ಬೆಳಗಾವಿ: ಡಾ.ಪ್ರಭಾಕರ ಕೋರೆ ಅವರಿಗೆ ಈಗ 77ರ ಹರೆಯ. ಅವರು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿ ನಾಲ್ಕು ದಶಕ ಕಳೆದಿವೆ. ಅಂದರೆ ಬದುಕಿನ ಶೇ 70ರಷ್ಟು ಭಾಗವನ್ನು ಅವರು ಸಂಸ್ಥೆಗಾಗಿಯೇ ಸವೆಸಿದ್ದಾರೆ. ಸಂಸ್ಥೆಯ ‘ಅಷ್ಟಮ ಋಷಿ’ ಎಂದೇ ಕರೆಯಲಾಗುವ ಅವರ ಜನ್ಮದಿನವು ಎಲ್ಲೆಡೆ ಸಂಭ್ರಮ ತಂದಿದೆ.
ಡಾ. ಕೋರೆ ಅವರು 1947ರ ಆಗಸ್ಟ್ 1ರಂದು ಚಿಕ್ಕೋಡಿ ತಾಲ್ಲೂಕಿನ ಅಂಕಲಿಯಲ್ಲಿ ಜನಿಸಿದರು. ಅವರ ತಂದೆ ಬಸವಪ್ರಭು ಕೋರೆ ಹಾಗೂ ತಾಯಿ ಶಾರದಾದೇವಿ. ಅಂಕಲಿಯಂಥ ಸಣ್ಣ ಹಳ್ಳಿಯ ಹುಡುಗ ಜಗತ್ತೇ ನೋಡುವಂತೆ ಬೆಳೆದಿದ್ದು ಪವಾಡವೇ ಸರಿ. ಸಣ್ಣ ವ್ಯಾಪಾರಿ ಕುಟುಂಬದಲ್ಲಿ ಜನಿಸಿದ ಅವರಿಗೆ ತಂದೆ– ತಾಯಿ ಬಾಲ್ಯದಲ್ಲೇ ನೀಡಿದ ಸಂಸ್ಕಾರ ನೀಡಿದರು. ಮುಂದೆ ಅದೇ ಬಾಲಕ ಉತ್ತರ ಕರ್ನಾಟಕದ ಶೈಕ್ಷಣಿಕ ಕ್ಷೇತ್ರಕ್ಕೆ ಗಟ್ಟಿ ಬೇರಾಗಿ ನಿಂತರು. ಕೋರೆ ಅವರ ಸಾಧನೆಯ ಮೂಲ ಹುಡುಕಿದರೆ ಅವರ ತಂದೆ– ತಾಯಿಯೇ ಸಿಗುತ್ತಾರೆ.
ಡಾ.ಕೋರೆ ಅವರ ಧೀಮಂತ ವ್ಯಕ್ತಿಯಾಗಿ ಬೆಳೆಯಲು ಮುಖ್ಯ ಕಾರಣ ಅವರಲ್ಲಿನ ಸಕಾರಾತ್ಮಕ ಆಲೋಚನೆಗಳು. ಅಸಾಧ್ಯ ಎಂಬ ಪದ ಅವರ ಶಬ್ದಕೋಶದಲ್ಲೇ ಇಲ್ಲ ಎಂಬುದನ್ನು ಅವರು ಸಾಧಿಸಿ ತೋರಿಸಿದ್ದಾರೆ.
ಅದಮ್ಯ ಉತ್ಸಾಹ, ಅನನ್ಯ ಕ್ರಿಯಾಶೀಲತೆ, ದಣಿವರಿಯದ ದುಡಿಮೆ, ಹೊಸದನ್ನು ಮಾಡುವ ಯೋಜನೆ, ದೊಡ್ಡದನ್ನು ಸಾಧಿಸುವ ಹುಮ್ಮಸ್ಸು, ದೂರದರ್ಶಿತ್ವ ಇವು ಡಾ.ಪ್ರಭಾಕರ ಕೋರೆ ಅವರ ವ್ಯಕ್ತಿತ್ವದ ಅಸ್ಮಿತೆಗಳು. ರಾಜಕಾರಣಿಯಾಗಿ, ಮುತ್ಸದ್ದಿಯಾಗಿ, ಸಹಕಾರಿ ಧುರೀಣರಾಗಿ, ಶಿಕ್ಷಣ ತಜ್ಞರಾಗಿ, ನಾಡು–ನುಡಿಗಳ ಅಭಿಮಾನಿಯಾಗಿ ಅವರು ಬಹು ವ್ಯಕ್ತಿತ್ವದ ಸಮುದ್ರವೇ ಆಗಿದ್ದಾರೆ.
