ADVERTISEMENT

ಉತ್ತಮ ಸಂಬಳ ನೀಡುತ್ತೇವೆ; ವಸೂಲಿಗೆ ಇಳಿಯಬೇಡಿ: ಎಂ.ಬಿ. ಪಾಟೀಲ

ಪೊಲೀಸರಿಗೆ ಗೃಹ ಸಚಿವ ಎಂ.ಬಿ. ಪಾಟೀಲ ಸೂಚನೆ;

​ಪ್ರಜಾವಾಣಿ ವಾರ್ತೆ
Published 1 ಜುಲೈ 2019, 15:24 IST
Last Updated 1 ಜುಲೈ 2019, 15:24 IST

ಬೆಳಗಾವಿ: ‘ಇತರ ಇಲಾಖೆಗಳಿಗೆ ಸಮಾನಾಂತರವಾಗಿ ಪೊಲೀಸರಿಗೂ ವೇತನ ನೀಡಲಾಗುವುದು. ಇನ್ನು ಮುಂದೆ ಪೊಲೀಸರು ಯಾವುದೇ ಲಂಚ, ವಸೂಲಿಗೆ ಮುಂದಾಗಬಾರದು’ ಎಂದು ಗೃಹ ಸಚಿವ ಎಂ.ಬಿ. ಪಾಟೀಲ ಎಚ್ಚರಿಕೆ ನೀಡಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇತರ ಇಲಾಖೆಗಳ ಅಧಿಕಾರಿಗಳಿಗೆ ಸಮಾನಾಂತರವಾಗಿ ಪೊಲೀಸರಿಗೂ ವೇತನ ನೀಡಬೇಕು. ಇದೇ ರೀತಿ ಪದೋನ್ನತಿಗಳನ್ನು ಕೂಡ ಕಾಲಕಾಲಕ್ಕೆ ನೀಡಬೇಕೆಂದು ಔರಾದಕರ್‌ ವರದಿ ಶಿಫಾರಸ್ಸು ಮಾಡಿದೆ. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸದ್ಯದಲ್ಲಿಯೇ ಅನುಷ್ಠಾನಗೊಳಿಸಲಾಗುವುದು’ ಎಂದು ಹೇಳಿದರು.

‘ಬೆಳಗಾವಿಯಲ್ಲಿ ಪೊಲೀಸ್ ಸಿಬ್ಬಂದಿಗಳಿಗೆ 72 ವಸತಿಗೃಹ ನಿರ್ಮಿಸಲಾಗಿದೆ. ಇದೇ ರೀತಿ ನಿಪ್ಪಾಣಿ, ಚನ್ನಮ್ಮನ ಕಿತ್ತೂರು, ಹಿರೇಬಾಗೇವಾಡಿ ಸೇರಿದಂತೆ ವಿವಿಧೆಡೆ ವಸತಿ ಗೃಹ ನಿರ್ಮಿಸಿ, ಹಂಚಲಾಗುವುದು. ಪೊಲೀಸರಿಗೆ ಒಳ್ಳೆಯ ವೇತನ ಹಾಗೂ ಸೌಲಭ್ಯಗಳನ್ನು ನೀಡಲು ಸರ್ಕಾರ ಬದ್ಧವಾಗಿದೆ. ಇದೇ ರೀತಿ ಪೊಲೀಸರು ಕೂಡ ಬದ್ಧತೆ ಪ್ರದರ್ಶಿಸಬೇಕು. ಕೆಲವು ಪೊಲೀಸರು ಲಂಚ ಪಡೆಯುತ್ತಾರೆ, ವಸೂಲಿ ಪಡೆಯುತ್ತಾರೆ ಎನ್ನುವ ಆರೋಪಗಳು ಕೇಳಿಬಂದಿದ್ದು, ತಕ್ಷಣ ಇದನ್ನು ನಿಲ್ಲಿಸಬೇಕು. ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು’ ಎಂದು ನುಡಿದರು.

