ADVERTISEMENT

ನಿಪ್ಪಾಣಿ: ಭಗವಾಧ್ವಜ ಹಾರಿಸಲು ಮುಂದಾದ ನಗರಸಭೆ ಸದಸ್ಯರು

ನಿಪ್ಪಾಣಿ ನಗರಸಭೆ: ಎನ್‌ಸಿಪಿ ಬೆಂಬಲಿತ ಸದಸ್ಯರ ಕೃತ್ಯ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2023, 20:07 IST
Last Updated 15 ಆಗಸ್ಟ್ 2023, 20:07 IST
ನಿಪ್ಪಾಣಿ ನಗರಸಭೆ ಕಚೇರಿ ಮೇಲೆ ಭಗವಾಧ್ವಜ ಹಾರಿಸಲು ಮುಂದಾದ ನಗರಸಭೆ ಸದಸ್ಯರಾದ ಸಂಜಯ ಸಾಂಗಾವಕರ ಮತ್ತು ವಿನಾಯಕ ವಡೆ ಅವರನ್ನು ಪೊಲೀಸರು ತಡೆದರು
ನಿಪ್ಪಾಣಿ ನಗರಸಭೆ ಕಚೇರಿ ಮೇಲೆ ಭಗವಾಧ್ವಜ ಹಾರಿಸಲು ಮುಂದಾದ ನಗರಸಭೆ ಸದಸ್ಯರಾದ ಸಂಜಯ ಸಾಂಗಾವಕರ ಮತ್ತು ವಿನಾಯಕ ವಡೆ ಅವರನ್ನು ಪೊಲೀಸರು ತಡೆದರು   

ನಿಪ್ಪಾಣಿ (ಬೆಳಗಾವಿ ಜಿಲ್ಲೆ): ಸ್ವಾತಂತ್ರ್ಯ ದಿನಾಚರಣೆ ಸಮಾರಂಭದ ವೇಳೆ ನಿಪ್ಪಾಣಿ ನಗರಸಭೆ ಕಚೇರಿ ಮೇಲೆ‌ ಭಗವಾಧ್ವಜ ಹಾರಿಸಲು ಮುಂದಾದ ನಗರಸಭೆಯ ಎನ್‌ಸಿಪಿ ಬೆಂಬಲಿತ ಸದಸ್ಯರಾದ ಸಂಜಯ ಸಾಂಗಾವಕರ ಮತ್ತು ವಿನಾಯಕ ವಡೆ ಅವರನ್ನು ಪೊಲೀಸರು ತಡೆದರು.

ರಾಷ್ಟ್ರಧ್ವಜದ ಕಂಬದ ಪಕ್ಕದಲ್ಲೇ ಇರುವ ಇನ್ನೊಂದು ಕಂಬದಲ್ಲಿ ಹಳೆಯ ಭಗವಾಧ್ವಜ ತೆಗೆದು ಹೊಸ ಧ್ವಜ ಹಾರಿಸಲು ಮುಂದಾದಾಗ, ಇಬ್ಬರೂ ಸದಸ್ಯರು ಮತ್ತು ಪೊಲೀಸರ ಮಧ್ಯೆ ವಾಗ್ವಾದ ಆಯಿತು. ‘ರಾಷ್ಟ್ರಧ್ವಜ ಹೊರತುಪಡಿಸಿ ಬೇರೆ ಧ್ವಜ ಹಾರಿಸಲು ಅವಕಾಶವಿಲ್ಲ’ ಎಂದು ಪೊಲೀಸರು ಮನವರಿಕೆ ಮಾಡಿದರು.

‘ನಗರಸಭೆ ಸದಸ್ಯರ ಈ ರೀತಿಯ ಕೃತ್ಯ ಮೊದಲ ಸಲವಲ್ಲ. ರಾಷ್ಟ್ರೀಯ ಹಬ್ಬಗಳಲ್ಲಿ ಇಂಥ ಘಟನೆಗಳು ಪದೇಪದೇ ಜರುಗುತ್ತವೆ. ರಾಜ್ಯ ಸರ್ಕಾರ ಈ ಬಗ್ಗೆ ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕು’ ಎಂದು ಸಮಾರಂಭದಲ್ಲಿ ಪಾಲ್ಗೊಂಡವರು ತಿಳಿಸಿದರು.

ADVERTISEMENT

‘ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರಧ್ವಜ ಹೊರತುಪಡಿಸಿದರೆ, ಬೇರೆ ಯಾವುದೇ ಧ್ವಜ ಹಾರಿಸುವಂತಿಲ್ಲ. ರಾಷ್ಟ್ರಧ್ವಜ ಹಾರಿಸಿದ ಬಳಿಕ ಭಗವಾಧ್ವಜ ಹಾರಿಸಲು ಯತ್ನಿಸಿದವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುವರು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.

ಸಿಪಿಐ ಸಂಗಮೇಶ ಶಿವಯೋಗಿ, ಪಿಎಸ್ಐ ಉಮಾದೇವಿ ಹಾಗೂ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.