ನಾಯಕತ್ವವು ಒಂದೇ ದಿನದಲ್ಲಿ ಬರುವುದಿಲ್ಲ. ಒಂದೇ ಗುಣದಿಂದ ಬರುವುದಿಲ್ಲ. ಪ್ರಪಂಚದ ಎಲ್ಲ ಕ್ಷೇತ್ರಗಳಿಗೂ ಈ ಮಾತು ಅನ್ವಯಿಸುತ್ತದೆ. ನಾಯಕನಾದವನಿಗೆ ಜವಾಬ್ದಾರಿ, ಬದ್ಧತೆ, ಬುದ್ಧಿ, ಧೈರ್ಯ, ವಿದ್ಯೆ, ಪ್ರಾಮಾಣಿಕತೆ, ವಾಕ್‌ಚಾತುರ್ಯ, ನಿಷ್ಠೆ, ಛಲ ಮೊದಲಾದ ಗುಣಗಳಿರಬೇಕು. ಈ ಎಲ್ಲ ಗುಣಗಳನ್ನು ಒಬ್ಬರಲ್ಲೇ ಕಾಣಬೇಕೆಂದರೆ ಡಾ.ಪ್ರಭಾಕರ ಕೋರೆ ಅವರನ್ನೇ ಕಾಣಬೇಕು.
ಶೂನ್ಯದಿಂದ ಶಿಖರಕ್ಕೆ: ಸಪ್ತರ್ಷಿಗಳು ಕಟ್ಟಿ ಕೆಎಲ್‌ಇ ಸಂಸ್ಥೆಯನ್ನು, ಅವರ ಕನಸನ್ನು ನನಸು ಮಾಡಿದ್ದು ಕೋರೆ ಅವರು. ಇದಕ್ಕಿಂತ ಮುಖ್ಯವಾದ ಸಂಗತಿಯೆಂದರೆ; ಸಪ್ತರ್ಶಿಗಳ ಆದರ್ಶದ ಹಾದಿಯಲ್ಲೇ ಸಂಸ್ಥೆ ಬೆಳೆಸಿದರು. ಇದೇ ಕಾರಣಕ್ಕೆ ಅವರನ್ನು ‘ಎಂಟನೇ ಋಷಿ’ ಎಂದು ಕರೆಯುವುದು ಸೂಕ್ತವೂ ಆಗಿದೆ.
ಬೆಳಗಾವಿಯ ಅಖಿಲ ಭಾರತ 70ನೇ ಕನ್ನಡ ಸಾಹಿತ್ಯ ಸಮ್ಮೇಳನದ ಭಾರೀ ಯಶಸ್ಸು, ಎರಡನೆಯ ವಿಶ್ವಕನ್ನಡ ಸಮ್ಮೇಳನದ ಯಶಸ್ಸು ಕೂಡ ಡಾ.ಕೋರೆ ಅವರಿಲ್ಲದೇ ಸಾಧ್ಯವಿರಲಿಲ್ಲ. ಗಡಿ ಭಾಗದಲ್ಲಿ ಕನ್ನಡ ನಾಡು– ನುಡಿಗೆ ಅವರು ನೀಡಿದ ಕೊಡುಗೆ ಅನನ್ಯ. ಭಾಷಾಪ್ರೇಮಿ, ಸಾಹಿತ್ಯ ಪ್ರೇಮಿಯೂ ಆದ ಅವರು ಹೈಟೆಕ್ ಕನ್ನಡ ಭವನ ನಿರ್ಮಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ.
