ADVERTISEMENT

ಪದ್ಮಶ್ರೀ ಪ್ರಶಸ್ತಿ: ಕೆಎಲ್‌ಇ ಸಮೂಹಕ್ಕೆ, ರೈತರಿಗೆ ಅರ್ಪಿಸುವೆ; ಪ್ರಭಾಕರ ಕೋರೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2026, 14:36 IST
Last Updated 25 ಜನವರಿ 2026, 14:36 IST
<div class="paragraphs"><p>ಪ್ರಭಾಕರ ಕೋರೆ </p></div>

ಪ್ರಭಾಕರ ಕೋರೆ

   

ಬೆಳಗಾವಿ: ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಸಲ್ಲಿಸಿದ ಅದ್ವಿತೀಯ ಸೇವೆ ಪರಿಗಣಿಸಿ, ರಾಜ್ಯಸಭೆ ಮಾಜಿ ಸದಸ್ಯ ಪ್ರಭಾಕರ ಬಸಪ್ರಭು ಕೋರೆ ಅವರಿಗೆ ಕೇಂದ್ರ ಸರ್ಕಾರವು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಕೆಎಲ್‌ಇ ಸಂಸ್ಥೆಯ ಮೂಲಕ ವೈದ್ಯಕೀಯ, ತಾಂತ್ರಿಕ, ಎಂಜಿನಿಯರಿಂಗ್ ಹಾಗೂ ಸಾಮಾನ್ಯ ಶಿಕ್ಷಣ ಕ್ಷೇತ್ರಗಳಲ್ಲಿ ಅನೇಕ ಮಹಾವಿದ್ಯಾಲಯ ಸ್ಥಾಪಿಸಿ, ಲಕ್ಷಾಂತರ ವಿದ್ಯಾರ್ಥಿಗಳ ಬದುಕಿಗೆ ನೆರವಾಗಿದ್ದಾರೆ.

ADVERTISEMENT

1947ರ ಆಗಸ್ಟ್‌ 1ರಿಂದ ಜನಿಸಿದ ಅವರು, ಬಿ.ಕಾಂ ಪದವೀಧರ. ಶಿಕ್ಷಣ, ಕೃಷಿ, ಸಹಕಾರ, ರಾಜಕೀಯ ವಲಯ, ಚಲನಚಿತ್ರ ಉದ್ಯಮ ಮತ್ತು ಸಾಮಾಜಿಕ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಮೂರು ಅವಧಿಗೆ (1990-1996, 2008-2014, 2014-2020) ರಾಜ್ಯಸಭಾ ಸದಸ್ಯರಾಗಿ ಕೆಲಸ ಮಾಡಿದ್ದಾರೆ. 2001ರಿಂದ 2007ರವರೆಗೆ ವಿಧಾನ ಪರಿಷತ್‌ ಸದಸ್ಯರಾಗಿ ಕರ್ತವ್ಯ ನಿರ್ವಹಿಸಿದ್ದಾರೆ.

1984ರಲ್ಲಿ ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷರಾಗಿ ಅಧಿಕಾರ ಹಿಡಿದಾಗ ಕೆಎಲ್‌ಇ ಸಂಸ್ಥೆಯ ಅಂಗಸಂಸ್ಥೆ 38 ಇದ್ದವು. ಈ ಆ ಸಂಖ್ಯೆ 317ಕ್ಕೆ ಏರಿಕೆಯಾಗಿದೆ. ಪ್ರಸ್ತುತ ಅಖಿಲ ಭಾರತ ವೀರಶೈವ ಮಹಾಸಭೆ ರಾಷ್ಟ್ರೀಯ ಘಟಕದ ಉಪಾಧ್ಯಕ್ಷರಾಗಿದ್ದಾರೆ.

2003ರಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ 70ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷರಾಗಿ ದುಡಿದಿದ್ದಾರೆ. 2003ರಲ್ಲಿ ಬೆಳಗಾವಿಯಲ್ಲಿ ನಡೆದ ಐದನೇ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದ ಕಾರ್ಯಾಧ್ಯಕ್ಷರಾಗಿ ದುಡಿದಿದ್ದಾರೆ.

2006 ಮತ್ತು 2009ರಲ್ಲಿ ಕೆಎಲ್‌ಇ ಸಂಸ್ಥೆಯ ಜೆಎನ್‌ಎಂಸಿ ಆವರಣದಲ್ಲಿ ಎರಡು ಬಾರಿ ಕರ್ನಾಟಕ ವಿಧಾನಮಂಡಲ ಅಧಿವೇಶನ ಯಶಸ್ವಿಯಾಗಿ ಆಯೋಜಿಸಿದ್ದಾರೆ. 2011ರಲ್ಲಿ ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಾಣದಲ್ಲಿ ಅವರ ಪ್ರಯತ್ನವೂ ಸ್ಮರಣೀಯ

ಕೆಎಲ್‌ಇ ಸಮೂಹಕ್ಕೆ, ರೈತರಿಗೆ ಅರ್ಪಿಸುವೆ:

‘ನನಗೆ ಪದ್ಮಶ್ರೀ ಪ್ರಶಸ್ತಿ ಸಿಕ್ಕಿದ್ದಕ್ಕೆ ಖುಷಿಯಾಗಿದೆ. ಇದನ್ನು ಕೆಎಲ್‌ಇ ಸಂಸ್ಥೆಯ ಇಡೀ ಸಮೂಹಕ್ಕೆ ಮತ್ತು ರೈತರಿಗೆ ಅರ್ಪಿಸುವೆ’ ಎಂದು ಪ್ರಭಾಕರ ಕೋರೆ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯಾವುದೇ ಪ್ರಶಸ್ತಿಗಾಗಿ ನಾನು ಕೆಲಸ ಮಾಡಿದವನಲ್ಲ. ಸಾಮಾಜಿಕ ಸೇವೆ ನನ್ನ ಉಸಿರು. ಹಿಂದಿನಿಂದಲೂ ಉತ್ತರ ಕರ್ನಾಟಕದಲ್ಲಿ ಶಿಕ್ಷಣದ ಕೊರತೆ ಇತ್ತು. ಮುಂಬೈ ಪ್ರಾಂತ್ಯ ಶಿಕ್ಷಣದಿಂದ ವಂಚಿತವಾಗಿತ್ತು. ಹಾಗಾಗಿ  ಗಡಿಭಾಗದ ಹಳ್ಳಿ–ಹಳ್ಳಿಗಳ ಜನರಿಗೆ ಶಿಕ್ಷಣ ಒದಗಿಸಲು ಕೆಲಸ ಮಾಡಿದೆ. ಗಡಿಭಾಗದಲ್ಲಿ ಕನ್ನಡ ಕಟ್ಟಿ ಬೆಳೆಸುವ ಕೆಲಸ ಮಾಡಿದೆ. ನಿಪ್ಪಾಣಿಯಲ್ಲಿ ಮೊದಲ ಕನ್ನಡ ಶಾಲೆ ತೆರೆದೆ. ಇದನ್ನು ಗುರುತಿಸಿ ಪ್ರಶಸ್ತಿ ದೊರೆತಿದ್ದು ಸಂತಸ ತಂದಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.