ADVERTISEMENT

‘ಸಂಧ್ಯಾ ಶಕ್ತಿ’ಗೆ ನೀರಸ ಪ್ರತಿಕ್ರಿಯೆ; ಬೆರಳೆಣಿಕೆಯ ವಿದ್ಯಾರ್ಥಿಗಳ ಪ್ರವೇಶ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2021, 20:15 IST
Last Updated 3 ಡಿಸೆಂಬರ್ 2021, 20:15 IST
ಬೆಳಗಾವಿಯ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂಜೆ ಕಾಲೇಜು ತರಗತಿಗಳನ್ನು ಆರಂಭಿಸಿರುವ ಕಟ್ಟಡ
ಬೆಳಗಾವಿಯ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂಜೆ ಕಾಲೇಜು ತರಗತಿಗಳನ್ನು ಆರಂಭಿಸಿರುವ ಕಟ್ಟಡ   

ಬೆಳಗಾವಿ: ಸಂಜೆ ಕಾಲೇಜುಗಳಲ್ಲಿ ನಿರೀಕ್ಷೆಯಂತೆ ದಾಖಲಾತಿ ನಡೆದಿಲ್ಲ. ಧಾರವಾಡ, ಬೆಂಗಳೂರಿನಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಒಲವು ತೋರಿದ್ದರೆ, ಬೆಳಗಾವಿ ಮತ್ತು ಮೈಸೂರಿನಲ್ಲಿ ಕೆಲವೇ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಕಲಬುರಗಿಯಲ್ಲಿ ಶೂನ್ಯ ದಾಖಲಾತಿ ಇದೆ.

ಪದವಿ ಶಿಕ್ಷಣ ಪಡೆಯಬೇಕು ಎನ್ನುವ ಆಸೆ ಇದ್ದರೂ, ಉದ್ಯೋಗದ ಕಾರಣಕ್ಕೆ ಹಲವರು ವಂಚಿತವಾಗಿರುತ್ತಾರೆ. ಹಾಗಾಗಿ ದುಡಿಮೆಯೊಂದಿಗೆ ಕಲಿಕೆಗೆ ಉತ್ತೇಜನ ನೀಡಲು ಕಾಲೇಜು ಶಿಕ್ಷಣ ಇಲಾಖೆಯು ‘ಸಂಧ್ಯಾ ಶಕ್ತಿ ಯೋಜನೆ’ಯಲ್ಲಿ 11 ಜಿಲ್ಲೆಗಳಲ್ಲಿ ಸಂಜೆ ಕಾಲೇಜು ಆರಂಭಕ್ಕೆ ಅನುಮತಿ ನೀಡಿದೆ.

ಈ ಕಾಲೇಜಗಳಲ್ಲಿ, ಉದ್ಯೋಗ ಅವಕಾಶ ನೀಡುತ್ತವೆ ಎನ್ನಲಾಗುವ ಬಿ.ಕಾಂ. ಹಾಗೂ ಬಿಸಿಎ ಕೋರ್ಸ್‌ಗಳನ್ನು ಆರಂಭದಲ್ಲಿ ಪರಿಚಯಿಸಿದೆ. ರಾಜ್ಯದಾದ್ಯಂತ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಾದರೂ ಪ್ರವೇಶ ಪಡೆಯಬಹುದು ಎನ್ನುವ ನಿರೀಕ್ಷೆ ಅಧಿಕಾರಿಗಳದಾಗಿತ್ತು. ಆದರೆ, 337 ವಿದ್ಯಾರ್ಥಿಗಳಷ್ಟೇ ಪ್ರವೇಶ ಪಡೆದಿದ್ದಾರೆ. ಈ ಪೈಕಿ ಧಾರವಾಡದಲ್ಲಿ 78, ಬೆಂಗಳೂರಿನಲ್ಲಿ 60 ವಿದ್ಯಾರ್ಥಿಗಳಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ADVERTISEMENT

ಆರಂಭವಾಗದ ತರಗತಿ:

ಸರ್ಕಾರದ ನಿಯಮಾನುಸಾರ ಸಂಜೆ ಪದವಿ ಕಾಲೇಜಿನಲ್ಲಿ ಯಾವುದೇ ವಿಭಾಗ ಆರಂಭಿಸಲು ಕನಿಷ್ಠ 10 ವಿದ್ಯಾರ್ಥಿಗಳಿರಬೇಕು. ಅಷ್ಟೊಂದು ವಿದ್ಯಾರ್ಥಿಗಳು ದಾಖಲಾತಿ ಪಡೆದಿರುವಲ್ಲಿ ಈಗಾಗಲೇ ತರಗತಿ ಆರಂಭಗೊಂಡಿವೆ. ಆದರೆ, 10ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ ಕಾಲೇಜುಗಳಲ್ಲಿ ಗೊಂದಲ ಎದುರಾಗಿದೆ. ತರಗತಿ ಆರಂಭಿಸಬೇಕೋ, ಬೇಡವೋ ಎಂದು ಪ್ರಾಚಾರ್ಯರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಪ್ರವೇಶ ಪಡೆದಿರುವವರು ತರಗತಿಗಾಗಿ ಚಾತಕಪಕ್ಷಿಗಳಂತೆ ಕಾಯುತ್ತಿದ್ದಾರೆ. ಆಗಾಗ ಕಾಲೇಜಿಗೂ ಎಡತಾಕುತ್ತಿದ್ದಾರೆ.

