ADVERTISEMENT

ಕೃಷಿ ಕಾರ್ಮಿಕರ ಮಕ್ಕಳಿಗೂ ರೈತ ವಿದ್ಯಾನಿಧಿ: ಶಿವನಗೌಡ ಪಾಟೀಲ

‘ಪ್ರಜಾವಾಣಿ’ ಫೋನ್‌ ಇನ್‌ ಕಾರ್ಯಕ್ರಮಕ್ಕೆ ಭರಪೂರ ಕರೆಗಳು

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2022, 15:55 IST
Last Updated 22 ಸೆಪ್ಟೆಂಬರ್ 2022, 15:55 IST
‘ಪ್ರಜಾವಾಣಿ’ ಬೆಳಗಾವಿ ಕಚೇರಿಯಿಂದ ಗುರುವಾರ ಆಯೋಜಿಸಿದ್ದ ‘ಫೋನ್‌ ಇನ್‌’ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಉಪನಿರ್ದೇಶಕ ಎಲ್‌.ಐ.ರೂಢಗಿ, ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಚಿಕ್ಕೋಡಿಯ ಉಪನಿರ್ದೇಶಕ ಎಸ್‌.ಬಿ.ಕೊಂಗವಾಡ, ಸಹಾಯಕ ನಿರ್ದೇಶಕ ಸಿ.ಐ.ಹೂಗಾರ ಪಾಲ್ಗೊಂಡರು  –ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
‘ಪ್ರಜಾವಾಣಿ’ ಬೆಳಗಾವಿ ಕಚೇರಿಯಿಂದ ಗುರುವಾರ ಆಯೋಜಿಸಿದ್ದ ‘ಫೋನ್‌ ಇನ್‌’ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಉಪನಿರ್ದೇಶಕ ಎಲ್‌.ಐ.ರೂಢಗಿ, ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಚಿಕ್ಕೋಡಿಯ ಉಪನಿರ್ದೇಶಕ ಎಸ್‌.ಬಿ.ಕೊಂಗವಾಡ, ಸಹಾಯಕ ನಿರ್ದೇಶಕ ಸಿ.ಐ.ಹೂಗಾರ ಪಾಲ್ಗೊಂಡರು  –ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ   

ಬೆಳಗಾವಿ: ಕೃಷಿ ಕಾರ್ಮಿಕರ ಮಕ್ಕಳಿಗೆ ಇದು ಸಂತಸದ ಸುದ್ದಿ. ಭೂರಹಿತ ಕೃಷಿ ಕಾರ್ಮಿಕರ ಮಕ್ಕಳಿಗೂ ‘ಮುಖ್ಯಮಂತ್ರಿ ರೈತ ವಿದ್ಯಾವಿಧಿ’ ಯೋಜನೆ ವಿಸ್ತರಿಸಲಾಗಿದೆ. ‍ಹಿಂದೆ ತಂದೆ– ತಾಯಿ ಅಥವಾ ಅಜ್ಜ– ಅಜ್ಜಿ ಹೆಸರಿನಲ್ಲಿ ಹೊಲ ಇದ್ದವರು ಮಾತ್ರ ಅರ್ಹರಾಗಿದ್ದರು. ಪ್ರಸಕ್ತ (2022–23) ವರ್ಷದಿಂದ ಕೃಷಿ ಕಾರ್ಮಿಕರ ಮಕ್ಕಳೂ ಈ ವಿದ್ಯಾರ್ಥಿ ವೇತನ ಪಡೆಯಲಿದ್ದಾರೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ತಿಳಿಸಿದರು.

ರಾಜು ಕಡಕೋಳ ಎಂಬ ವಿದ್ಯಾರ್ಥಿಯ ಪ್ರಶ್ನೆಗೆ ಉತ್ತರಿಸಿದ ಅವರು, ಹೆಣ್ಣುಮಕ್ಕಳಿಗೆ 8ನೇ ತರಗತಿಯಿಂದಲೇ ‍ಪ್ರತಿ ವರ್ಷ ₹ 2,000 ನಿಧಿ ನೀಡಲಾಗುತ್ತದೆ. ಗಂಡುಮಕ್ಕಳಿಗೆ ಈ ಹಿಂದಿನಂತೆ ಪಿಯು ಮುಗಿದ ಬಳಿಕ ಸಿಗಲಿದೆ. ಶೀಘ್ರದಲ್ಲೇ ಇದರ ಅರ್ಜಿ ಕೂಡ ಕರೆಯಲಾಗುವುದು ಎಂದರು.

ಆಯ್ದ ಪ್ರಶ್ನೋತ್ತರಗಳು ಇಲ್ಲಿವೆ.

