ADVERTISEMENT

ರಾಜಕಾರಣ ದಿಕ್ಕು ಬದಲಾಯಿಸಿದ ಪ್ರಧಾನಿ ನರೇಂದ್ರ ಮೋದಿ: ಜೆ.ಪಿ. ನಡ್ಡಾ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2024, 15:36 IST
Last Updated 5 ಮಾರ್ಚ್ 2024, 15:36 IST
<div class="paragraphs"><p>ಬೆಳಗಾವಿಯಲ್ಲಿ ಮಂಗಳವಾರ ನಡೆದ ‘ಪ್ರಬುದ್ಧರೊಂದಿಗೆ ಸಂವಾದ’ದಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಮಾತನಾಡಿದರು. ಗೀತಾ ಸುತಾರ, ಸಚಿವ ಪ್ರಲ್ಹಾದ್‌ ಜೋಶಿ, ರಾಧಾಮೋಹನದಾಸ ಅಗರವಾಲ್‌, ಬಿ.ವೈ.ವಿಜಯೇಂದ್ರ, ಬಸವರಾಜ ಬೊಮ್ಮಾಯಿ, ಪ್ರಭಾಕರ ಕೋರೆ, ಸುಭಾಷ ಪಾಟೀಲ ಪಾಲ್ಗೊಂಡರು</p></div>

ಬೆಳಗಾವಿಯಲ್ಲಿ ಮಂಗಳವಾರ ನಡೆದ ‘ಪ್ರಬುದ್ಧರೊಂದಿಗೆ ಸಂವಾದ’ದಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಮಾತನಾಡಿದರು. ಗೀತಾ ಸುತಾರ, ಸಚಿವ ಪ್ರಲ್ಹಾದ್‌ ಜೋಶಿ, ರಾಧಾಮೋಹನದಾಸ ಅಗರವಾಲ್‌, ಬಿ.ವೈ.ವಿಜಯೇಂದ್ರ, ಬಸವರಾಜ ಬೊಮ್ಮಾಯಿ, ಪ್ರಭಾಕರ ಕೋರೆ, ಸುಭಾಷ ಪಾಟೀಲ ಪಾಲ್ಗೊಂಡರು

   

–ಪ್ರಜಾವಾಣಿ ಚಿತ್ರ

ಬೆಳಗಾವಿ: ‘ನರೇಂದ್ರ ಮೋದಿ ಪ್ರಧಾನಿ ಆದ ಮೇಲೆ ದೇಶದ ರಾಜಕಾರಣದ ದಿಕ್ಕೇ ಬದಲಾಗಿದೆ. ಭ್ರಷ್ಟ, ಸ್ವಜನ ಪಕ್ಷಪಾತ, ಜಾತಿಬಲ, ತುಷ್ಟೀಕರಣದ ರಾಜಕಾರಣ ಈಗ ನಡೆಯುವುದಿಲ್ಲ’ ಎಂದು ಜೆ.ಪಿ.ನಡ್ಡಾ ಹೇಳಿದರು.

ADVERTISEMENT

ನಗರದಲ್ಲಿ ಮಂಗಳವಾರ ನಡೆದ ‘ಪ್ರಬುದ್ಧರೊಂದಿಗೆ ಸಂವಾದ’ದಲ್ಲಿ ಮಾತನಾಡಿದ ಅವರು, ‘ಈಗಿನ ರಾಜಕಾರಣಕ್ಕೆ ಅಭಿವೃದ್ಧಿ ಹಾಗೂ ಸಮಾನತೆ ಎರಡೇ ಮಾನದಂಡ ಎಂಬುದನ್ನು ಪ್ರಧಾನಿ ಸಾಧಿಸಿ ತೋರಿಸಿದ್ದಾರೆ’ ಎಂದರು.

‘2014ವರೆಗೂ ಹಿಂದುಳಿದ ರಾಷ್ಟ್ರಗಳಲ್ಲಿ ಭಾರತ– ಪಾಕಿಸ್ತಾನ ಎಂದು ಜೋಡಿಸಿಯೇ ಮಾತನಾಡುತ್ತಿದ್ದರು. ಎರಡೂ ದೇಶಗಳು ಒಂದೇ ಎಂಬ ಭಾವನೆ ಹೊಂದಿದ್ದರು. ಆದರೆ, ಮೋದಿ ಅವರು ವಿಶ್ವದ ಬಲಿಷ್ಠ ರಾಷ್ಟ್ರಗಳ ಸಾಲಿನಲ್ಲಿ ಭಾರತವನ್ನು ನಿಲ್ಲಿಸಿದ್ದಾರೆ. ಇದೇ ಅವರು ಮಾಡಿದ ದೊಡ್ಡ ಪರಿವರ್ತನೆ’ ಎಂದು ಹೇಳಿದರು.

