ಬೆಳಗಾವಿ: ಇಂದಿನ ಪೈಪೋಟಿ ದಿನಗಳಲ್ಲಿ ಒಂದು ಸರ್ಕಾರಿ ನೌಕರಿ ಸಿಗುವುದೇ ಕಷ್ಟ. ಜಿಲ್ಲೆಯ ಅಥಣಿ ತಾಲ್ಲೂಕು ಐಗಳಿ ಗ್ರಾಮದ 26 ವರ್ಷದ ಪ್ರಶಾಂತ ಅಣ್ಣಾಸಾಬ ಹಿಪ್ಪರಗಿ 10 ನೌಕರಿ ಗಿಟ್ಟಿಸಿದ್ದಾರೆ.
ಸಹಕಾರ ಸಂಘಗಳ ಚಿಕ್ಕೋಡಿ ಉಪ ವಿಭಾಗದ ಸಹಾಯಕ ಉಪನಿಬಂಧಕರ ಕಚೇರಿಯಲ್ಲಿ ಒಂದು ವಾರದಿಂದ ಸಹಕಾರ ಸಂಘಗಳ ನಿರೀಕ್ಷಕರಾಗಿದ್ದಾರೆ.
ಇದೇ ವರ್ಷ ಎಂಎಸ್‌ಐಎಲ್‌ನಲ್ಲಿ ಪ್ರಥಮದರ್ಜೆ ಸಹಾಯಕ, ಸಹಕಾರ ಸಂಘಗಳ ನಿರೀಕ್ಷಕ ಮತ್ತು ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ವಾಣಿಜ್ಯ ತೆರಿಗೆ ನಿರೀಕ್ಷಕರಾಗಿಯೂ ಆಯ್ಕೆಯಾಗಿದ್ದಾರೆ.
‘ನನಗೆ ಯಾವುದಾದರೂ ಇಲಾಖೆಯಲ್ಲಿ ಉತ್ತಮ ಹುದ್ದೆ ಪಡೆಯುವ ಆಸೆ ಇತ್ತು. ನನ್ನ ವಿದ್ಯಾರ್ಹತೆಗೆ ತಕ್ಕಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾದೆ. ಅವುಗಳಲ್ಲಿ 10 ಹುದ್ದೆಗಳಿಗೆ ಆಯ್ಕೆಯಾದೆ’ ಎಂದು ಪ್ರಶಾಂತ ಹಿಪ್ಪರಗಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಸಾರಿಗೆ ಸಂಸ್ಥೆಯ ಅಥಣಿ ಘಟಕದಲ್ಲಿ ನಿರ್ವಾಹಕರಾಗಿರುವ ತಂದೆ ನನ್ನನ್ನು, ನನ್ನ ಸಹೋದರ ಮತ್ತು ಸಹೋದರಿ ಕಷ್ಟಪಟ್ಟು ಓದಿಸಿದರು. ಯೋಜನಾಬದ್ಧವಾಗಿ ಅಭ್ಯಾಸ ಮಾಡಿದೆ. ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಮತ್ತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದೆ. ಯಶಸ್ಸು ಸಿಕ್ಕಿತು’ ಎಂದು ಅವರು ತಿಳಿಸಿದರು.
ಐಗಳಿಯಲ್ಲಿ ಶಾಲಾ ಶಿಕ್ಷಣ ಪೂರೈಸಿದ ಪ್ರಶಾಂತ ಅವರು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಯಲ್ಲಟ್ಟಿಯಲ್ಲಿ ಪಿಯು ಶಿಕ್ಷಣ ಪೂರ್ಣಗೊಳಿಸಿದರು. ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಬಿ.ಎಸ್ಸಿ(ಕೃಷಿ) ಓದಿದರು.
ವಾಣಿಜ್ಯ ತೆರಿಗೆ ನಿರೀಕ್ಷಕ ಹುದ್ದೆಗೆ ಆಯ್ಕೆಯಾಗಿದ್ದು ಶೀಘ್ರವೇ ವರದಿ ಮಾಡಿಕೊಳ್ಳುವೆ. ಕೆಎಎಸ್ ಅಧಿಕಾರಿ ಆಗುವುದು ನನ್ನ ಕನಸು. ಅಲ್ಲಿ ಕೆಲಸ ಮಾಡುತ್ತಲೇ ಅದಕ್ಕಾಗಿ ಪ್ರಯತ್ನಿಸುವೆಪ್ರಶಾಂತ ಹಿಪ್ಪರಗಿ ಸಾಧಕ
ಯಾವ್ಯಾವ ಹುದ್ದೆಗಳಿಗೆ ಆಯ್ಕೆ? 2019ರಲ್ಲಿ ಕೆಎಸ್‌ಆರ್‌ಪಿಯಲ್ಲಿ ಪೊಲೀಸ್ ಕಾನ್‌ಸ್ಟೆಬಲ್ 2022ರಲ್ಲಿ ಅಗ್ನಿಶಾಮಕ ಇಲಾಖೆಯಲ್ಲಿ ಫೈರ್‌ಮನ್ 2024ರಲ್ಲಿ ಸಿಎಆರ್ ಪೊಲೀಸ್ ಕಾನ್‌ಸ್ಟೆಬಲ್ ಸಿವಿಲ್ ಪೊಲೀಸ್ ಕಾನ್‌ಸ್ಟೆಬಲ್ ಆಹಾರ ನಾಗರಿಕ ಸರಬರಾಜು ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕ ಆಹಾರ ನಾಗರಿಕ ಸರಬರಾಜು ಇಲಾಖೆಯಲ್ಲಿ ಪ್ರಥಮದರ್ಜೆ ಸಹಾಯಕ ಕಾರ್ಮಿಕ ಇಲಾಖೆಯಲ್ಲಿ ಪ್ರಥಮದರ್ಜೆ ಸಹಾಯಕರಾಗಿ ಆಯ್ಕೆಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.