ADVERTISEMENT

ಪರಸಗಡ ನಾಟಕೋತ್ಸವ: ರಂಗ ಪ್ರಶಸ್ತಿಗಳಿಗೆ ಮೂವರು ಆಯ್ಕೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 4:15 IST
Last Updated 3 ಜನವರಿ 2026, 4:15 IST
ರಜನಿ ಗರುಡ
ರಜನಿ ಗರುಡ   

ಸವದತ್ತಿ: ಇಲ್ಲಿನ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆಯಿಂದ ಜ.24ರಿಂದ ಫೆ. 2ರವರೆಗೆ ಜರುಗಲಿರುವ ಪರಸಗಡ ನಾಟಕೋತ್ಸವದಲ್ಲಿ ರಂಗ ಸಾಧಕರಿಗೆ ಪ್ರತಿವರ್ಷ ನೀಡಲಾಗುವ ‘ರಂಗ ಆರಾಧಕ’ ಹಾಗೂ ‘ರಂಗ ಚಂದ್ರ ಪ್ರಶಸ್ತಿ’ ಗಳಿಗೆ ಮೂವರನ್ನು ಆಯ್ಕೆ ಮಾಡಲಾಗಿದೆ.

ರುದ್ರಪ್ಪ ಶಿಂಧೆ ಇವರಿಂದ ಹಾಗೂ ದಿ. ವಿ.ಆರ್. ಕಾರದಗಿ ಇವರ ಸ್ಮರಣಾರ್ಥ ನೀಡಲಾಗುವ ಪ್ರತ್ಯೇಕ ಎರಡು ‘ರಂಗ ಆರಾಧಕ ಪ್ರಶಸ್ತಿ’ ಗಳಿಗೆ ಧಾರವಾಡದ ಗೊಂಬೆ ಮನೆಯ ರಂಗಕರ್ಮಿ ದಂಪತಿ ರಜನಿ ಮತ್ತು ಡಾ. ಪ್ರಕಾಶ ಗರುಡ, ದಿ. ಚಂದ್ರಕಾಂತ ಸುಳ್ಳದ ಸ್ಮರಣಾರ್ಥ ನೀಡುವ ‘ರಂಗ ಚಂದ್ರ’ ಪ್ರಶಸ್ತಿಗೆ ಧಾರವಾಡದ ಜಾನಪದ ಸಂಶೋಧನಾ ಕೇಂದ್ರದ ವಿಶ್ವೇಶ್ವರಿ ಬಸಲಿಂಗಯ್ಯ ಹಿರೇಮಠ ಅವರು ಆಯ್ಕೆಯಾಗಿದ್ದಾರೆ. ಪರಸಗಡ ನಾಟಕೋತ್ಸವದ ಮೊದಲ ದಿನ ₹5 ಸಾವಿರ ನಗದು ಹಾಗೂ ಸ್ಮರಣ ಫಲಕ ಒಳಗೊಂಡ ಈ ರಂಗ ಪ್ರಶಸ್ತಿಗಳನ್ನು ಪ್ರದಾನಿಸಲಾಗುವುದು.

ನಾಟಕೋತ್ಸವದಲ್ಲಿ ರಂಗ ಆರಾಧನೆಯಿಂದ ‘ಬಿರುಕು’ ಹಾಗೂ ‘ಮಾಂತಮಲ್ಲಯ್ಯ’ ಧಾರವಾಡದ ರಂಗಾಯಣದಿಂದ ‘ಕಂದಗಲ್ಲರಿಗೆ ನಮಸ್ಕಾರ’ ಅರ್ಥಾತ್ ಕಂದಗಲ್ಲ ಭಾರತ, ಬೆಳಗಾವಿಯ ವೇನಾಸಂ ನಿಂದ ‘ಸಾಹೇಬರು ಸಾಕಿದ ನಾಯಿ’, ಉಡುಪಿಯ ಕೊಡವೂರು ಸುಮನಸಾದಿಂದ ‘ಈದಿ’ ಹಾಗೂ ‘ಶಿಕಾರಿ’ ಹಾಗೂ ಧಾರವಾಡದ ರಂಗ ಸಾಮ್ರಾಟ ರಂಗಶಾಲೆಯಿಂದ ‘ಅಪ್ಪ ಅವ್ವ ಡಾಟ್ ಕಾಂ’ ಮತ್ತು ಸಾಣೇಹಳ್ಳಿಯ ಶಿವ ಸಂಚಾರ ದಿಂದ ‘ಜಂಗಮದೆಡೆಗೆ’, ‘ಕಳ್ಳರ ಸಂತೆ’ ಹಾಗೂ ನಾಡೋಜ ನಾಟ್ಯ ಭೂಷಣ ಏಣಗಿ ಬಾಳಪ್ಪನವರ ಸ್ಮರಣಾರ್ಥ ‘ಶಿವಯೋಗಿ ಸಿದ್ಧರಾಮೇಶ್ವರ’ ಸಾಮಾಜಿಕ ಕಳಕಳಿಯುಳ್ಳ ನಾಟಕಗಳು ಪ್ರದರ್ಶನಗೊಳ್ಳಲಿವೆ. ಜೊತೆಗೆ ಈ ಬಾರಿ ನಾಟಕಗಳ ಉತ್ಸವವನ್ನು ಹತ್ತು ದಿನಗಳವರೆಗೆ ಪ್ರದರ್ಶಿಸಲಾಗುವದೆಂದು ಸಂಘಟನೆಯ ಅಧ್ಯಕ್ಷ ಶ್ರೀನಿವಾಸ ಗದಗ ಹಾಗೂ ಪ್ರಮುಖ ಝಕೀರ ನದಾಫ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT
ಡಾ.ಪ್ರಕಾಶ ಗರುಡ
ವಿಶ್ವೇಶ್ವರಿ ಹಿರೇಮಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.