‘ಇಂಡಿಯಾ’ ಒಕ್ಕೂಟದಲ್ಲಿರುವ ನಾಯಕರಲ್ಲಿ ಕೆಲವರು ಜೈಲಿನಲ್ಲಿದ್ದಾರೆ, ಹಲವರು ಬೇಲ್‌ ಮೇಲಿದ್ದಾರೆ. ಅಖಿಲೇಶ್‌ ಯಾದವ್, ಅಬ್ದುಲ್ಲ ಮೊಹಮ್ಮದ್ ಮಫ್ತಿ, ಲಾಲು ಪ್ರಸಾದ್‌, ತೇಜಪ್ರತಾಪ್, ಎಂ.ಕೆ. ಸ್ಟಾಲಿನ್‌, ಶರದ್‌ ಪವಾರ್, ರಾಹುಲ್‌ ಗಾಂಧಿ, ಕೇಜ್ರಿವಾಲ್‌... ಈ ನಾಯಕರ ಪಟ್ಟಿಯನ್ನು ಗಮನಿಸಿ. ಎಲ್ಲರೂ ಒಂದಿಲ್ಲೊಂದು ಪ್ರಕರಣದಲ್ಲಿ ಸಿಕ್ಕಿಕೊಂಡಿದ್ದಾರೆ. ತಮ್ಮ ಕೌಟುಂಬಿಕ ರಾಜಕಾರಣ ಉಳಿಸಿಕೊಳ್ಳಲು ಒಂದಾಗಿದ್ದಾರೆ’ ಎಂದು ಆರೋಪಿಸಿದರು.

‘ಇದೂವರೆಗಿನ ಎಲ್ಲ ಸಾಂಕ್ರಾಮಿಕ ರೋಗಗಳ ಲಸಿಕೆಯನ್ನು ಯುರೋಪಿಯನ್ನರು ಕಂಡುಹಿಡಿದಿದ್ದಾರೆ. ಅಲ್ಲಿಂದ ಭಾರತಕ್ಕೆ 20 ವರ್ಷಗಳ ನಂತರ ಬಂದಿವೆ. ಆದರೆ, ಕೊರೊನಾಗೆ ಎರಡು ಲಸಿಕೆ ಕಂಡುಹಿಡಿದು ಪಾಶ್ಚಿಮಾತ್ಯರಿಗೇ ಸರಬರಾಜು ಮಾಡಿದ್ದು ನಮ್ಮ ಸಾಧನೆ’ ಎಂದು ಹೇಳಿದರು.

‘200 ವರ್ಷ ನಮ್ಮನ್ನಾಳಿದ ಬ್ರಿಟಿಷರನ್ನೇ ಹಿಂದಿಕ್ಕಿದ ನಾವು; ಜಗತ್ತಿನ ಐದನೇ ದೊಡ್ಡ ಆರ್ಥಿಕ ಶಕ್ತಿ ಆಗಿದ್ದೇವೆ. ಈ ಬಾರಿಯೂ ಮೋದಿ ಅವರನ್ನು ಪ್ರಧಾನಿ ಮಾಡಿದರೆ ಕೆಲವೇ ವರ್ಷಗಳಲ್ಲಿ ಮೂರನೇ ಸ್ಥಾನಕ್ಕೇರಲಿದ್ದೇವೆ. ಇಂಥ ಸಂಗತಿಗಳನ್ನು ಪ್ರಬುದ್ಧರು ಸಾಮಾ‌ನ್ಯರಿಗೆ ತಿಳಿಸಬೇಕು’ ಎಂದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾಮೋಹನದಾಸ ಅಗರವಾಲ್‌, ಬಸವರಾಜ ಬೊಮ್ಮಾಯಿ, ಪ್ರಭಾಕರ ಕೋರೆ, ನಗರ ಜಿಲ್ಲಾ ಘಟಕದ ಅಧ್ಯಕ್ಷೆ ಗೀತಾ ಸುತಾರ, ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಷ ಪಾಟೀಲ ವೇದಿಕೆ ಮೇಲಿದ್ದರು.

ಪ್ರಬುದ್ಧರೂ ಮೌನ
‍ಬೆಳಗಾವಿಯಲ್ಲಿ ‘ಪ್ರಬುದ್ಧರೊಂದಿಗೆ ಸಂವಾದ’ ಮಾಡಲು ಜೆ.‍‍‍ಪಿ. ನಡ್ಡಾ ಆಗಮಿಸಿದ್ದರು. ಜಿಲ್ಲೆಯ ಮೂಲೆಮೂಲೆಯಿಂದ ಬಂದ ಪ್ರಬುದ್ಧರು ಇಲ್ಲಿನ ಜೀರಗೆ ಭವನದಲ್ಲಿ ಕಿಕ್ಕಿರಿದು ಸೇರಿದ್ದರು. ಆದರೆ, ಜೆ.ಪಿ. ನಡ್ಡಾ ಯಾರಿಗೂ ಸಂವಾದ ಮಾಡಲು ಅವಕಾಶ ಕೊಡಲಿಲ್ಲ. ತಾವೊಬ್ಬರೇ ಸಾಧನೆಗಳನ್ನು ಹೇಳಿಕೊಂಡು ಭಾಷಣ ಮುಗಿಸಿದರು. ಇದರಿಂದ ಪ್ರಬುದ್ಧರೆಲ್ಲ ಮೌನವಾಗಿಯೇ ಮರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.