ADVERTISEMENT

ಸುವರ್ಣ ವಿಧಾನಸೌಧದಲ್ಲಿ ಛಾಯಾಚಿತ್ರ ಪ್ರದರ್ಶನ; ವಿದ್ಯಾರ್ಥಿಗಳಿಂದ ವೀಕ್ಷಣೆ

ಇಮಾಮ್‌ಹುಸೇನ್‌ ಗೂಡುನವರ
Published 14 ಡಿಸೆಂಬರ್ 2024, 5:24 IST
Last Updated 14 ಡಿಸೆಂಬರ್ 2024, 5:24 IST
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಶಾಲಾ ಮಕ್ಕಳು ಗಾಂಧೀಜಿ ಭಾವಚಿತ್ರ ವೀಕ್ಷಿಸಿದರು
ಪ್ರಜಾವಾಣಿ ಚಿತ್ರ: ಎಂ.ಎಸ್.ಮಂಜುನಾಥ್
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಶಾಲಾ ಮಕ್ಕಳು ಗಾಂಧೀಜಿ ಭಾವಚಿತ್ರ ವೀಕ್ಷಿಸಿದರು ಪ್ರಜಾವಾಣಿ ಚಿತ್ರ: ಎಂ.ಎಸ್.ಮಂಜುನಾಥ್   

ಸುವರ್ಣ ವಿಧಾನಸೌಧ, ಬೆಳಗಾವಿ: ವಿಧಾನಸಭೆ ಮತ್ತು ವಿಧಾನ ಪರಿಷತ್ ಕಲಾಪ ವೀಕ್ಷಿಸುವ ಆಸೆಯಿಂದ ಸುವರ್ಣ ವಿಧಾನಸೌಧಕ್ಕೆ ಬರುತ್ತಿರುವ ವಿದ್ಯಾರ್ಥಿಗಳು, ಮಹಾತ್ಮ ಗಾಂಧೀಜಿ ಚಿತ್ರಗಳನ್ನೂ ಕಂಡು ಖುಷಿಪಡುತ್ತಿದ್ದಾರೆ. ಬಾಪೂಜಿ ಇತಿಹಾಸ ಮೆಲುಕು ಹಾಕುತ್ತಿದ್ದಾರೆ.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಶಾಲಾ ಮಕ್ಕಳು ಗಾಂಧೀಜಿ ಭಾವಚಿತ್ರ ವೀಕ್ಷಿಸಿದರು ಪ್ರಜಾವಾಣಿ ಚಿತ್ರ:ಎಂ.ಎಸ್.ಮಂಜುನಾಥ್

ಗಾಂಧೀಜಿ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್‌ ಅಧಿವೇಶನಕ್ಕೆ ಈಗ ಶತಮಾನೋತ್ಸವ ಸಂಭ್ರಮ. ಹಾಗಾಗಿ ಸೌಧದಲ್ಲಿ ಈ ಬಾರಿ ಛಾಯಾಚಿತ್ರ ಪ್ರದರ್ಶನ ಆಯೋಜಿಸಲಾಗಿದೆ. ರಾಷ್ಟ್ರಪಿತನ ಇಡೀ ಜೀವನ ಸಾರುವಂಥ ಚಿತ್ರಗಳನ್ನು ನೆಲಮಹಡಿಯಲ್ಲಿ ಮತ್ತು ವಿದ್ಯಾರ್ಥಿಗಳು ಕಲಾಪ ವೀಕ್ಷಿಸಲು ತೆರಳುವ ಮಾರ್ಗದಲ್ಲಿ ಅಳವಡಿಸಲಾಗಿದೆ. ಉತ್ತರ ಕರ್ನಾಟಕ ಮಾತ್ರವಲ್ಲದೆ, ದಕ್ಷಿಣ ಕರ್ನಾಟಕದಿಂದಲೂ ಶೈಕ್ಷಣಿಕ ಪ್ರವಾಸಕ್ಕೆ ಬರುತ್ತಿರುವ ಪುಟಾಣಿಗಳನ್ನು ಅವು ಸೆಳೆಯುತ್ತಿವೆ.