ಶಿಸ್ತು– ಗುಣಮಟ್ಟ– ಪ್ರಯೋಜನ– ಸಾಫಲ್ಯ; ಇವು ಡಾ.ಕೋರೆಯವರ ಬದಕುಕಿನ ಆಯಾಮಗಳು. ಬೆಳಗಾವಿಯಲ್ಲಿ ಎರಡು ಬಾರಿ ಯಶಸ್ವಿಯಾಗಿ ವಿಧಾನಮಂಡಲ ಅಧಿವೇಶನ ಜರುಗಿಸಿದ್ದು, ಅಖಿಲಭಾರತ ವೀರಶೈವ ಮಹಾಸಭಾ ಸಮಾರಂಭದ ಜವಾಬ್ದಾರಿ ನಿಭಾಯಿಸಿದ್ದು, ರಾಜ್ಯಮಟ್ಟದ ಶಿಕ್ಷಣ ಪ್ರಶಸ್ತಿ ಸಮಾರಂಭ ಆಯೋಜಿಸಿದ್ದು, ಶರಣ ಸಾಹಿತ್ಯ ಪರಿಷತ್, ಯುವಜನ ಸಮ್ಮೇಳನ ಇಂಥ ಹಲವಾರು ರಾಜ್ಯ ಹಾಗೂ ರಾಷ್ಟ್ರಮಟ್ಟದ ಸಮಾರಂಭಗಳ ಹಿಂದೆ ಶಕ್ತಿಯಾಗಿ ನಿಂತಿದ್ದನ್ನು ಮರೆಯುವಂತಿಲ್ಲ.
ಕನ್ನಡಕ್ಕೆ ನೆಲೆ ಬೆಲೆ ಇಲ್ಲದ ಕಾಲದಲ್ಲಿ ಕನ್ನಡಿಗರನ್ನು ಒಗ್ಗೂಡಿಸಿ ಅಖಂಡ ಕರ್ನಾಟಕದ ಕನಸನ್ನು ನನಸುಗೊಳಿಸಿದ ಶ್ರೇಯಸ್ಸಿನಲ್ಲಿ ಸಿಂಹಪಾಲು ಕೆಎಲ್‌ಇ ಸಂಸ್ಥೆಯದು. ಅಂದಿನ ಸಂಸ್ಥಾಪಕ ಸಪ್ತ ಋಷಿಗಳದು. ಇಂದು ಡಾ.ಕೋರೆಯವರು ಇದೇ ನೆಲದಲ್ಲಿ ವಿಧಾನಮಂಡಲದ ಅಧಿವೇಶನಗಳನ್ನ ಯಶಸ್ವಿಯಾಗಿ ಸಂಘಟಿಸಿ ಸುವರ್ಣ ವಿಧಾನಸೌಧ ನಿರ್ಮಾಣಮಾಡಿ ತಮ್ಮ ಶಕ್ತಿ ಸಾಮರ್ಥ್ಯ ತೋರಿದವರು.
ಸಿಂಹಪಾಲು: ಒಂದು ಕಾಲಕ್ಕೆ ಬೆಳಗಾವಿಯಲ್ಲಿ ಜಿ.ಎ. ಹೈಸ್ಕೂಲು, ಲಿಂಗರಾಜ ಕಾಲೇಜು, ಆರ್.ಎಲ್.ಸೈನ್ಸ್ ಕಾಲೇಜು, ಜೆಎನ್ ಮೆಡಿಕಲ್ ಕಾಲೇಜುಗಳಿಗೆ ಮಾತ್ರ ಸೀಮಿತವಾಗಿತ್ತು. ಇಂದು ಇದೇ ನಗರದಲ್ಲಿ ಕೆಎಲ್‌ಇ ಸಂಸ್ಥೆ ಕಳೆದ 40 ವರ್ಷಗಳಲ್ಲಿ 50 ಅಂಗಸಂಸ್ಥೆಗಳನ್ನು ಹೊಂದಿದೆ. ಉತ್ತರ ಕರ್ನಾಟಕದಲ್ಲಿ ಕನ್ನಡಿಗರ ಭದ್ರಕೋಟೆ ಎನಿಸಿದೆ. ಸಂಸ್ಥೆಯ ಮೂಲಕ ಬೆಳಗಾವಿ ಹೆಸರೂ ವಿಶ್ವಮಟ್ಟದಲ್ಲಿ ಬೆಳಗುತ್ತಿದೆ.