ಮೂಲಸೌಲಭ್ಯಗಳೇ ಇಲ್ಲ:

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಲಭ್ಯವಿರುವ ಸೌಲಭ್ಯಗಳನ್ನೇ ಸಂಜೆ ಕಾಲೇಜಿಗೂ ಬಳಸಿಕೊಳ್ಳುವಂತೆ ಸೂಚಿಸಲಾಗಿದೆ. ಬೆಳಗಾವಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲೇ ಸಂಜೆ ಕಾಲೇಜು ಆರಂಭಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಆದರೆ, ಇಲ್ಲಿ ಕನಿಷ್ಠ ಮೂಲಸೌಕರ್ಯಗಳಿಲ್ಲ. 2021ರ ಆಗಸ್ಟ್ ಅಂತ್ಯಕ್ಕೆ ಸಂಜೆ ಕಾಲೇಜು ಘೋಷಣೆಯಾಯಿತು. ವಿವಿಧ ವಿಶ್ವವಿದ್ಯಾಲಯಗಳಿಂದ ಮಾನ್ಯತೆ ಸಿಗುವಲ್ಲೂ ವಿಳಂಬವಾಯಿತು. ಇವೆಲ್ಲ ಕಾರಣಗಳಿಂದಲೂ ನಿರೀಕ್ಷೆಯಂತೆ ದಾಖಲಾತಿಯಾಗಿಲ್ಲ ಎನ್ನಲಾಗುತ್ತಿದೆ.

ಅವಧಿ ವಿಸ್ತರಣೆ:

‘10ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ಪ್ರವೇಶ ಪಡೆದಿರುವ ಕಾಲೇಜುಗಳಲ್ಲಿ ಆಯಾ ವಿಶ್ವವಿದ್ಯಾಲಯಗಳ ಅನುಮತಿ ಮೇರೆಗೆ ಪ್ರವೇಶ ಪ್ರಕ್ರಿಯೆ ಅವಧಿ ವಿಸ್ತರಿಸಿಕೊಳ್ಳುವಂತೆ ಸೂಚಿಸಲಾಗಿದೆ. ಆದರೂ ಯಾರೂ ಪ್ರವೇಶ ಪಡೆಯದಿದ್ದರೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ಒಪ್ಪಿಗೆ ಸೂಚಿಸಿದವರನ್ನು ಬೆಳಗಿನ ಅವಧಿ ಪದವಿ ಕಾಲೇಜುಗಳಿಗೆ ವರ್ಗಾಯಿಸಲಾಗುವುದು’ ಎಂದು ಕಾಲೇಜು ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಸಂಜೆ ಕಾಲೇಜಿನಲ್ಲಿ ಪ್ರವೇಶಾತಿ ವಿವರ (ಜಿಲ್ಲೆ;ಬಿ.ಕಾಂ.;ಬಿಸಿಎ)

ಧಾರವಾಡ;73;05
ಬೆಂಗಳೂರು;48;12
ತುಮಕೂರು;08;17
ವಿಜಯಪುರ;17;17
ಬಳ್ಳಾರಿ;18;15
ಮಂಗಳೂರು;15;15
ದಾವಣಗೆರೆ;09;21
ಶಿವಮೊಗ್ಗ;08;19
ಬೆಳಗಾವಿ;09;00
ಮೈಸೂರು;02;09
ಕಲಬುರಗಿ;00;00
ಒಟ್ಟು;207;130

****

ನಮ್ಮಲ್ಲಿ ಸಂಜೆ ಕಾಲೇಜಿಗೆ ಪ್ರವೇಶ ಪಡೆದವರ ಸಂಖ್ಯೆ ಕಡಿಮೆ ಇದೆ. ಹಾಗಾಗಿ ತರಗತಿ ಆರಂಭಿಸಬೇಕೇ, ಬೇಡವೇ ಎಂದು ಕೇಂದ್ರ ಕಚೇರಿಗೆ ಬರೆದಿದ್ದೇನೆ. ಅನುಮತಿ ಸಿಕ್ಕರೆ, ತ್ವರಿತವಾಗಿ ವಿಷಯವಾರು ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಗುವುದು.

–ಸಿ.ಈಶ್ವರಚಂದ್ರ, ಪ್ರಾಚಾರ್ಯ, ಸರ್ಕಾರಿ ಪ್ರಥಮ ದರ್ಜೆ ಸಂಜೆ ಕಾಲೇಜು, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.