
ಹುಕ್ಕೇರಿ: ಪಟ್ಟಣದಲ್ಲಿ ಮಾರ್ಚ್ 10 ರಿಂದ 14 ರವರೆಗೆ ಜಾತ್ರೆ ನಡೆಯಲಿದೆ. ಆದರೆ, ಒಳಚರಂಡಿ ಯೋಜನೆ (ಯುಜಿಡಿ) ಹೆಸರಲ್ಲಿ ಪಟ್ಟಣದ ಬಹುತೇಕ ಎಲ್ಲ ರಸ್ತೆಗಳನ್ನು ಅಗೆದು ತಗ್ಗು ದಿನ್ನೆಗಳನ್ನಾಗಿ ಮಾಡಿ ಹದಗೆಡಿಸಲಾಗಿದೆ. ತಕ್ಷಣ ರಸ್ತೆ ದುರಸ್ತಿ ಮತ್ತು ಡಾಂಬರೀಕರಣ ಮಾಡುವಂತೆ ಶ್ರೀರಾಮ ಸೇನಾ ಘಟಕದ ಪದಾಧಿಕಾರಿಗಳು ತಹಶೀಲ್ದಾರ್ ಬಲರಾಮ ಕಟ್ಟಿಮನಿ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ಉತ್ತರ ಕರ್ನಾಟಕ ವಿಭಾಗೀಯ ಕಾರ್ಯದರ್ಶಿ ಶಿವರಾಜ ಅಂಬಾರಿ ಮಾತನಾಡಿ, ಒಳಚರಂಡಿ ಕಾಮಗಾರಿಯವರು ಜನರಿಗೆ ಅನುಕೂಲ ಆಗುವ ಹಾಗೆ ರಸ್ತೆ ಅಗೆಯದೆ, ತಮಗೆ ಅನುಕೂಲವಾಗುವ ಹಾಗೆ ಅಗೆದು ಎಲ್ಲೆಂದರಲ್ಲಿ ‘ಚಂಬರ್ ಹಾಕಿ’ ವಾಹನ ಸಂಚಾರಕ್ಕೂ ಕೂಡಾ ತೊಂದರೆ ಮಾಡಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದರು.
ದೇವಿಯ ಮೂರ್ತಿಯನ್ನು ಹೊನ್ನಾಟ ಮಾಡುವಾಗ ರಸ್ತೆ ಸರಿಯಾಗಿ ಇರಬೇಕು. ದೇವಿಯ ರಥ ಚಲಿಸುವಾಗ ಹೆಚ್ಚು ಕಡಿಮೆಯಾಗಿ ಏನಾದರೂ ಆಗಬಹುದು. ಆದಷ್ಟು ಬೇಗ ರಸ್ತೆ ದುರಸ್ತಿ ಮತ್ತು ಡಾಂಬರೀಕರಣ ಮಾಡುವಂತೆ ಪದಾಧಿಕಾರಿಗಳು ಒತ್ತಾಯಿಸಿ ಮನವಿ ಸಲ್ಲಿಸಿದರು.
ಮುಖಂಡರಾದ ವಿವೇಕ ಪುರಾಣಿಕ, ಶಿವರಾಜ ಅಂಬಾರಿ, ಕಿರಣ್ ಶೆಟ್ಟಿ, ರಾಹುಲ್ ಅಂಕಲೆ, ಶಿವಾಜಿ ಘಾಟಗೆ, ಅವಜೇಶ್ ಅಂಕಲೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.