ಶಿಕ್ಷಣ, ಸಾಹತ್ಯ, ಸಂಸ್ಕೃತಿ, ಉದ್ಯೋಗ, ಸಹಕಾರ ಇಷ್ಟಕ್ಕೇ ಡಾ.ಕೋರೆ ಅವರು ತೃಪ್ತರಾಗಲಿಲ್ಲ. ಅವರ ಮನಸ್ಸು ಮತ್ತೂ ತುಡಿಯುತ್ತಿತ್ತು. ರೈತರಿಗಾಗಿ ಏನಾದರೂ ಮಾಡಬೇಕು ಎಂದು ನಿರ್ಧರಿಸಿದರು. ಅದರ ಪರಿಣಾಮ ಬೃಹದ್ದಾದ ಕೃಷಿ ವಿಜ್ಞಾನ ಕೇಂದ್ರವನ್ನೂ ನಿರ್ಮಿಸಿದರು. ಅದು ರೈತರ ಬದುಕಿಗೆ, ಅವರ ಮಕ್ಕಳ ಬದುಕಿಗೆ ಆಶಾಕಿರಣವಾಗಿ ಬೆಳೆದಿದೆ.
ಕರ್ನಾಟಕ, ಮಹಾರಾಷ್ಟ್ರ, ದೆಹಲಿ ಸೇರಿದಂತೆ, ವಿದೇಶಗಳಲ್ಲೂ ಶಾಲೆ– ಕಾಲೇಜು ಆರಂಭಿಸಿದ್ದಾರೆ. ಅತ್ಯಾಧುನಿಕ ಸೌಲಭ್ಯ ಹೊಂದಿದ ಬೃಹತ್ ಆಸ್ಪತ್ರೆಗಳು ಹಾಗೂ ಸಂಶೋಧನಾ ಸಂಸ್ಥೆಗಳು ಕ್ರಿಯಾಶೀಲವಾಗಿವೆ.
ಇಂಥ ಅದಮ್ಯ ವ್ಯಕ್ತಿತ್ವದ ಸಾಧಕ ನಮ್ಮ ನಡುವೆ ಇದ್ದಾರೆ ಎಂಬುದೇ ಹೆಮ್ಮೆ, ಭರವಸೆ, ಧೈರ್ಯ. ಅಜಾತ ಶತ್ರು– ಸರ್ವರಿಗೂ ಬೇಕಾಗಿರುವ ಡಾ.ಕೋರೆ ಅವರು ನೂರಾರು ವರ್ಷ ಸುಖವಾಗಿ ಬಾಳಲಿ ಎಂಬುದು ಜನರ ಹಾರೈಕೆ.
ಕೆಎಲ್ಇ ಸಂಸ್ಥೆಯ ‘ಸುವರ್ಣ ಯುಗ’
1984ರ ಮೇ 16ರಂದು ಪ್ರಭಾಕರ ಕೋರೆ ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆಯ ನೊಗ ಹೊತ್ತರು. ಆಗ ಅವರಿಗೆ ಕೇವಲ 38 ವರ್ಷ ವಯಸ್ಸು. ದೊಡ್ಡ ಸಂಸ್ಥೆಯೊಂದನ್ನು ಯುವಕನ ಹೆಗಲಿಗೆ ನೀಡಲಾಗಿತ್ತು. ಪ್ರಭಾಕರ ಕೋರೆ ಅವರಲ್ಲಿದ್ದ ನಾಯಕತ್ವ ಗುಣಗಳೇ ಇದಕ್ಕೆ ಕಾರಣವಾಗಿದ್ದವು. ಸಂಸ್ಥೆಯ ನಿರ್ದೇಶಕರು ಸದಸ್ಯರು ಶಿಕ್ಷಣ ಪ್ರೇಮಿಗಳು ಇಟ್ಟುಕೊಂಡ ನಿರೀಕ್ಷೆಗಿಂತ ಹೆಚ್ಚಾಗಿ ಅವರು ಸಂಸ್ಥೆ ಬೆಳೆಸಿದರು. 1984ರಿಂದ 2024ರ ಕಾಲಘಟ್ಟವನ್ನು ‘ಕೆಎಲ್‍ಇ ಸಂಸ್ಥೆಯ ಸುವರ್ಣ ಯುಗ’ ಎಂದೇ ಸದಸ್ಯರು ಪರಿಗಣಿಸುತ್ತಾರೆ. 