ADVERTISEMENT

ಪಿ.ಎಂ ಕಿಸಾನ್: ₹ 107 ಕೋಟಿ ಸಂದಾಯ

ಪಿ.ಎಂ. ಕಿಸಾನ್‌ ಸಮೃದ್ಧಿ ಕೇಂದ್ರದ ಉದ್ಘಾಟನೆ, ಸಂಸದೆ ಮಂಗಲಾ ಅಂಗಡಿ ಮಾಹಿತಿ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2022, 16:27 IST
Last Updated 17 ಅಕ್ಟೋಬರ್ 2022, 16:27 IST
ಬೆಳಗಾವಿಯಲ್ಲಿ ಸೋಮವಾರ ಪಿ.ಎಂ. ಕಿಸಾನ್‌ ಸಮೃದ್ಧಿ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಪ್ರಗತಿಪರ ರೈತರನ್ನು ಸಂಸದೆ ಮಂಗಲಾ ಅಂಗಡಿ ಸನ್ಮಾನಿಸಿದರು
ಬೆಳಗಾವಿಯಲ್ಲಿ ಸೋಮವಾರ ಪಿ.ಎಂ. ಕಿಸಾನ್‌ ಸಮೃದ್ಧಿ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಪ್ರಗತಿಪರ ರೈತರನ್ನು ಸಂಸದೆ ಮಂಗಲಾ ಅಂಗಡಿ ಸನ್ಮಾನಿಸಿದರು   

ಬೆಳಗಾವಿ: ‘ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆ ಅಡಿ ಜಿಲ್ಲೆಯಲ್ಲಿ ಈ ಕಂತಿನಲ್ಲಿ 5.38 ಲಕ್ಷ ರೈತರಿಗೆ ₹ 107 ಕೋಟಿ ಹಣ ಬಿಡುಗಡೆ ಮಾಡಲಾಗಿದೆ’ ಎಂದು ಸಂಸದೆ ಮಂಗಲಾ ಅಂಗಡಿ ತಿಳಿಸಿದರು.

ಇಲ್ಲಿನ ಎಪಿಎಂಸಿ ಆವಣದಲ್ಲಿ ಸೋಮವಾರ ಪಿ.ಎಂ. ಕಿಸಾನ್‌ ಸಮೃದ್ಧಿ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಪ್ರಧಾನಿ ನರೇಂದ್ರ ಮೋದಿ ಅವರು ದೇಶದಾದ್ಯಂತ 600 ಕಡೆ ಈ ಕೇಂದ್ರಗಳನ್ನು ವರ್ಚುವಲ್ ಮೂಲಕ ಉದ್ಘಾಟಿಸಿದ್ದಾರೆ. ಇದರ ಜೊತೆಗೆ 12ನೇ ಕಂತಿನ ಹಣವನ್ನೂ ರೈತರಿಗೆ ಬಿಡುಗಡೆ ಮಾಡಿದ್ದಾರೆ’ ಎಂದರು.

‘ಮೋದಿ ಅವರು ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. 2014ರ ನಂತರ ದೇಶದಲ್ಲಿನ ಕೃಷಿಕರ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತ ಬಂದಿದೆ. ಬೆಳೆಗಳಿಗೆ ಉತ್ತಮ ಮಾರುಕಟ್ಟೆ ಕಲ್ಪಿಸುವ ಉದ್ದೇಶದಿಂದ ಹೊಸ ಮಾರುಕಟ್ಟೆ ವ್ಯವಸ್ಥೆಯನ್ನು ಜಾರಿಗೆ ತರುತ್ತಲಿದ್ದಾರೆ. ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು’ ಎಂದರು.

ADVERTISEMENT

ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ ಮಾತನಾಡಿ, ‘ರೈತರು ಬೆಳೆದ ಬೆಳೆಗಳಿಗೆ ಉತ್ತಮ ದರ ಪಡೆದುಕೊಳ್ಳಲು ನಿರಂತರ ಮಾರುಕಟ್ಟೆ ಮಾಹಿತಿ ಪಡೆಯುತ್ತಿರಬೇಕು. ಇದರಿಂದ ದಲ್ಲಾಳಿಗಳಿಂದ ಮೋಸ ಹೋಗದೆ, ನೇರವಾಗಿ ಮಾರುಕಟ್ಟೆಗೆ ತಮ್ಮ ಉತ್ಪಾದನೆ ಮಾರಾಟ ಮಾಡಲು ಅನಕೂಲವಾಗುತ್ತದೆ’ ಎಂದರು.

ಪಿ‍ಪಿಎಲ್‌ ಕಂಪನಿಯ ಪ್ರಾದೇಶಿಕ ಮಾರುಕಟ್ಟೆ ಅಧಿಕಾರಿ ಗಣೇಶ ಹೆಗಡೆ, ಬೇಸಾಯ ತಜ್ಞ ಡಾ.ಬಿ.ಜಿ.ವಿಶ್ವನಾಥ ಮಾತನಾಡಿದರು. ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು. ಪಾಲಿಕೆ ಸದಸ್ಯೆ ರೇಷ್ಮಾ ಪಾಟೀಲ, ಸವಿತಾ ಕಂಬೇರಿ, ಸಂದೀಪ ಜಿಗರಾಳ, ಕೃಷಿ ಇಲಾಖೆಯ ಉಪ ನಿರ್ದೇಶಕ ಎಸ್.ಬಿ.ಕೊಂಗವಾಡ, ಫಾಸ್ಪೆಪ್ ಕಂಪನಿಯ ಸಹಾಯಕ ವ್ಯವಸ್ಥಾಪಕ ಸಂಜು ಮನೆಪ್ಪಗೊಳ, ಭೀಮುದಾದಾ ಭೀರಡೆ, ಕಿಸಾನ್‌ ಸಮೃದ್ದಿ ಕೇಂದ್ರದ ಶಾಂತಿನಾಥ ಕಲಮನಿ, ರೋಹನ ಕಲಮನಿ ಮೊದಲಾದವರು ಇದ್ದರು.

ಆರ್.ನಾರಾಯಣ ಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.