಯೋಜನೆಯಡಿ ₹ 50 ಲಕ್ಷ ವೆಚ್ಚದಲ್ಲಿ ಉದ್ಯಾನ ಅಭಿವೃದ್ಧಿಪಡಿಸಲಾಗುವುದು. ಸಾರ್ವಜನಿಕರು ಫಿಟ್‌ನೆಸ್‌ ಕಾಪಾಡಿಕೊಳ್ಳುವುದಕ್ಕೆ ಅನುವಾಗುವಂತೆ ಅಲ್ಲಲ್ಲಿ ಉದ್ಯಾನಗಳು, ಬಯಲು ವ್ಯಾಯಮಶಾಲೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.