
ಅಭಯ ಪಾಟೀಲ
ಬೆಳಗಾವಿ: ‘ಬೆಳಗಾವಿ ತಾಲ್ಲೂಕಿನ ಗ್ರಾಮವೊಂದರಲ್ಲಿ ವಿದ್ಯಾರ್ಥಿನಿ ಮೇಲೆ ದೌರ್ಜನ್ಯ ಎಸಗಿದ ಮುಖ್ಯಶಿಕ್ಷಕನ ಮೇಲೆ ಪೊಲೀಸರು ಸ್ವಯಂಪ್ರೇರಿತವಾಗಿ ಪೋಕ್ಸೊ ಪ್ರಕರಣ ದಾಖಲಿಸಿದ್ದಾರೆ. ಆದರೆ, ಬಂಧಿಸಿಲ್ಲ. ರಾಜಕೀಯ ಒತ್ತಡಕ್ಕೆ ಮಣಿದ ಅಧಿಕಾರಿಗಳ ಮೇಲೆ ಗೃಹಸಚಿವ ಡಾ.ಜಿ.ಪರಮೇಶ್ವರ ತಕ್ಷಣ ಕ್ರಮ ಕೈಗೊಳ್ಳಬೇಕು’ ಎಂದು ಶಾಸಕ ಅಭಯ ಪಾಟೀಲ ಆಗ್ರಹಿಸಿದರು.
‘ಈ ಪ್ರಕರಣದಲ್ಲಿ ರಾಜಕಾರಣಿಯೊಬ್ಬರು ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದಾರೆ. ಬೆಳಗಾವಿ ಮಾತ್ರವಲ್ಲ; ರಾಜ್ಯದ ಬೇರೆಬೇರೆ ಕಡೆ ಹೆಣ್ಣುಮಕ್ಕಳ ಮೇಲೆ ಇಂಥ ಪ್ರಕರಣಗಳು ಹೆಚ್ಚುತ್ತಲೇ ಇವೆ. ಈ ಸರ್ಕಾರಕ್ಕೆ ಮಹಿಳೆಯರು, ಹೆಣ್ಣುಮಕ್ಕಳ ಬಗ್ಗೆ ಕನಿಕರವೇ ಇಲ್ಲ’ ಎಂದು ಅವರು ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹರಿಹಾಯ್ದರು.
‘ತಮ್ಮವರಿಗೆ ಬೆಂಬಲವಾಗಿ ನಿಲ್ಲುವ ಮುನ್ನ ರಾಜಕಾರಣಿಯೂ ಮಾನವೀಯತೆಯಿಂದ ಹೆಜ್ಜೆ ಇಡಬೇಕು. ದುಷ್ಟರಿಗೆ ರಾಜಕೀಯ ಆಶ್ರಯ ಕೊಡಬಾರದು. ಜಿಲ್ಲೆಯಲ್ಲಿ ಇಷ್ಟೆಲ್ಲ ನಡೆಯುತ್ತಿದ್ದರೂ ಗೃಹಸಚಿವ ಸುಮ್ಮನೇ ಇರುವುದು ಅಚ್ಚರಿ ತರಿಸಿದೆ’ ಎಂದರು.
ವಿದ್ಯಾರ್ಥಿನಿಯರ ಜತೆಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಪಾಲಕರು ಹಾಗೂ ಗ್ರಾಮಸ್ಥರು ಡಿ.12ರಂದು ಶಾಲೆಗೆ ನುಗ್ಗಿ ಮುಖ್ಯಶಿಕ್ಷಕರನ್ನು ಥಳಿಸಿದ್ದರು. ಆದರೆ, ದೂರು ದಾಖಲಿಸಲು ಮುಂದೆ ಬಂದಿಲ್ಲ. ಘಟನೆ ಆದರಿಸಿ ಮುಖ್ಯಶಿಕ್ಷಕನ ಅಮಾನತು ಮಾಡಲಾಗಿದೆ.
ತಪ್ಪು ನಡೆದಿದ್ದರೆ ಯಾವುದೇ ಒತ್ತಡಕ್ಕೆ ಮಣಿಯದೇ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸುತ್ತೇನೆ. ಪ್ರಕರಣದ ಕುರಿತು ನಗರ ಪೊಲೀಸ್ ಕಮಿಷನರಿಂದ ಮಾಹಿತಿ ಪಡೆಯುತ್ತೇನೆಸತೀಶ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ
ಸಂತ್ರಸ್ತೆ ದೂರು ನೀಡಿಲ್ಲ. ಆದರೂ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಆರೋಪಿಗೆ ನೋಟಿಸ್ ನೀಡಿದ್ದೇವೆ. ಈ ಪ್ರಕರಣದಲ್ಲಿ ಕಾನೂನನ್ನು ಸರಿಯಾಗಿ ಪಾಲಿಸಲಾಗಿದೆಭೂಷಣ ಬೊರಸೆ, ನಗರ ಪೊಲೀಸ್ ಆಯುಕ್ತ, ಬೆಳಗಾವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.