ADVERTISEMENT

ವೃತ್ತಿ ಕೌಶಲ, ಮಾನವೀಯತೆ ರೂಢಿಸಿಕೊಳ್ಳಿ: ನಿವೃತ್ತ ಎಸ್ಪಿ ಸಲಹೆ

ಪೊಲೀಸ್‌ ಧ್ವಜ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2019, 9:36 IST
Last Updated 2 ಏಪ್ರಿಲ್ 2019, 9:36 IST
ಬೆಳಗಾವಿಯಲ್ಲಿ ಮಂಗಳವಾರ ನಡೆದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಎಸ್ಪಿ ಸಿ.ಎಚ್. ಸುಧೀರ್‌ಕುಮಾರ್‌ ರೆಡ್ಡಿ, ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್‌ಕುಮಾರ್, ನಿವೃತ್ತ ಪಿಎಸ್‌ಐ ದಸ್ತಗೀರ್ ಮುಲ್ಲಾ, ನಿವೃತ್ತ ಎಸ್ಪಿ ದಯಾನಂದ ಪವಾರ, ಐಜಿ‍ಪಿ ರಾಘವೇಂದ್ರ ಸುಹಾಸ ಇದ್ದಾರೆ
ಬೆಳಗಾವಿಯಲ್ಲಿ ಮಂಗಳವಾರ ನಡೆದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಎಸ್ಪಿ ಸಿ.ಎಚ್. ಸುಧೀರ್‌ಕುಮಾರ್‌ ರೆಡ್ಡಿ, ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್‌ಕುಮಾರ್, ನಿವೃತ್ತ ಪಿಎಸ್‌ಐ ದಸ್ತಗೀರ್ ಮುಲ್ಲಾ, ನಿವೃತ್ತ ಎಸ್ಪಿ ದಯಾನಂದ ಪವಾರ, ಐಜಿ‍ಪಿ ರಾಘವೇಂದ್ರ ಸುಹಾಸ ಇದ್ದಾರೆ   

ಬೆಳಗಾವಿ: ‘ಪೊಲೀಸರಿಗೆ ತಮ್ಮ ಕೆಲಸದ ಬಗ್ಗೆ ಹೆಮ್ಮೆ ಇರಬೇಕು. ಬದಲಾಗುತ್ತಿರುವ ಕಾಲಮಾನಕ್ಕೆ ತಕ್ಕಂತೆ ವೃತ್ತಿ‌ ಕೌಶಲಗಳನ್ನು ವೃದ್ಧಿಸಿಕೊಳ್ಳಬೇಕು ಹಾಗೂ ಗುಣಮಟ್ಟ ಹೆಚ್ಚಿಸಿಕೊಳ್ಳಬೇಕು’ ಎಂದು ಆಂತರಿಕ ಭದ್ರತೆ ವಿಭಾಗದ ನಿವೃತ್ತ ಎಸ್ಪಿ ದಯಾನಂದ ಎಸ್. ಪವಾರ ಸಲಹೆ ನೀಡಿದರು.

ನಗರ ಹಾಗೂ ಜಿಲ್ಲಾ ಪೊಲೀಸ್ ವತಿಯಿಂದ ಮಂಗಳವಾರ ಇಲ್ಲಿನ ಕವಾಯತು ಮೈದಾನದಲ್ಲಿ ನಡೆದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕಾನೂನು–ಸುವ್ಯವಸ್ಥೆ ಕಾಪಾಡುವುದರೊಂದಿಗೆ ಮಾನವೀಯತೆಯಿಂದ ನಡೆದುಕೊಳ್ಳಬೇಕು. ನೊಂದು ಠಾಣೆಗೆ ಬಂದವರೊಂದಿಗೆ ಸಹಾನುಭೂತಿಯಿಂದ ವರ್ತಿಸಬೇಕು. ವೈಯಕ್ತಿಕ ಆರೋಗ್ಯದೊಂದಿಗೆ ಕುಟುಂಬದ ಸುರಕ್ಷತೆಯ ಕಡೆಗೂ ಗಮನಕೊಡಬೇಕು. ಉಳಿತಾಯಕ್ಕೂ ಮುಂದಾಗಬೇಕು’ ಎಂದು ತಿಳಿಸಿದರು.

ADVERTISEMENT

‘ನಿವೃತ್ತರ ಕ್ಷೇಮಾಭಿವೃದ್ಧಿ ಬಗ್ಗೆ ಯೋಚಿಸುವುದು ಹಾಗೂ ಅವರಿಗೆ ಗೌರವ ನೀಡುವುದನ್ನು ಬೇರಾವ ಇಲಾಖೆಯಲ್ಲೂ ಕಾಣಲಾಗದು’ ಎಂದರು.

