ADVERTISEMENT

ಬೆಳಗಾವಿ: ನಿಲ್ಲದ ಪಿಒಪಿ ಮೂರ್ತಿಗಳ ಆಡಂಬರ

ಬೆಳಗಾವಿ ಮಾರುಕಟ್ಟೆ ಪ್ರವೇಶಿಸಿದ ಮಹಾರಾಷ್ಟ್ರದ ಪಿಒಪಿ ಮೂರ್ತಿಗಳು; ಕಣ್ಣು ಮುಚ್ಚಿ ಕುಳಿತ ಪರಿಸರ ಅಧಿಕಾರಿಗಳು

ಇಮಾಮ್‌ಹುಸೇನ್‌ ಗೂಡುನವರ
Published 24 ಜುಲೈ 2025, 2:15 IST
Last Updated 24 ಜುಲೈ 2025, 2:15 IST
ಬೆಳಗಾವಿ ಮಾರುಕಟ್ಟೆಗೆ ಬಂದಿರುವ ಪಿಒಪಿ ಗಣೇಶನ ಮೂರ್ತಿಗಳು
ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ಬೆಳಗಾವಿ ಮಾರುಕಟ್ಟೆಗೆ ಬಂದಿರುವ ಪಿಒಪಿ ಗಣೇಶನ ಮೂರ್ತಿಗಳು ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ   

ಬೆಳಗಾವಿ: ಗಣೇಶೋತ್ಸವ ಮತ್ತೆ ಬಂದಿದೆ. ಈ ವರ್ಷವೂ ನಗರದ ಮಾರುಕಟ್ಟೆಯನ್ನು ಪ್ಲಾಸ್ಟಿಕ್‌ ಆಫ್‌ ಪ್ಯಾರಿಸ್‌(ಪಿಒಪಿ)ನಿಂದ ತಯಾರಿಸಿದ ಗಣೇಶನ ಮೂರ್ತಿಗಳೇ ಅಲಂಕರಿಸಿವೆ. ಅದರಲ್ಲೂ ಮಹಾರಾಷ್ಟ್ರದಿಂದ ಪಿಒಪಿ ಮೂರ್ತಿಗಳು ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿವೆ. ಇದಲ್ಲದೆ, ಸ್ಥಳೀಯವಾಗಿಯೂ ಸಿದ್ಧಪಡಿಸಲಾಗುತ್ತಿದೆ.

ಆಗಸ್ಟ್‌ ಕೊನೆಯ ವಾರ ಗಣೇಶೋತ್ಸವ ಇದೆ. ಜನರು ತಮ್ಮ ಮನೆಗಳಲ್ಲಿ ಬಗೆಬಗೆಯ ವಿನ್ಯಾಸಗಳ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸಲು ಈಗಿನಿಂದಲೇ ತಯಾರಿ ನಡೆಸಿದ್ದಾರೆ. ಮಾರುಕಟ್ಟೆಯಲ್ಲಿ ಇರುವ ವಿವಿಧ ಅಂಗಡಿಗಳ ಜತೆಗೆ, ಮೂರ್ತಿಕಾರರ ಮನೆಗೆ ತೆರಳಿ ತಮ್ಮಿಷ್ಟದ ಮೂರ್ತಿಗೆ ಬೇಡಿಕೆ ಸಲ್ಲಿಸುತ್ತಿದ್ದಾರೆ. 

ಆದರೆ, ಮಣ್ಣಿನಲ್ಲಿ ಸಿದ್ಧಪಡಿಸಿದ ಮೂರ್ತಿಗಳಿಗಿಂತ ಪಿಒಪಿ ಮೂರ್ತಿಗಳೇ ಹೆಚ್ಚಾಗಿ ಕಾಣಸಿಗುತ್ತಿವೆ. ‘ಪಿಒಪಿ ಮೂರ್ತಿಗಳಿಗೆ ನಿಷೇಧ’ ಎಂಬ ನಿಯಮ ಪಾಲನೆಯಾಗದಿರುವುದು ಕಂಡುಬರುತ್ತಿದೆ.

ADVERTISEMENT

ಸಮನ್ವಯ ಕೊರತೆ: ಹಲವು ವರ್ಷಗಳ ಹಿಂದೆ ಪಿಒಪಿ ಮೂರ್ತಿಗಳ ಮಾರಾಟ ಜೋರಾಗಿತ್ತು. ಅವುಗಳನ್ನೇ ಜನರು ಮನೆಗಳಲ್ಲಿ ಹೆಚ್ಚಾಗಿ ಪ್ರತಿಷ್ಠಾಪಿಸುತ್ತಿದ್ದರು. ಆದರೆ, ವಿಸರ್ಜನೆ ನಂತರ ಅವು ನೀರಿನಲ್ಲಿ ಬೇಗ ಕರಗುವುದಿಲ್ಲ. ರಾಸಾಯನಿಕ ಬಳಸಿರುವ ಕಾರಣ ನೀರು ಕಲುಷಿತವಾಗುತ್ತದೆ ಎಂಬ ದೂರು ಬಂದವು. ಹಾಗಾಗಿ ಪಿಒಪಿ ಮೂರ್ತಿಗಳಿಗೆ ನಿಷೇಧ ಹೇರಲಾಗಿತ್ತು. ಜನರು ಹಂತ–ಹಂತವಾಗಿ ಮಣ್ಣಿನಿಂದ ತಯಾರಿಸಿದ್ದ ಮೂರ್ತಿ ಪ್ರತಿಷ್ಠಾಪಿಸಲು ಆರಂಭಿಸಿದ್ದರು.

