ADVERTISEMENT

ಬೆಳಗಾವಿ: ಕಸಾಪ ಚುನಾವಣೆಯಲ್ಲಿ ಮಂಗಲಾ ಬೆಂಬಲಿಸಿ: ಕೋರೆ ಮನವಿ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2021, 13:03 IST
Last Updated 10 ನವೆಂಬರ್ 2021, 13:03 IST
   

ಬೆಳಗಾವಿ: ‘ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಮಂಗಲಾ ಮೆಟಗುಡ್ಡ ಅವರ ಪುನರಾಯ್ಕೆಗೆ ಮತದಾರರು ಬೆಂಬಲ ನೀಡಬೇಕು’ ಎಂದು ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಕೋರಿದರು.

ಇಲ್ಲಿನ ನೆಹರೂ ನಗರದ ಕನ್ನಡ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಮಂಗಲಾ ಗಡಿ ನಾಡಿನಲ್ಲಿ ಕನ್ನಡ ಸಾಹಿತ್ಯವನ್ನು ಬೆಳಗಿಸಿದ್ದಾರೆ ಹಾಗೂ ಐದು ವರ್ಷಗಳಲ್ಲಿ ಹೊಸ ಯುಗವನ್ನೇ ಆರಂಭಿಸಿದ್ದಾರೆ’ ಎಂದರು.

‘ಅವರು ಇನ್ನೊಂದು ಅವಧಿಗೆ ಅಧ್ಯಕ್ಷರಾಗಿ, ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸಲೆಂದು ಒತ್ತಾಯಪೂರ್ವಕವಾಗಿ ಚುನಾವಣೆಗೆ ನಿಲ್ಲಿಸಿದ್ದೇವೆ. ಹೀಗಾಗಿ ಕನ್ನಡಾಭಿಮಾನಿಗಳು ಅವರನ್ನು ಆರಿಸಿ ತರಬೇಕು’ ಎಂದು ಮನವಿ ಮಾಡಿದರು.

ADVERTISEMENT

‘ಮಂಗಲಾ ಅಧ್ಯಕ್ಷರಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಕನ್ನಡ ಸಾಹಿತ್ಯದ ಬಗ್ಗೆ ಅಭಿಮಾನ ಮೂಡಿಸಿದ ಶ್ರೇಯಸ್ಸು ಅವರಿಗೆ ಸಲ್ಲಬೇಕು. ಪ್ರತಿ ತಾಲ್ಲೂಕಿನಲ್ಲೂ ಪರಿಷತ್ತನ್ನು ಬೆಳೆಸಿದ್ದಾರೆ. ಅದರ ಜೊತೆಗೆ ಕನ್ನಡ ಭವನ ನಿರ್ಮಾಣದ ಕೆಲಸ ಆರಂಭಿಸಿದ್ದಾರೆ. ಖಾನಾಪುರದಲ್ಲಿ ಕಾಮಗಾರಿ ಶುರುವಾಗಿದೆ. ನಿಪ್ಪಾಣಿಯಲ್ಲಿ ಜಾಗ ಕೊಡಲು ಸರ್ಕಾರ ಒಪ್ಪಿದೆ. ಅಲ್ಲೂ ಕನ್ನಡ ಭವನ ನಿರ್ಮಾಣಗೊಳ್ಳಲಿದೆ’ ಎಂದರು.

‘ಮತ್ತೈದು ವರ್ಷ ಅವರಿಗೆ ಅಧಿಕಾರ ಕೊಟ್ಟರೆ ಗಡಿ ತಾಲ್ಲೂಕುಗಳಾದ ಖಾನಾಪುರ, ನಿಪ್ಪಾಣಿ, ಕಾಗವಾಡ, ಅಥಣಿ ಸೇರಿದಂತೆ ಎಲ್ಲೆಲ್ಲಿ ಕನ್ನಡ ಶಾಲೆಗಳು ಇಲ್ಲವೋ ಅಲ್ಲೆಲ್ಲಾ ಆರಂಭಿಸುವಂತೆ ಮಾಡಲಿದ್ದಾರೆ. ಈ ಬಗ್ಗೆ ಪ್ರಣಾಳಿಕೆಯಲ್ಲೂ ತಿಳಿಸಿದ್ದಾರೆ’ ಎಂದು ಹೇಳಿದರು.

ಅಭ್ಯರ್ಥಿ ಮಂಗಲಾ ಮೆಟಗುಡ್ಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.