ADVERTISEMENT

ಬೆಳಗಾವಿ | 2ನೇ ಮದುವೆಗಾಗಿ 7 ವರ್ಷದ ಗಂಡು ಮಗು ಮಾರಾಟ: ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 20 ಜನವರಿ 2025, 12:50 IST
Last Updated 20 ಜನವರಿ 2025, 12:50 IST
<div class="paragraphs"><p>ಡಾ.ಭೀಮಾಶಂಕರ ಗುಳೇದ</p></div>

ಡಾ.ಭೀಮಾಶಂಕರ ಗುಳೇದ

   

ಬೆಳಗಾವಿ: ಎರಡನೇ ಮದುವೆಗಾಗಿ ಏಳು ವರ್ಷದ ಗಂಡು ಮಗುವನ್ನು ಮಾರಾಟ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಹುಕ್ಕೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹುಕ್ಕೇರಿ ತಾಲ್ಲೂಕಿನ ಸುಲ್ತಾನಪುರದ ಲಕ್ಷ್ಮಿ ಗೋಲಬಾವಿ, ಸದಾಶಿವ ಮಗದುಮ್ಮ, ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲ್ಲೂಕಿನ ಕೆಸರೊಳ್ಳಿಯ ಅನುಸೂಯಾ ದೊಡಮನಿ, ಮಹಾರಾಷ್ಟ್ರದ ಕೊಲ್ಹಾಪುರದ ಸಂಗೀತಾ ಸಾವಂತ ಬಂಧಿತರು.

ADVERTISEMENT

‘ಸದಾಶಿವ ಮಗದುಮ್ಮ ಎಂಬಾತ ಹಾವೇರಿ ಜಿಲ್ಲೆಯ ಬ್ಯಾತನಾಳದ ಸಂಗೀತಾ ಕಮ್ಮಾರ ಅವರೊಂದಿಗೆ ಮದುವೆ ಆಗಿದ್ದ. ಆದರೆ, ಸಂಗೀತಾ ಅವರಿಗೆ ಮೊದಲೇ ಒಂದು ಮಗುವಿತ್ತು. ಇದರಿಂದ ತಮ್ಮ ವೈವಾಹಿಕ ಸಂಬಂಧಕ್ಕೆ ತೊಡಕಾಗದಿರಲೆಂದು ಇದನ್ನು ಸಾಕಲು ಬೇರೆಯವರಿಗೆ ಕೋಡೋಣ ಎಂದು ಹೇಳಿದ್ದ. ಹಲವು ಮಧ್ಯವರ್ತಿಗಳ ನೆರವಿನಿಂದ ದಿಲಶಾದ್‌ ಅವರಿಗೆ ₹4 ಲಕ್ಷಕ್ಕೆ ಮಾರಿದ್ದ. ಮೂರು ತಿಂಗಳ ನಂತರ ತಮಗೆ ಮಗು ಬೇಕೆಂದು ತಾಯಿ ಪಟ್ಟು ಹಿಡಿದು ಜ.15ರಂದು ಪೊಲೀಸ್‌ ಠಾಣೆ ಮೆಟ್ಟಿಲೇರಿದಾಗ, ಮಾರಾಟದ ಪ್ರಕರಣ ಬೆಳಕಿಗೆ ಬಂದಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

‘ಖಾನಾಪುರ ತಾಲ್ಲೂಕಿನ ಲೊಂಡಾದ ಭರತ ಪೂಜಾರಿ, ಬೆಳಗಾವಿಯ ದಿಲಶಾದ್‌ ತಹಶೀಲ್ದಾರ್‌ ಪತ್ತೆಗೆ ಜಾಲ ಬೀಸಲಾಗಿದೆ. ರಕ್ಷಣೆ ಮಾಡಲಾದ ಮಗುವನ್ನು ಮಕ್ಕಳ ರಕ್ಷಣಾ ಘಟಕಕ್ಕೆ ಒಪ್ಪಿಸಲಾಗಿದೆ’ ಎಂದರು.

ಹುಕ್ಕೇರಿ ಠಾಣೆ ಇನ್‌ಸ್ಪೆಕ್ಟರ್‌ ಎಂ.ಕೆ.ಬಸಾಪುರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.

ಎಂಟು ಜನರ ಬಂಧನ

‘ಗೋಕಾಕ ತಾಲ್ಲೂಕಿನ ಮಮದಾಪುರ ಹೊರವಲಯದಲ್ಲಿ ಕೊಳವಿಯ ಪ್ರಕಾಶ ಮಾರುತಿ ಹಿರಟ್ಟಿ ಅವರನ್ನು ಜ.14ರಂದು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ, ಇಬ್ಬರು ಅಪ್ರಾಪ್ತರು ಸೇರಿದಂತೆ ಎಂಟು ಆರೋಪಿಗಳನ್ನು ಗೋಕಾಕ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ’ ಎಂದು ಭೀಮಾಶಂಕರ ಗುಳೇದ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.