ಬೆಳಗಾವಿ: ತಾಲ್ಲೂಕಿನ ಸುಳೇಭಾವಿ ಗ್ರಾಮದಲ್ಲಿ ಗುರುವಾರ ರಾತ್ರಿ ಜೋಡಿ ಕೊಲೆಯಿಂದ ಬೆಚ್ಚಿಬಿದ್ದ ಹಲವು ಜನ ತಡರಾತ್ರಿಯೇ ಊರು ತೊರೆದಿದ್ದಾರೆ. ಶುಕ್ರವಾರ ಕೂಡ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿತ್ತು.
ಸುಳೇಭಾವಿಯ ರಣಧೀರ ಅಲಿಯಾಸ್ ಮಹೇಶ ಮುರಾರಿ (26) ಹಾಗೂ ಪ್ರಕಾಶ ಹುಂಕರಿ ಪಾಟೀಲ (24) ಅವರನ್ನು ರಾತ್ರಿ ಕೊಲೆ ಮಾಡಲಾಗಿದೆ. ಗ್ರಾಮದ ಶಿವಾಜಿ ಸರ್ಕಲ್ಲಿನಲ್ಲಿ ನಿಂತಿದ್ದ ಇಬ್ಬರ ಮೇಲೆ ದಾಳಿ ಮಾಡಿದ ಗುಂಪು, ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಚ್ಚಿಹಾಕಿತು. ತಲೆ, ಕುತ್ತಿಗೆ, ಎದೆ ಭಾಗಕ್ಕೆ ಪೆಟ್ಟುಬಿದ್ದು ತೀವ್ರ ರಕ್ತಸ್ರಾವದಿಂದ ಇಬ್ಬರೂ ಯುವಕರು ಸ್ಥಳದಲ್ಲೇ ಕೊನೆಯುಸಿರೆಳೆದರು.
ಇದರಿಂದ ಬೆಚ್ಚಿಬಿದ್ದ ಗ್ರಾಮದ ಹಲವರು ಮನೆಗಳಿಗೆ ಬೀಗ ಜಡಿದು ಊರು ಬಿಟ್ಟಿದ್ದಾರೆ. ಕೊಲೆ ನಡೆದ ಲಕ್ಷ್ಮಿ ನಗರದಲ್ಲಂತೂ ಸ್ಮಶಾನ ಮೌನ ಆವರಿಸಿದೆ. ನೂರಕ್ಕೂ ಹೆಚ್ಚು ಪೊಲೀಸರು ಗ್ರಾಮದಲ್ಲಿಯೇ ಠಿಕಾಣೆ ಹೂಡಿದ್ದಾರೆ.
ಶವಗಳನ್ನು ಇಲ್ಲಿನ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಮೃತರ ಸಂಬಂಧಿಕರು, ಸ್ನೇಹಿತರು ಆಸ್ಪತ್ರೆ ಮುಂದೆ ಸೇರಿದ್ದಾರೆ.
'ಕೊಲೆಯ ನಿಖರ ಕಾರಣ ಹಾಗೂ ಆರೋಪಿಗಳ ಗುಂಪಿನ ಬಗ್ಗೆ ಶುಕ್ರವಾರ ಬೆಳಿಗ್ಗೆ ಕೂಡ ಯಾವುದೇ ಸುಳಿವು ಸಿಕ್ಕಿಲ್ಲ. ಹಳೇ ದ್ವೇಷದ ಹಿನ್ನೆಲೆ ಎಂದು ಮೃತರ ಕುಟುಂಬದವರು ಹೇಳಿದ್ದರೂ ಅದರಲ್ಲಿ ಸ್ಪಷ್ಟತೆ ಇಲ್ಲ' ಎಂದು ಮಾರಿಹಾಳ ಪೊಲೀಸರು 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.