ADVERTISEMENT

*ನಮ್ಮ ತಂದೆ ಸರ್ಕಾರಿ ನೌಕರ, ನನಗೆ ರೈತ ವಿದ್ಯಾನಿಧಿ ಸಿಗುವುದೇ?

–ಖಂಡಿತ ಸಿಗುತ್ತದೆ. ಭೂಮಿ ಇದ್ದ ರೈತರು ಹಾಗೂ ಭೂಮಿ ಇಲ್ಲದ ಕೃಷಿ ಕಾರ್ಮಿಕರ ಮಕ್ಕಳು ಹೀಗೆ ಎರಡು ವಿಧಗಳಲ್ಲಿ ಈ ಯೋಜನೆ ಸಿಗಲಿದೆ. ಭೂಮಿ ಇದ್ದವರು ಯಾವುದೇ ನೌಕರಿ, ಉದ್ಯಮ ಇದ್ದರೂ ಶಿಷ್ಯವೇತನ ಪಡೆಯಬಹುದು. ಎಷ್ಟು ಮಕ್ಕಳಿದ್ದರೂ ಪಡೆಯಬಹುದು.

*ಎಂ.ಎಂ.ಪಾಟೀಲ, ಉಗರಗೋಳ; ಬೆಳೆ ಹಾನಿ ಪರಿಹಾರ ಯಾವಾಗ ನೀಡುತ್ತೀರಿ?

–ವಿವಿಧ ಕಾರಣಗಳಿಂದಾದ ಬೆಳೆ ಹಾನಿ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ. ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿದ್ದರೆ ಶೀಘ್ರ ಪರಿಹಾರ ಕೊಡಲಾಗುವುದು.

*ಅಮರ ಕುಲಕರ್ಣಿ, ಸವದತ್ತಿ; ರಸಗೊಬ್ಬರ ಸಿಗುತ್ತಿಲ್ಲ, ಕ್ರಮ ಏನು ಕೈಗೊಳ್ಳುವಿರಿ?

–ಸವದತ್ತಿಯಲ್ಲಿರುವ ಟಿಎಪಿಸಿಎಂ
ಎಸ್‌ಗೆ ಭೇಟಿ ನೀಡಿ. ಅಲ್ಲಿ ಅಗತ್ಯಕ್ಕೆ ತಕ್ಕಷ್ಟು ರಸಗೊಬ್ಬರ ಪೂರೈಸಲು ಕ್ರಮ ವಹಿಸುವೆ.

*ವೈ.ವೈ.ಕಾಳಪ್ಪನವರ, ಉಗರಗೋಳ; ಹತ್ತಿ ಬೆಳೆಗೆ ರೋಗ ತಗುಲಿದೆ. ಏನು ಮಾಡಲಿ?

–ಹತ್ತಿರದ ಕೃಷಿ ಇಲಾಖೆ ಕಚೇರಿಗೆ ತೆರಳಿ. ವಿಷಯ ತಜ್ಞರನ್ನು ಭೇಟಿಯಾಗಿ. ಅವರು ಪರಿಶೀಲಿಸಿ ನಿಖರ ಸಲಹೆ ನೀಡುತ್ತಾರೆ.

*ಸುರೇಶ ಸಂಪಗಾವಿ, ಚೇತನ ತೇರದಾಳ; ಸವದತ್ತಿ ಹಾಗೂ ಇತರ ಕಡೆಗಳಲ್ಲಿ ರಸಗೊಬ್ಬರಕ್ಕೆ ಹೆಚ್ಚು ದರ ತೆಗೆದುಕೊಳ್ಳುವುದನ್ನು ಹೇಗೆ ನಿಯಂತ್ರಿಸುತ್ತೀರಿ?

–ರಸಗೊಬ್ಬರ ಖರೀದಿಗೆ ಸರ್ಕಾರ ರಿಯಾಯಿತಿ ಕಲ್ಪಿಸಿದೆ. ರೈತರಿಗೆ ಇದರ ಉಪಯೋಗ ನೀಡಲಾಗುತ್ತಿದೆ. ಎಲ್ಲಿಯಾದರೂ ನಿಗದಿತ ದರಕ್ಕಿಂತ ಹೆಚ್ಚು ಹಣ ಪಡೆದರೆ ಅಥವಾ ರೈತರ ಮೇಲೆ ಒತ್ತಡ ಹಾಕಿದರೆ ಇಲಾಖೆಗೆ ಮಾಹಿತಿ ನೀಡಿ. ತಕ್ಷಣ ಕ್ರಮ ವಹಿಸಲಾಗುವುದು.

