ADVERTISEMENT

ಬೆಳಗಾವಿ: ಹೊರಟ್ಟಿ ವಿರುದ್ಧ ರಾಜಕೀಯಪ್ರೇರಿತ ಸಂಚು: ಖಂಡನೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2022, 12:35 IST
Last Updated 3 ಫೆಬ್ರುವರಿ 2022, 12:35 IST

ಬೆಳಗಾವಿ: ‘ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ರಾಜಕೀಯ ಏಳಿಗೆ ಸಹಿಸದೆ ಇತ್ತೀಚಿಗೆ ಸುಳ್ಳು ಪ್ರಕರಣ ದಾಖಲಿಸಲು ನಡೆಸಿದ ಪ್ರಯತ್ನದ ಹಿಂದೆ ರಾಜಕೀಯಪ್ರೇರಿತ ಸಂಚು ಹಾಗೂ ಪಿತೂರಿ ನಡೆದಿರುವುದು ತೀವ್ರ ಖಂಡನೀಯ’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಹೇಳಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ‘ಶಿಕ್ಷಣ ಸಚಿವರಾಗಿ ಹೊರಟ್ಟಿ ಅವರು ಮಾಡಿದ ಕ್ರಾಂತಿಯು ರಾಜ್ಯದ, ವಿಶೇಷವಾಗಿ ಉತ್ತರ ಕರ್ನಾಟಕದ ಶಿಕ್ಷಣ ಪ್ರೇಮಿಗಳು ನೆನಪಿಡುವಂಥದ್ದಾಗಿದೆ. ಈಗ ಸಭಾಪತಿ ಸ್ಥಾನದಂತಹ ಅತ್ಯುನ್ನತ ಮತ್ತು ಗೌರವಾನ್ವಿತ ಹುದ್ದೆಯಲ್ಲಿದ್ದಾರೆ. ಭವಿಷ್ಯದಲ್ಲೂ ಮಹತ್ವದ ಪಾತ್ರ ವಹಿಸುವ ಮೂಲಕ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಅಮೂಲ್ಯ ಸೇವೆ ಮುಂದುವರಿಸಲಿದ್ದಾರೆ’.

‘ಕರ್ನಾಟಕ ಕಂಡ ಅಪರೂಪದ ರಾಜಕಾರಣಿಯಾದ ಅವರ ಹೆಸರನ್ನು ಕೆಡಿಸಲು ಹಾಗೂ ಕಾನೂನಿನ ಬಲೆಯಲ್ಲಿ ಸಿಲುಕಿಸಿ ಗೌರವಕ್ಕೆ, ಸ್ಥಾನಮಾನಕ್ಕೆ ಕುಂದು ತರುವ ಪ್ರಯತ್ನವನ್ನು ಯಾರೇ ಮಾಡಿದ್ದರೂ ಅದು ನಾಗರಿಕ ಸಮಾಜಕ್ಕೆ ಕುಂದು ತರುವ ಕುತಂತ್ರವಾಗಿದೆ. ಯಾರಿಗಾದರೂ ಅನ್ಯಾಯ ಆಗಿದ್ದರೆ ಕಾನೂನಾತ್ಮಕ ಹೋರಾಟ ನಡೆಸಬೇಕೆ ಹೊರತು ವಾಮಮಾರ್ಗಗಳನ್ನು ಬಳಸುವ ಮಟ್ಟಕ್ಕೆ ಇಳಿಯಬಾರದು’ ಎಂದು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.