‘ಕೆಲಸದಲ್ಲಿ ಇದ್ದಾಗ ವೈಯಕ್ತಿಕ ಜೀವನದ ಬಗ್ಗೆ ತಲೆ ಕೆಡಿಸಿಕೊಂಡಿರುವುದಿಲ್ಲ.‌ ನಿವೃತ್ತಿಯಾಗುತ್ತಿದ್ದಂತೆಯೇ ಏನೋ ಕಳೆದುಕೊಂಡ ಅನುಭವ ಆಗುತ್ತದೆ ಹಾಗೂ ಮುಂದಿನ ಜೀವನದ ಚಿಂತೆ ಶುರುವಾಗುತ್ತದೆ. ಇಂಥವರ ಕಲ್ಯಾಣಕ್ಕಾಗಿ ಪೊಲೀಸ್ ಧ್ವಜ ದಿನದಂದು ಸಂಗ್ರಹಿಸಿದ ಹಣ ಬಳಸುತ್ತಿರುವುದು, ಅನಾರೋಗ್ಯಕ್ಕೆ ಒಳಗಾದವರಿಗೆ ಆರ್ಥಿಕ ಸಹಾಯ ಮಾಡುತ್ತಿರುವುದು ಒಳ್ಳೆಯ ಕ್ರಮವಾಗಿದೆ’ ಎಂದು ಹೇಳಿದರು.

ನಿವೃತ್ತ ಪಿಎಸ್ಐ ದಸ್ತಗೀರ್ ಎಂ. ಮುಲ್ಲಾ ಮಾತನಾಡಿ, ‘ಪೊಲೀಸ್ ಸಮುದಾಯ ಭವನ ನಿರ್ಮಾಣಕ್ಕೆ ಸಹಕಾರ ನೀಡಬೇಕು. ಜಾಗ ನೀಡುವುದಕ್ಕೆ ಸಂಬಂಧಿಸಿದಂತೆ ಕೆಎಸ್‌ಆರ್‌ಪಿ ಅಧಿಕಾರಿಗಳು ಸಹಕರಿಸುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಉತ್ತರ ವಲಯ ಐಜಿಪಿ ಎಚ್‌.ಜಿ. ರಾಘವೇಂದ್ರ ಸುಹಾಸ ಮಾತನಾಡಿ, ‘ಒಮ್ಮೆ ಪೊಲೀಸರಾದ ಮೇಲೆ ಯಾವಾಗಲೂ ಪೊಲೀಸರೇ. ಅವರಿಗೆ ನಿವೃತ್ತಿ ನಂತರವೂ ಇಲಾಖೆ ಜೊತೆಗಿರುತ್ತದೆ. ಪೊಲೀಸ್ ಧ್ವಜ ದಿನದಂದು ಹಣ ಸಂಗ್ರಹಿಸಿ, ಅವರ ಕ್ಷೇಮಾಭಿವೃದ್ಧಿಗೆ ಬಳಸಲಾಗುತ್ತಿದೆ’ ಎಂದು ತಿಳಿಸಿದರು.

‘ನಗರದಲ್ಲಿ ನಿವೃತ್ತ ಪೊಲೀಸರ ಅನುಕೂಲಕ್ಕಾಗಿ ಸಮುದಾಯ ಭವನ ನಿರ್ಮಿಸಿಕೊಡಲು ಕ್ರಮ ವಹಿಸಲಾಗುವುದು’ ಎಂದು ಭರವಸೆ ನೀಡಿದರು.

‘ಪೊಲೀಸರು ಕುಟುಂಬದವರಿಗೆ ಸಮಯ ಕೊಡಬೇಕು. ಮಕ್ಕಳ ಪಾಲನೆ–ಪೋಷಣೆಗೂ ಗಮನ ಹರಿಸಬೇಕು. ಆರೋಗ್ಯ ಕಾಪಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ನಗರ ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್‌ಕುಮಾರ್‌, ಎಸ್ಪಿ ಸಿ.ಎಚ್. ಸುಧೀರ್‌ಕುಮಾರ್‌ ರೆಡ್ಡಿ, ಡಿಸಿಪಿಗಳಾದ ಸೀಮಾ ಲಾಟ್ಕರ್, ಯಶೋದಾ ವಂಟಗೂಡಿ, ಕೆಎಸ್‌ಆರ್‌ಪಿ ಕಮಾಂಡೆಂಟ್ ಜಗದೀಶ್ ಇದ್ದರು.

ಇದಕ್ಕೂ ಮುನ್ನ ಪಥಸಂಚಲನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.