ADVERTISEMENT

ಬೆಳಗಾವಿ: ಬೆಳ್ಳಂಬೆಳಿಗ್ಗೆ ಪೊಲೀಸರ ಗುಂಡಿನ ಸದ್ದು– ಕೊಲೆ ಆರೋಪಿ ಮೇಲೆ ಫೈರಿಂಗ್

​ಪ್ರಜಾವಾಣಿ ವಾರ್ತೆ
Published 21 ಜೂನ್ 2022, 6:47 IST
Last Updated 21 ಜೂನ್ 2022, 6:47 IST
ಕಾಲಿಗೆ ಗುಂಡೇಟು ತಿಂದ ಆರೋಪಿ ವಿಶಾಲಸಿಂಗ್ ಚವ್ಹಾಣ
ಕಾಲಿಗೆ ಗುಂಡೇಟು ತಿಂದ ಆರೋಪಿ ವಿಶಾಲಸಿಂಗ್ ಚವ್ಹಾಣ   

ಬೆಳಗಾವಿ: ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯ ಕಾಲಿಗೆ, ಮಂಗಳವಾರ ನಸುಕಿನಲ್ಲಿ ಗುಂಡು ಹೊಡೆದು ಬಂಧಿಸಲಾಗಿದೆ.

ರಾಜು ದೊಡ್ಡಬೊಮ್ಮನವರ ಎಂಬ ರಿಯಲ್ ಎಸ್ಟೇಟ್ ಉದ್ಯಮಿ ಕೊಲೆಯ ಆರೋಪ ಹೊತ್ತಿರುವ ವಿಶಾಲಸಿಂಗ್ಚವ್ಹಾಣ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ.

ತಿಂಗಳ ಹಿಂದೆ ಕೊಲೆ ನಡೆದಿದ್ದು, ಆರೋಪಿ ತಲೆ ಮರೆಸಿಕೊಂಡಿದ್ದರು. ಇಲ್ಲಿನ ವೀರಭದ್ರ ನಗರದ ಮನೆಯೊಂದರಲ್ಲಿ ಸೋಮವಾರ ರಾತ್ರಿ ಬಂದು ಅವಿತು ಕುಳಿತ ಬಗ್ಗೆ ಮಾಹಿತಿ ಸಿಕ್ಕಿತ್ತು. ನಸುಕಿನ 5ರ ಸುಮಾರಿಗೆ ಆರೋಪಿಯನ್ನು ಬಂಧಿಸಲು ಹೋದಾಗ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ. ಈ ವೇಳೆ ಗುಂಡು ಹಾರಿಸಿ ಬಂಧಿಸಲಾಗಿದೆ ಎಂದು ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಪೊಲೀಸರು ತಿಳಿಸಿದ್ದಾರೆ.

ADVERTISEMENT

ಎಸಿಪಿ ನಾರಾಯಣ ಭರಮನಿ ಅವರು ಹೊಡೆದ ಗುಂಡು ಆರೋಪಿ ಕಾಲಿಗೆ ಬಿದ್ದಿದ್ದು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ರೌಡಿಶೀಟರ್

ಕೊಲೆ, ಸುಲಿಗೆ ಸೇರಿದಂತೆ ಹಲವು ಅಪರಾಧ ಪ್ರಕರಣಗಳ ಆರೋಪಿ ವಿಶಾಲಸಿಂಗ್ ವಿಜಯಸಿಂಗ್ ಚವ್ಹಾಣ (25) ಕಾಲಿಗೆ ಗುಂಡು ತಗುಲಿದ್ದು, ಅವನ ಆರೋಗ್ಯ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಮಂಗಳವಾರ ಬೆಳಗಿನ ಜಾವ ನಗರದ ಧರ್ಮನಾಥ ಭವನ ಸಮೀಪ, ಆರೋಪಿಯನ್ನು ಬಂಧಿಸಲು ಹೋದಾಗ ಪೊಲೀಸರ ಮೇಲೆ ಆಕ್ರಮಣ ಮಾಡಲು ಮುಂದಾದ. ಆಗ ಪೊಲೀಸರು ಗುಂಡು ಹಾರಿಸುವ ಮೂಲಕ ಆತನನ್ನು ಹೆಡೆಮುರಿ ಕಟ್ಟಿದರು.

ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ರವೀಂದ್ರ ಗಡಾದಿ ಹಾಗೂ ಅವರ ತಂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು.ಮೂಲತಃ ಕಿತ್ತೂರು ತಾಲ್ಲೂಕಿನ ಚಿಕ್ಕನಂದಿ ಗ್ರಾಮದ ಈ ವ್ಯಕ್ತಿ, ಬೆಳಗಾವಿಯ ಶಾಸ್ತ್ರಿ ನಗರದಲ್ಲಿ ವಾಸವಾಗಿದ್ದ.ವಿಶಾಲಸಿಂಗ್ ಬಹಳ ಹಿಂದೆ ರೌಡಿಶೀಟರ್ ಆಗಿದ್ದ. ಕಳೆದ ತಿಂಗಳು ರಾಯಲ್ ಎಸ್ಟೇಟ್ ಉದ್ಯಮಿ ರಾಜು ಅವರನ್ನು ಸುಪಾರಿ ಪಡೆದು ಕೊಲೆ ಮಾಡಿದ ಆರೋಪ ಹೊತ್ತಿದ್ದು, ತಲೆಮರೆಸಿಕೊಂಡಿದ್ದ.

ಪತ್ನಿಯೇ ಸುಪಾರಿ ಕೊಟ್ಟು ಕೊಲ್ಲಿಸಿದ ಆರೋಪ

ಬೆಳಗಾವಿಯಭವಾನಿ ನಗರದಲ್ಲಿ ಬೆಳಗ್ಗೆ ಕಾರಿನಲ್ಲಿ ಹೊರಟಿದ್ದ ರಿಯಲ್ ಎಸ್ಟೇಟ್ ಉದ್ಯಮಿ ರಾಜು ದೊಡ್ಡಬೊಮ್ಮನವರ (40) ಅವರನ್ನು ಕಳೆದ ಮಾರ್ಚ್‌ 15ರಂದು ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು, ಕಣ್ಣಿಗೆ ಖಾರದಪುಡಿ ಎರಚಿ, ಚಾಕುವಿನಿಂದ ಇರಿದು, ಕೊಲೆ ಮಾಡಿ ಪರಾರಿಯಾಗಿದ್ದರು.

ರಾಜು ಮೂರು ವಿವಾಹವಾಗಿದ್ದರು.‌ಅವರ ಕೊಲೆಗೆ ಎರಡನೇ ಪತ್ನಿ ಕಿರಣ ಎನ್ನುವವರು ₹ 10 ಲಕ್ಷ ಸುಫಾರಿ ನೀಡಿದ್ದರು.‌ ಕೊಲೆ ಮಾಡಿಸಲು ವಿಶಾಲಸಿಂಗ್ ಸುಫಾರಿ ಪಡೆದ ಆರೋಪವಿದೆ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.

ಇದಲ್ಲದೇ, ಒಂದು ಕೊಲೆ, ಆರು ಕೊಲೆಗೆ ಯತ್ನ ಪ್ರಕರಣ,‌ ಸುಲಿಗೆ, ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ವಿಶಾಲಸಿಂಗ್ ಚವ್ಹಾಣ ಪೊಲೀಸರಿಗೆ ಬೇಕಾಗಿದ್ದ. ಖಡೇಬಜಾರ್, ಕ್ಯಾಂಪ್, ಶಹಾಪುರ, ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪ್ರಕರಣಗಳಿವೆ. ಜತೆಗೆ ಮಹಾರಾಷ್ಟ್ರದ ವಿವಿಧ ಠಾಣೆಗಳಲ್ಲಿಯೂ ಪ್ರಕರಣಗಳಿವೆ.

ಹಿಂದೆಯೂ ಗುಂಡೇಟಿನ ಸದ್ದು
2007ರಲ್ಲಿ ಮಹಿಳೆಯೊಬ್ಬರಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಆರೋಪಿ ಪ್ರವೀಣ ಶಿಂತ್ರೆ ಎಂಬಾತನನ್ನು ಪೊಲೀಸರು ಲಕ್ಷ್ಮಿ ನಗರದ ರಾಜದೀಪ ಬಂಗ್ಲೆಯಲ್ಲಿ ಎನ್‌ಕೌಂಟರ್ ಮಾಡಿದ್ದರು.ಬಳಿಕ, 2012ರಲ್ಲಿ ನಗರದಲ್ಲಿ ಮಾದಕದ್ರವ್ಯ ಸಾಗಣೆಯಲ್ಲಿ ಕ್ರಿಯಾಶೀಲವಾಗಿದ್ದ ಇರಾನಿ ಗ್ಯಾಂಗ್ ಆರೋಪಿಗಳ ಮೇಲೂ ಗುಂಡು ಹಾರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.