ಈ ಮಧ್ಯೆ, ವಿವಿಧ ಇಲಾಖೆಗಳ ಮಧ್ಯೆ ಇರುವ ಸಮನ್ವಯ ಕೊರತೆಯಿಂದ ಈಗ ಮತ್ತೆ ಪಿಒಪಿ ಮೂರ್ತಿಗಳೇ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಂದಿವೆ. ಸ್ಥಳೀಯವಾಗಿಯೂ ಮೂರ್ತಿಕಾರರು ಅವುಗಳನ್ನೇ ಹೆಚ್ಚಾಗಿ  ತಯಾರಿಸುತ್ತಿದ್ದಾರೆ. 

ಬೆಳಗಾವಿ ಮಾರುಕಟ್ಟೆಗೆ ಬಂದಿರುವ ಪಿಒಪಿ ಗಣೇಶನ ಮೂರ್ತಿಗಳು
ಪಿಒಪಿ ಮೂರ್ತಿಗಳ ಹಾವಳಿ ತಪ್ಪಿಸಲು ಪ್ರಯತ್ನಿಸುತ್ತಿದ್ದೇವೆ. ಗಣೇಶೋತ್ಸವ ಮಂಡಳಗಳ ಜತೆ ಸಭೆ ನಡೆಸಿ ಪಿಒಪಿ ಮೂರ್ತಿಗಳನ್ನು ಪ್ರತಿಷ್ಠಾಪಿಸದಂತೆ ಕೋರುತ್ತೇವೆ
ಎಚ್.ಹನುಮಂತಪ್ಪ ಉಪ ಪರಿಸರ ಅಧಿಕಾರಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬೆಳಗಾವಿ
ಕೆಲ ಗ್ರಾಹಕರು ಒಂದು ವರ್ಷ ಮೊದಲೇ ಮೂರ್ತಿಗೆ ಬೇಡಿಕೆ ಸಲ್ಲಿಸಿರುತ್ತಾರೆ. ಮೂರ್ತಿಕಾರರು ಆಗಿನಿಂದಲೇ ಸಿದ್ಧಪಡಿಸಲು ಆರಂಭಿಸಿರುತ್ತಾರೆ. ಹಾಗಾಗಿ ಪಿಒಪಿ ಮೂರ್ತಿಗೆ ಕಡಿವಾಣ ಹಾಕಲಾಗಿಲ್ಲ. ಮುಂದಿನ ವರ್ಷ ಕಟ್ಟುನಿಟ್ಟಾಗಿ ನಿಯಮ ಅನುಷ್ಠಾನಗೊಳಿಸಲಾಗುವುದು
ಬಿ.ಶುಭ ಆಯುಕ್ತೆ ಮಹಾನಗರ ಪಾಲಿಕೆ
ಗ್ರಾಹಕರು ಬೇಡಿಕೆ ಸಲ್ಲಿಸಿದ ಮೂರ್ತಿ ಸಿದ್ಧಪಡಿಸಿಕೊಡುತ್ತೇವೆ. ಆದರೆ ಗ್ರಾಹಕರು ಪಿಒ‍‍ಪಿ ಮೂರ್ತಿಗಳನ್ನೇ ಕೇಳುತ್ತಿದ್ದಾರೆ. ಅವುಗಳಲ್ಲೂ ತುಸು ಮಣ್ಣು ಬಳಸುತ್ತಿದ್ದೇವೆ
ವಿನಾಯಕ ಪಾಟೀಲ ಮೂರ್ತಿಕಾರ

‘ಪತ್ರ ಬರೆದಿದ್ದೆವು’

‘ಪಿಒಪಿಯಿಂದ ತಯಾರಿಸಿದ ಗಣೇಶನ ಮೂರ್ತಿಗಳು ಬೆಳಗಾವಿ ಜಿಲ್ಲೆಗೆ ಬಾರದಂತೆ ತಡೆಯುವ ಕುರಿತು ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ಎರಡು ತಿಂಗಳ ಹಿಂದೆಯೇ ಪತ್ರ ಬರೆದಿದ್ದೆವು. ಆದರೆ ಅವರು ಸರಿಯಾಗಿ ಪಾಲಿಸಿಲ್ಲ. ಸಾಗಣೆ ಸಮಯದಲ್ಲಿ ರಾಜ್ಯದ ಗಡಿಗಳಲ್ಲಿ ನಿಲ್ಲಿಸದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ವಿವಿಧ ಸ್ಥಳಗಳಿಂದ ಬೆಳಗಾವಿ ಮಾರುಕಟ್ಟೆಗೆ ಪಿಒಪಿ ಮೂರ್ತಿಗಳು ಬಂದಿವೆ’ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಬೆಳಗಾವಿ ಉಪ ಪರಿಸರ ಅಧಿಕಾರಿ ಎಚ್‌.ಹನುಮಂತಪ್ಪ  ‘ಪ್ರಜಾವಾಣಿ’ಗೆ ತಿಳಿಸಿದರು. ‘ಮನೆಗಳಲ್ಲಿ ಪ್ರತಿಷ್ಠಾಪನೆಗಾಗಿ ಚಿಕ್ಕೋಡಿ ಗೋಕಾಕ ಮತ್ತು ಹುಕ್ಕೇರಿ ತಾಲ್ಲೂಕುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮೂರ್ತಿಗಳನ್ನು ತಯಾರಿಸಲಾಗುತ್ತದೆ. ಹಾಗಾಗಿ ಅಲ್ಲಿನ ಮೂರ್ತಿಕಾರರೊಂದಿಗೆ ಸಭೆ ನಡೆಸಿದ್ದೇವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.