ADVERTISEMENT

‘ಇನ್ನು ಮೇಲೆ ಪ್ರತಿಯೊಂದು ಪೊಲೀಸ್‌ ಠಾಣೆಗೆ ಇಬ್ಬರು ಪಿಎಸ್‌ಐಗಳನ್ನು ನಿಯುಕ್ತಿಗೊಳಿಸಲಾಗುವುದು. ಒಬ್ಬರು ಕಾನೂನು ಸುವ್ಯವಸ್ಥೆ ನೋಡಿಕೊಂಡರೆ, ಇನ್ನೊಬ್ಬರು ತನಿಖೆಯ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ. ಗದಗ ಹಾಗೂ ವಿಜಯಪುರಕ್ಕೆ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹುದ್ದೆ ಸೃಷ್ಟಿಸಲು ಬೇಡಿಕೆ ಬಂದಿದೆ. ಶೀಘ್ರದಲ್ಲಿಯೇ ಇದರ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಕಾನ್‌ಸ್ಟೇಬಲ್‌ಗಳ ನೇಮಕ:

‘ರಾಜ್ಯದಲ್ಲಿ ಸುಮಾರು 24,000 ಪೊಲೀಸ್‌ ಕಾನ್‌ಸ್ಟೇಬಲ್‌ಗಳ ಹುದ್ದೆ ಭರ್ತಿ ಮಾಡಬೇಕಾಗಿದೆ. ಮೂರು ವರ್ಷಗಳ ಅವಧಿಯಲ್ಲಿ ಹಂತ ಹಂತವಾಗಿ ನೇಮಕ ಮಾಡಿಕೊಳ್ಳಲಾಗುವುದು’ ಎಂದು ತಿಳಿಸಿದರು.

‘ಇತ್ತೀಚಿನ ದಿನಗಳಲ್ಲಿ ಹಣಕಾಸಿಗೆ ಸಂಬಂಧಿಸಿದಂತೆ ಹೆಚ್ಚು ಅಪರಾಧ ಪ್ರಕರಣಗಳು ಸಂಭವಿಸುತ್ತಿವೆ. ಇವುಗಳನ್ನು ನಿಯಂತ್ರಿಸಲು ಅಗತ್ಯ ಕಾನೂನು ತಿದ್ದುಪಡಿ ತರಲಾಗುವುದು. ವಿಧಿವಿಜ್ಞಾನ, ಸೈಬರ್‌ ವಿಭಾಗಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು’ ಎಂದು ತಿಳಿಸಿದರು.

ಸೂಕ್ತ ತನಿಖೆಗೆ ಸೂಚನೆ:

‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೌಹಾರ್ದ ಬ್ಯಾಂಕ್‌, ಐಎಂಎ ಪ್ರಕರಣಗಳ ಕುರಿತು ಸಮಗ್ರ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದು ಹೇಳಿದರು.

ಶಿವು ಉಪ್ಪಾರ್‌ ಪ್ರಕರಣ ತನಿಖೆ:

‘ಶಿವು ಉಪ್ಪಾರ್‌ ಸಾವಿನ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಸೂಚಿಸಿದ್ದೇನೆ. ಸಿಐಡಿ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ. ಇದು ಮೇಲ್ನೋಟಕ್ಕೆ ಆತ್ಮಹತ್ಯೆ ಪ್ರಕರಣದಂತೆ ಕಾಣುತ್ತಿದೆ. ಗೋ ರಕ್ಷಣೆಗೂ ಇದಕ್ಕೂ ಸಂಬಂಧವಿಲ್ಲ’ ಎಂದು ನುಡಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಶಾಸಕಿ ಲಕ್ಷ್ಮಿ ಹೆಬ್ಬಾಳಕರ, ಅಂಜಲಿ ನಿಂಬಾಳ್ಕರ, ಶ್ರೀಮಂತ ಪಾಟೀಲ, ಗಣೇಶ ಹುಕ್ಕೇರಿ, ಐಜಿಪಿ ರಾಘವೇಂದ್ರ ಸುಹಾಸ, ನಗರ ಪೊಲೀಸ್‌ ಆಯುಕ್ತ ಬಿ.ಎಸ್‌. ಲೋಕೇಶಕುಮಾರ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.