*ಹೊಲದಲ್ಲಿ ಕೆರೆ ನೀರು ನಿಂತು ಕಬ್ಬು ಹಾಳಾಗಿದೆ, ಪರಿಹಾರವೇನು?

–ಕಬ್ಬು ವಾಣಿಜ್ಯ ಬೆಳೆಯಾದ್ದರಿಂದ ಪರಿಹಾರ ಪದ್ಧತಿಯೂ ಬದಲಾಗುತ್ತದೆ. ನಿಮ್ಮ ವ್ಯಾಪ್ತಿಯ ಕೃಷಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿ, ಸ್ಥಳ ಪರಿಶೀಲಿಸುತ್ತಾರೆ. ನಿಗದಿತ ಪರಿಹಾರ ಸಿಗುತ್ತದೆ.

*ಶಂಕರ ದೊಡವಾಡ, ಅಸುಂಡಿ; ಕಳೆದ ವರ್ಷ ವಿಮೆ ಪಾವತಿಸಿದರೂ ಇನ್ನೂ ಕ್ಲೇಮ್‌ ಆಗಿಲ್ಲವೇಕೆ?

–ವಿಮೆ ಕಟ್ಟಿದ ಮಾತ್ರಕ್ಕೆ ಕ್ಲೇಮ್‌ ಮೊತ್ತ ಬರಲೇಬೇಕು ಎಂದೇನಿಲ್ಲ. ಹಾನಿಯಾಗಿದ್ದರೆ ಮಾತ್ರ ಅದು ಸಿಗುತ್ತದೆ. ಈ ಪ್ರಕ್ರಿಯೆ ಪ್ರಗತಿಯಲ್ಲಿದೆ.

*ಕಲಗೌಡ ಪಾಟೀಲ; ರೈತಶಕ್ತಿಗೆ ಯಾವಾಗ ಅರ್ಜಿ ಹಾಕಬೇಕು?

–ಅರ್ಜಿ ಹಾಕುವ ಅವಧಿ ಇನ್ನೂ ಮುಗಿದಿಲ್ಲ. ‘ಫ್ರೂಟ್ಸ್‌’ ಆ್ಯಪ್‌ನಲ್ಲಿ ನೋಂದಣಿ ಮಾಡಿಕೊಂಡವರಿಗೆ ಇದರ ಲಾಭ ಸಿಗಲಿದೆ. ಎಕರೆಗೆ ₹ 250ರಂತೆ ಐದು ಎಕರೆವರೆಗೆ ರೈತರಿಗೆ ಡೀಸೆಲ್‌ ಖರೀದಿಗೆ ಹಣ ನೀಡಲಾಗುತ್ತದೆ.

*ಪಾರೀಶ್, ಭರತೇಶ, ಯಲ್ಲಪ್ಪ; ಬೆಳೆಹಾನಿ ಪರಿಹಾರ ಪಡೆದವರಿಗೆ ವಿಮೆ ಕೊಡುವುದಿಲ್ಲವೇ?

–ಖಂಡಿತ ಇದು ಸುಳ್ಳು. ಬೆಳೆಹಾನಿ ಪರಿಹಾರವನ್ನು ಸರ್ಕಾರ ನೀಡುತ್ತದೆ. ವಿಮೆ ಪರಿಹಾರ ನೀಡಬೇಕಾದುದು ವಿಮಾ ಕಂಪನಿ. ಒಂದಕ್ಕೊಂದು ಸಂಬಂಧವಿಲ್ಲ. ಪರಿಹಾರ ಪಡೆದಿದ್ದರೂ ರೈತರು ವಿಮಾ ಪರಿಹಾರ ಪಡೆಯಲು ಅರ್ಹರು.

*

ಗುಂಪು ಬೆಳೆವಿಮೆ: ಗೊಂದಲ ಬೇಡ
‘ವೈಯಕ್ತಿಕ ಬೆಳೆವಿಮೆ ಹಾಗೂ ಗುಂಪು ಬೆಳೆವಿಮೆ ಬಗ್ಗೆ ಹಲವು ರೈತರು ಗೊಂದಲದಲ್ಲಿದ್ದಾರೆ. ವೈಯಕ್ತಿಕ ವಿಮೆ ಮಾಡಿಸಿದ್ದರೆ
ದಾಖಲೆ ನೀಡಿ ನೀವು ಖಂಡಿತ ವಿಮೆ ಹಣ ಪಡೆಯಬಹುದು. ಆದರೆ, ಗುಂಪು ವಿಮೆಗೆ ಇದು ಅನ್ವಯವಲ್ಲ’ ಎಂದು ಶಿವನಗೌಡ
ತಿಳಿಸಿದರು.

