ADVERTISEMENT

‘ಸಪ್ತಪದಿ’: ಸಾವಿರ ಜೋಡಿ ವಿವಾಹ

ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2020, 12:04 IST
Last Updated 25 ಫೆಬ್ರುವರಿ 2020, 12:04 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಳಗಾವಿ: ‘ಸಪ್ತಪದಿ ಯೋಜನೆಯಡಿ ಜಿಲ್ಲೆಯಲ್ಲಿ ಕನಿಷ್ಠ ಸಾವಿರ ಜೋಡಿ ಸಾಮೂಹಿಕ ವಿವಾಹ ಆಯೋಜಿಸುವ ಉದ್ದೇಶವಿದೆ’ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಎ’ ಶ್ರೇಣಿಯ ದೇವಸ್ಥಾನಗಳ ಜೊತೆಗೆ ಸಂಪನ್ಮೂಲ ಕ್ರೋಢೀಕರಿಸಿ ‘ಬಿ’ ಮತ್ತು ‘ಸಿ’ ಶ್ರೇಣಿಯ ದೇವಸ್ಥಾನಗಳಲ್ಲೂ ಸಪ್ತಪದಿ ಸಾಮೂಹಿಕ ವಿವಾಹ ನಡೆಸಲು ನಿರ್ಧರಿಸಲಾಗಿದೆ. ಬಡವರಿಗೆ ಅನುಕೂಲ ಕಲ್ಪಿಸುವ ಈ ಕಾರ್ಯಕ್ರಮ ಯಶಸ್ಸಿಗೆ ಅಧಿಕಾರಿಗಳು ತಯಾರಿ ನಡೆಸಬೇಕು’ ಎಂದು ಸೂಚಿಸಿದರು.

ADVERTISEMENT

‘ಪ್ರತಿ ಜೋಡಿಗೆ 8 ಗ್ರಾಂ. ಚಿನ್ನ, ವಧುವಿನ ಖಾತೆಗೆ ₹ 10ಸಾವಿರ ಮತ್ತು ವರನಿಗೆ ₹ 5ಸಾವಿರ ನೀಡಲಾಗುವುದು. ಕುಟುಂಬದವರಿಗೆ ಊಟದ ವ್ಯವಸ್ಥೆ ಇರಲಿದೆ’ ಎಂದರು.

ವಿಚಾರಸಂಕಿರಣ ಮಾರ್ಚ್‌ 7ರಂದು:‘ಸಪ್ತಪದಿ ಯೋಜನೆ ಕುರಿತು ತಿಳಿಸಲು ಮಾರ್ಚ್‌ 7ರಂದು ಸವದತ್ತಿಯಲ್ಲಿ ವಿಚಾರಸಂಕಿರಣ ನಡೆಸಲಾಗುವುದು. ಏ. 26ರಂದು ನಡೆಯುವ ಸಪ್ತಪದಿ ಸಾಮೂಹಿಕ ವಿವಾಹಕ್ಕೆ ಹೆಸರು ನೋಂದಾಯಿಸಲು ಮಾರ್ಚ್ 27 ಹಾಗೂ ಮೇ 24ರಂದು ನಡೆಯುವ ವಿವಾಹಕ್ಕ ತಿಂಗಳು ಮುಂಚೆ ನೋಂದಾಯಿಸಬಹುದು’ ಎಂದು ಮಾಹಿತಿ ನೀಡಿದರು.

‘‌‌ಎ’ ಶ್ರೇಣಿಯ 100 ದೇವಸ್ಥಾನಗಳಲ್ಲಿ ಸಾಮೂಹಿಕ ವಿವಾಹ ಆಯೋಜಿಸಲು ನಿರ್ಧರಿಸಲಾಗಿತ್ತು. ‘ಎ’ ದರ್ಜೆ ದೇವಸ್ಥಾನಗಳಿಲ್ಲದ ಜಿಲ್ಲೆಗಳಲ್ಲಿ ‘ಬಿ‌’ ಶ್ರೇಣಿ ದೇವಸ್ಥಾನಗಳಲ್ಲಿ ನಡೆಸಲು ಸುತ್ತೋಲೆ ಹೊರಡಿಸಲಾಗಿದೆ. ಯಾವುದೇ ಪಕ್ಷದ ಶಾಸಕರಿರಲಿ ಅವರ ಮನವಿ ಮತ್ತು ದೇವಸ್ಥಾನದ ಹಣಕಾಸಿನ ಲಭ್ಯತೆ ಆಧರಿಸಿ, ಅಲ್ಲೂ ನಡೆಸಲು ನಿರ್ಧರಿಸಲಾಗುವುದು’ ಎಂದರು.

