
ಬೆಳಗಾವಿ: ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿ 42 ವರ್ಷಗಳಿಂದ ದಾಖಲೆ ಆಡಳಿತ ನಡೆಸಿದ ಪ್ರಭಾಕರ ಕೋರೆ ಅವರು ಕಾರ್ಯಾಧ್ಯಕ್ಷ ಸ್ಥಾನ ಬಿಟ್ಟುಕೊಟ್ಟಿದ್ದಾರೆ. ಆಡಳಿತ ಮಂಡಳಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಎಲ್ಲ 15 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
‘ಫೆಬ್ರುವರಿ 7ರಂದು ಹುಬ್ಬಳ್ಳಿಯಲ್ಲಿ ಮತ್ತು ಫೆ. 8ರಂದು ಬೆಳಗಾವಿಯಲ್ಲಿ ಮತದಾನ ನಿಗದಿಯಾಗಿತ್ತು. ನಾಮಪತ್ರ ಸಲ್ಲಿಕೆಗೆ ಶುಕ್ರವಾರ (ಜ.23) ಕೊನೆಯ ದಿನವಾಗಿತ್ತು. ಒಬ್ಬೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣೆ ರದ್ದಾಯಿತು. ನೂತನ ಕಾರ್ಯಾಧ್ಯಕ್ಷರ ಆಯ್ಕೆ ಫೆ.8ರಂದು ನಡೆಯಲಿದೆ’ ಎಂದು ಸಂಸ್ಥೆಯ ಚುನಾವಣಾಧಿಕಾರಿ ಎಸ್.ಎಸ್.ಜಲಾಲಪುರೆ ತಿಳಿಸಿದ್ದಾರೆ.
‘ಪ್ರಭಾಕರ ಕೋರೆ ಅವರ ಸ್ಥಾನಕ್ಕೆ ಪುತ್ರಿ ಪ್ರೀತಿ, ಶಂಕರ ಮುನವಳ್ಳಿ ಅವರ ಸ್ಥಾನಕ್ಕೆ ಪುತ್ರ ಮಂಜುನಾಥ ಮತ್ತು ಶ್ರೀಶೈಲ ಮೆಟಗುಡ್ ಅವರ ಸ್ಥಾನಕ್ಕೆ ಪುತ್ರ ವಿಜಯ ಹೊಸದಾಗಿ ಆಯ್ಕೆಯಾಗಿದ್ದಾರೆ. ಉಳಿದ 12 ಮಂದಿ ಮರು ಆಯ್ಕೆಯಾದರು.
ಹಿಂದೆ ಸರಿದ ಕೋರೆ: 1984ರ ಮೇ 16ರಂದು ಪ್ರಭಾಕರ ಕೋರೆ ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆಯ (ಕೆಎಲ್‌ಇ) ನೊಗ ಹೊತ್ತರು. ಆಗ ಅವರಿಗೆ 38 ವರ್ಷ ವಯಸ್ಸು. ಮೊದಲ ಅವಧಿಯಲ್ಲೇ ಕಾರ್ಯಾಧ್ಯಕ್ಷರಾದರು.
1984ರಿಂದ 2026ರ ಅವಧಿಯನ್ನು ಕೆಎಲ್‍ಇ ಸಂಸ್ಥೆಯ ಸದಸ್ಯರು ‘ಸುವರ್ಣ ಯುಗ’ ಎಂದೇ ಪರಿಗಣಿಸುತ್ತಾರೆ. 1984ರಲ್ಲಿ 38 ಅಂಗಸಂಸ್ಥೆಗಳಿದ್ದವು. ಈಗ ಅವುಗಳ ಸಂಖ್ಯೆ 310. ಆಗ ₹9 ಕೋಟಿ ವಾರ್ಷಿಕ ಬಜೆಟ್ ಇತ್ತು. ಈಗ ₹3,000 ಕೋಟಿ ದಾಟಿದೆ. ಈ ಪ್ರಗತಿಯಲ್ಲಿ ಕೋರೆ ಅವರ ಪಾತ್ರ ಪ್ರಮುಖವಾದುದು ಎಂದು ಸದಸ್ಯರ ಪ್ರತಿಪಾದಿಸುತ್ತಾರೆ.
ಸಂಸ್ಥೆಯಲ್ಲಿ 1.25 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು, 16 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಇದ್ದಾರೆ. ಸ್ವಾಯತ್ತ ವಿಶ್ವವಿದ್ಯಾಲಯದ ಮಾನ್ಯತೆ ಹೊಂದಿದೆ. ಸದ್ಯ ವಿಶ್ವವಿದ್ಯಾಲಯದ ಕುಲಪತಿ ಆಗಿ ಮಾತ್ರ ಕೋರೆ ಅವರು ಮುಂದುವರಿಯುವರು.
ಶೈಕ್ಷಣಿಕ ಸೇವೆ ಪರಿಗಣಿಸಿ ಅಮೆರಿಕದ ಥಾಮಸ್ ಜಾಫರ್‌ಸನ್ ಯೂನಿವರ್ಸಿಟಿ ಗೌರವ ಡಾಕ್ಟರೇಟ್ ನೀಡಿದೆ. ಪ್ರಭಾಕರ ಕೋರೆ ಈ ಗೌರವ ಪಡೆದ ಮೊದಲ ಕನ್ನಡಿಗರು.
ಮಹಾಂತೇಶ ಕೌಜಲಗಿ (ಅಧ್ಯಕ್ಷ) ಬಸವರಾಜ ಶಿವಲಿಂಗಪ್ಪ ತಟವಟಿ (ಉಪಾಧ್ಯಕ್ಷ) ಅಮಿತ ಪ್ರಭಾಕರ ಕೋರೆ ಪ್ರೀತಿ ಕರಣ್ ದೊಡವಾಡ– ಕೋರೆ ಪ್ರವೀಣ ಅಶೋಕ ಬಾಗೇವಾಡಿ ಮಹಾಂತೇಶ ಮಲ್ಲಿಕಾರ್ಜುನ ಕವಟಗಿಮಠ ಮಲ್ಲಿಕಾರ್ಜುನ ಚನಬಸಪ್ಪ ಕೊಳ್ಳಿ ವಿಜಯ ಶ್ರೀಶೈಲಪ್ಪ ಮೆಟಗುಡ್ ಜಯಾನಂದ ಮಹಾದೇವಪ್ಪ ಮುನವಳ್ಳಿ ಮಂಜುನಾಥ ಶಂಕರಪ್ಪ ಮುನವಳ್ಳಿ ಬಸವರಾಜ ರುದ್ರಗೌಡ ಪಾಟೀಲ ವಿಶ್ವನಾಥ ಈರನಗೌಡ ಪಾಟೀಲ ಯಲ್ಲನಗೌಡ ಶಿವಮೊಗ್ಗೆಪ್ಪ ಪಾಟೀಲ ಅನಿಲ ವಿಜಯಬಸಪ್ಪ ಪಟ್ಟೇದ (ಆಡಳಿತ ಮಂಡಳಿ ಸದಸ್ಯರು).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.