ಗುಂಪು ವಿಮೆ ಹೇಗೆ?: ಒಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯ 75 ಹೆಕ್ಟೇರ್‌ ಪ್ರದೇಶದಲ್ಲಿ ಪ್ರಧಾನವಾಗಿ ಬೆಳೆಯುವ ಬೆಳೆಯನ್ನು ಇದಕ್ಕೆ ಪರಿಗಣಿಸಲಾಗುತ್ತದೆ. ಆ ಬೆಳೆಯ ಕುರಿತು ಹಿಂದಿನ ಐದು ವರ್ಷಗಳ ಇಳುವರಿಯನ್ನು ಲೆಕ್ಕ ಹಾಕಲಾಗುತ್ತದೆ. ಈ ವರ್ಷದ ಇಳುವರಿಯು ಕಳೆದ ಇಳುವರಿಗಿಂತ ಎಷ್ಟು ಕಡಿಮೆ ಬರುತ್ತದೆಯೋ ಅಷ್ಟಕ್ಕೆ ಪರಿಹಾರ ಸಿಗುತ್ತದೆ. ಇದಕ್ಕೆ ಸ್ಥಾನಿಕವಾಗಿ ನಾಲ್ಕು ಪ್ರಯೋಗಗಳನ್ನು ವಿವಿಧ ಇಲಾಖೆಗಳು ಸೇರಿ ಮಾಡುತ್ತವೆ ಎಂದರು.

ಸುತ್ತಲಿನ 75 ಹೆಕ್ಟೇರ್‌ನಲ್ಲಿ ಇಳುವರಿ ಉತ್ತಮವಾಗಿದ್ದು, ಮಧ್ಯದಲ್ಲಿ ಕೆಲವರದು ಕುಸಿದಿದ್ದರೆ ಅವರಿಗೂ ಪರಿಹಾರ ಬರುವುದಿಲ್ಲ. ಹಾಗಾಗಿ, ಅಂಥವರು ಸ್ಥಳೀಯ ವಿಪತ್ತು ಮೂಲಕ 72 ಗಂಟೆಗಳ ಒಳಗೆ ಆ್ಯಪ್‌ನಲ್ಲಿ ಅಪ್ಲೋಡ್‌ ಮಾಡಬೇಕು. ಸಿಬ್ಬಂದಿ ಸ್ಥಳ ಪರಿಶೀಲಿಸಿ ಪರಿಹಾರಕ್ಕೆ ನೋಂದಣಿ ಮಾಡುತ್ತಾರೆ.

ಜತೆಗೆ, ಈ ಯೋಜನೆಯು ಹೋಬಳಿ ಮಟ್ಟದಲ್ಲಿ 125 ಹೆಕ್ಟೇರ್‌ ವ್ಯಾಪ್ತಿ ಆಧರಿಸಿ ನಡೆಯುತ್ತದೆ ಎಂದರು.

ಇ– ಕೆವೈಸಿ ಕಡ್ಡಾಯ
ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿ ನೋಂದಣಿ ಮಾಡಿಕೊಂಡ ರೈತರಿಗೆ ವಾರ್ಷಿಕವಾಗಿ ಮೂರು ಕಂತುಗಳಲ್ಲಿ ಕೇಂದ್ರ ಸರ್ಕಾರದಿಂದ ₹6,000, ರಾಜ್ಯ ಸರ್ಕಾರದಿಂದ ₹4,000 ಸೇರಿ ₹10,000 ಸಹಾಯಧನ ನೀಡಲಾಗುತ್ತಿದೆ. ಈ ಸೌಲಭ್ಯ ಪಡೆಯಲು ಸರ್ಕಾರ ಇ–ಕೆವೈಸಿಕಡ್ಡಾಯ.

ಸೆ.22ರವರೆಗೆ ಶೇ 77ರಷ್ಟು ರೈತರು ಇ–ಕೆವೈಸಿ ಮಾಡಿಸಿಕೊಂಡಿದ್ದು, ಬೆಳಗಾವಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದೆ. ಇ–ಕೆವೈಸಿ ಮಾಡಿಸದಿದ್ದರೆ ಫಲಾನುಭವಿಯ ಬ್ಯಾಂಕ್‌ ಖಾತೆಗೆ ಸಹಾಯಧನ ಜಮೆ ವಿಳಂಬವಾಗಲಿದೆ.

ನಿರ್ವಹಣೆ: ಸಂತೋಷ ಈ. ಚಿನಗುಡಿ, ಇಮಾಮ್‌ಹುಸೇನ್‌ ಗೂಡುನವರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.