‘ಆರ್ಥಿಕವಾಗಿ ಶಕ್ತವಾಗಿರುವ ‘ಬಿ’ ಶ್ರೇಣಿಯ 2 ದೇವಸ್ಥಾನಗಳನ್ನು ಸೇರಿಸಿ ಸಾಮೂಹಿಕ ವಿವಾಹ ಆಯೋಜಿಸಬಹುದು’ ಎಂದು ಸವದತ್ತಿ ಯಲ್ಲಮ್ಮ ದೇವಸ್ಥಾನದ ಇಒ ರವಿ ಕೋಟಾರಗಸ್ತಿ ಅಭಿಪ್ರಾಯಪಟ್ಟರು.

‘ಸಂಘ-ಸಂಸ್ಥೆಗಳು ಸಾಮೂಹಿಕ ವಿವಾಹ ಆಯೋಜಿಸುತ್ತಿವೆ. ಅವುಗಳ ಸಹಯೋಗದಲ್ಲಿ ಪ್ರತಿ ವರ್ಷ ಒಂದೆಡೆ ಕಡೆ ಸಪ್ತಪದಿ‌ ಕಾರ್ಯಕ್ರಮ ನಡೆಸಬಹುದು’ ಎಂದು ಶಾಸಕ ಅನಿಲ ಬೆನಕೆ ಸಲಹೆ ನೀಡಿದರು.

ತಾಂತ್ರಿಕ ಕಾರಣ:‘ಸವದತ್ತಿ ಯಲ್ಲಮ್ಮ ದೇವಸ್ಥಾನದಲ್ಲಿ ಏ. 26 ಹಾಗೂ ರಾಯಬಾಗದ ಚಿಂಚಲಿ ಮಾಯಕ್ಕದೇವಿ ದೇವಾಲಯದಲ್ಲಿ ಮೇ 24ರಂದು‌ ಸಾಮೂಹಿಕ ವಿವಾಹ ನಡೆಸಲಾಗುವುದು. ಗೊಡಚಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ಆಯೋಜಿಸಲು ತಾಂತ್ರಿಕ ಕಾರಣಗಳು ಅಡ್ಡಿಯಾಗಿವೆ’ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ತಿಳಿಸಿದರು.

ವಿಧಾನಪರಿಷತ್‌ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ‘ಲಕ್ಷಾಂತರ ಭಕ್ತರು ಸೇರುವ ಸವದತ್ತಿ ಯಲ್ಲಮ್ಮ ದೇವಸ್ಥಾನದ ಆವರಣದಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸಬೇಕು. ಮೂಲಸೌಕರ್ಯ ಒದಗಿಸಿದರೆ ಅಲ್ಲಿನ ಆದಾಯ ದುಪ್ಪಟ್ಟಾಗಲಿದೆ’ ಎಂದರು.

‘ದೇವಸ್ಥಾನದ ಆದಾಯದಲ್ಲಿ ಕಾಮಗಾರಿಗೆ ಅನುಮೋದನೆ ಕೊಡಲಾಗುವುದು’ ಎಂದು ಸಚಿವರು ತಿಳಿಸಿದರು.

ಶಾಸಕ ದುರ್ಯೋಧನ ಐಹೊಳೆ, ಉಪ ವಿಭಾಗಾಧಿಕಾರಿಗಳಾದ ಶಿವಾನಂದ‌ ಭಜಂತ್ರಿ, ರವೀಂದ್ರ ಕರಲಿಂಗಣ್ಣವರ, ಸವದತ್ತಿ ಯಲ್ಲಮ್ಮ ದೇವಸ್ಥಾನದ ಇಒ ರವಿ ಕೋಟಾರಗಸ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.