130 ಚಿತ್ರಗಳಿವೆ: 

‘ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಕೆಆರ್‌ಐಡಿಎಲ್‌ ವತಿಯಿಂದ ಆಯೋಜಿಸಿದ ಪ್ರದರ್ಶನದಲ್ಲಿ ಗಾಂಧಿ ಅವರ ಅಪರೂಪದ ಚಿತ್ರಗಳಿವೆ. ದೆಹಲಿಯ ಗಾಂಧಿ ಮ್ಯೂಸಿಯಂನಿಂದ ಇವುಗಳನ್ನು ತಂದು ಪ್ರದರ್ಶಿಸಿದ್ದೇವೆ. ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್‌ ಅಧಿವೇಶನದ ಚಿತ್ರಗಳೂ ಇದರಲ್ಲಿ ಸೇರಿವೆ. ವಿವಿಧೆಡೆಯಿಂದ ಬರುವ ಮಕ್ಕಳಿಗೆ ಗಾಂಧಿ ಕುರಿತಾಗಿ ಸಂಕ್ಷಿಪ್ತ ಮಾಹಿತಿಯನ್ನೂ ಕೊಡುತ್ತಿದ್ದೇವೆ’ ಎಂದು ಚಿತ್ರಕಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಸ್‌.ಘಸ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT
ಸುವರ್ಣ ವಿಧಾನಸೌಧದಲ್ಲಿ ಕಲಾಪ ವೀಕ್ಷಣೆಗಾಗಿ ಬಂದಿರುವ ದಕ್ಷಿಣ ಕನ್ನಡ ಜಿಲ್ಲೆಯ ಮೊಂಟೆಪದವು ಕರ್ನಾಟಕ ಪಬ್ಲಿಕ್‌ ಶಾಲೆಯ ವಿದ್ಯಾರ್ಥಿಗಳು 

‘ಕಲಾಪ ವೀಕ್ಷಣೆ ಜತೆಗೆ, ಗಾಂಧಿ ಇತಿಹಾಸ ಸಾರುವ ಚಿತ್ರಗಳನ್ನು ನೋಡಿ ಸಂತಸವಾಯಿತು’ ಎಂದು ಬೆಳಗಾವಿಯ ಮಾರ್ಕಂಡೇಯ ನಗರದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ರೋಹಿಣಿ ಸುಲಧಾಳ ಸಂಭ್ರಮಿಸಿದರು. 

ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್‌ ಅವರೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ಮೊಂಟೆಪದವು ಕರ್ನಾಟಕ ಪಬ್ಲಿಕ್‌ ಶಾಲೆ ವಿದ್ಯಾರ್ಥಿಗಳು

ಸ್ಪೀಕರ್‌ ಕ್ಷೇತ್ರದಿಂದ ಬಂದ ಮಕ್ಕಳು

ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲ್ಲೂಕಿನ ಮೊಂಟೆಪದವು ಗ್ರಾಮದ ಕರ್ನಾಟಕ ಪ‍ಬ್ಲಿಕ್‌ ಶಾಲೆಯ ಪ್ರೌಢ ಪಿಯು ವಿಭಾಗದ 192 ವಿದ್ಯಾರ್ಥಿಗಳು ಹಾಗೂ ಕಲ್ಲರಕೋಡಿ ಸರ್ಕಾರಿ ಪ್ರೌಢಶಾಲೆಯ 50 ವಿದ್ಯಾರ್ಥಿಗಳು ಸೌಧಕ್ಕೆ ಗುರುವಾರ ಭೇಟಿ ನೀಡಿದರು. ‘ವಿಧಾನಸಭೆ ವಿಧಾನ ಪರಿಷತ್‌ ಕಲಾಪ ಎಂಬುದು ಪುಸ್ತಕದ ಪರಿಕಲ್ಪನೆಯಾಗಿತ್ತು. ಇದೇ ಮೊದಲ ಬಾರಿ ಕಲಾಪ ವೀಕ್ಷಿಸಿದರು. ಅದರಲ್ಲೂ ನಮ್ಮ ವಿಧಾನಸಭೆ ಕ್ಷೇತ್ರದವರೇ ಆದ ಯು.ಟಿ.ಖಾದರ್‌ ಸಭಾಧ್ಯಕ್ಷರ ಪೀಠದಲ್ಲಿ ಕುಳಿತಿದ್ದನ್ನು ಕಂಡು ಖುಷಿಪಟ್ಟರು’ ಎಂದು ಮೊಂಟೆಪದವು ಶಾಲೆ ಉಪ ಪ್ರಾಚಾರ್ಯೆ ಮಂಜುಳಾ ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು. ‘ವಿಧಾನಮಂಡಲ ಚಳಿಗಾಲದ ಅಧಿವೇಶನದ ಬಗ್ಗೆ ಸಾಕಷ್ಟು ಕುತೂಹಲವಿತ್ತು. ಇಲ್ಲಿಗೆ ಬಂದು ವೀಕ್ಷಿಸಿದ್ದಕ್ಕೆ ಖುಷಿಯಾಯಿತು’ ಎಂದು ವಿದ್ಯಾರ್ಥಿ ಮಹಮ್ಮದ್‌ ರಿಯಾನ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.