1984ರಲ್ಲಿ 38 ಅಂಗಸಂಸ್ಥೆಗಳು ಇದ್ದವು. ಈಗ ಅವುಗಳ ಸಂಖ್ಯೆ 310. ಆಗ ₹9 ಕೋಟಿ ವಾರ್ಷಿಕ ಬಜೆಟ್ ರೂಪಿಸಲಾಗುತ್ತಿತ್ತು. ಈಗ ₹3000 ಕೋಟಿ ದಾಟಿದೆ. ಶಿಕ್ಷಣ ಸಂಸ್ಥೆಯನ್ನು ಆರ್ಥಿಕವಾಗಿಯೂ ಇಷ್ಟೊಂದು ಬಲಾಢ್ಯ ಮಾಡಿದ್ದು ಕೋರೆ ಅವರಲ್ಲಿನ ಜಾಣ್ಮೆಗೆ ಕನ್ನಡಿ. ಕೆಎಲ್ಇ ಸಂಸ್ಥೆಯಲ್ಲಿ 1.25 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು 16 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಇದ್ದಾರೆ. ವೈದ್ಯಕೀಯ ಕಾಲೇಜುಗಳು ಎಂಜಿನಿಯಂರಿಂಗ್ ಕಾಲೇಜುಗಳು ಮಾತ್ರವಲ್ಲದೇ ಸ್ವಾಯತ್ತ ವಿಶ್ವವಿದ್ಯಾನಿಲಯದ ಮಾನ್ಯತೆಯನ್ನೇ ಕೊಡಿಸಿದ್ದಾರೆ.
ಗೌರವ ಡಾಕ್ಟರೇಟ್ ಪ್ರಶಸ್ತಿ ಪುರಸ್ಕಾರ
ಶೈಕ್ಷಣಿ ಕ್ಷೇತ್ರದಲ್ಲಿನ ಕೋರೆ ಅವರ ಸೇವೆ ಪರಿಗಣಿಸಿ ಅಮೆರಿಕದ ಥಾಮಸ್ ಜಾಫರ್‌ಸನ್ ಯೂನಿವರ್ಸಿಟಿ ಗೌರವ ಡಾಕ್ಟರೇಟ್ ನೀಡಿದೆ. ಪ್ರಭಾಕರ ಕೋರೆ ಈ ಗೌರವ ಪಡೆದ ಮೊದಲ ಕನ್ನಡಿಗ. ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಹಲವು ಪ್ರಶಸ್ತಿಗಳೂ ಅವರನ್ನು ಅರಸಿ ಬಂದಿವೆ. ಕರ್ನಾಟಕ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಯನ್ನು ಅವರ ಮನೆಬಾಗಿಲಿಗೇ ಬಂದು ನೀಡಿ ಗೌರವಿಸಿದೆ. 2008ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಹಾಗೂ 2013ರಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಗಳು ಅವರ ಶೈಕ್ಷಣಿಕ ಸೇವೆಯನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದವು. ನ್ಯೂಯಾರ್ಕನ ವೀರಶೈವ ಸಮಾಜ ಜೀವಮಾನ ಸಾಧನೆಗಾಗಿ ಪ್ರಶಸ್ತಿ ನೀಡಿತು. 2015ರಲ್ಲಿ ಮಲೇಶಿಯಾದ ಯು.ಎಸ್.ಎಂ. ವಿ.ವಿ. ಗೌರವ ಡಾಕ್ಟರೇಟ್ ನೀಡಿತು. 2013ರಲ್ಲಿ ಭಾರತದ ಕೈಗಾರಿಕಾ ದಿಗ್ಗಜ ಶ್ರೀ ರತನ್ ಟಾಟಾ ಅವರು ಹುಬ್ಬಳ್ಳಿಯಲ್ಲಿ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದರು. ಅವರಿಗೆ ಬಂದ ಪ್ರಶಸ್ತಿಗಳು ಫಲಕಗಳಿಗೆ ಲೆಕ್ಕವೇ ಇಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.