ADVERTISEMENT

ಮುಂಗಾರಿನಲ್ಲಿ ಸಸಿ ನೆಡಲು ಸಿದ್ಧತೆ

72ಸಾವಿರಕ್ಕೂ ಹೆಚ್ಚು ಸಸಿಗಳನ್ನು ಬೆಳೆಸಿರುವ ಅರಣ್ಯ ಇಲಾಖೆ

ಸುಧಾಕರ ಎಸ್.ತಳವಾರ, ಬೆಂಗಳೂರು
Published 4 ಜೂನ್ 2019, 20:00 IST
Last Updated 4 ಜೂನ್ 2019, 20:00 IST
ಚಿಕ್ಕೋಡಿ ತಾಲ್ಲೂಕಿನ ಜೈನಾಪುರದಲ್ಲಿರುವ ಅರಣ್ಯ ಇಲಾಖೆಯ ಸಸ್ಯಪಾಲನಾ ಕೇಂದ್ರದಲ್ಲಿ ವಿವಿಧ ಜಾತಿಯ ಸಸಿಗಳನ್ನು ಬೆಳಸಿರುವುದು
ಚಿಕ್ಕೋಡಿ ತಾಲ್ಲೂಕಿನ ಜೈನಾಪುರದಲ್ಲಿರುವ ಅರಣ್ಯ ಇಲಾಖೆಯ ಸಸ್ಯಪಾಲನಾ ಕೇಂದ್ರದಲ್ಲಿ ವಿವಿಧ ಜಾತಿಯ ಸಸಿಗಳನ್ನು ಬೆಳಸಿರುವುದು   

ಚಿಕ್ಕೋಡಿ: ಇಲ್ಲಿನ ಅರಣ್ಯ ಇಲಾಖೆಯು ತಾಲ್ಲೂಕಿನ ಜೈನಾಪುರ, ಚಿಂಚಣಿ ಗ್ರಾಮ ವ್ಯಾಪ್ತಿಯಲ್ಲಿರುವ ಸಸ್ಯಪಾಲನಾ ಕೇಂದ್ರದಲ್ಲಿ ವಿವಿಧ ಜಾತಿಯ 72ಸಾವಿರಕ್ಕೂ ಹೆಚ್ಚಿನ ಸಸಿಗಳನ್ನು ಬೆಳೆಸಿ ಪೋಷಿಸಿ ಪಾಲನೆ ಮಾಡುತ್ತಿದ್ದು, ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನಲ್ಲಿ ಅವುಗಳನ್ನು ನೆಡಲು ಕ್ರಿಯಾ ಯೋಜನೆ ರೂಪಿಸಿದೆ.

ರಾಷ್ಟ್ರೀಯ ಗ್ರಾಮೀಣ ಅರಣ್ಯೀಕರಣ ಕಾರ್ಯಕ್ರಮದಡಿ ವಿವಿಧ ಜಾತಿ ಸಸಿಗಳನ್ನು ನೆಡುವ ಸಂಕಲ್ಪವನ್ನು ಇಲಾಖೆ ಹೊಂದಿದೆ.

ನಿಪ್ಪಾಣಿ–ಮುಧೋಳ ರಾಜ್ಯ ಹೆದ್ದಾರಿಯ ಎರಡೂ ಬದಿಗಳಲ್ಲಿ ನಿಪ್ಪಾಣಿಯಿಂದ ಕಬ್ಬೂರವರೆಗೆ ಕಳೆದ ವರ್ಷ 9200 ಸಸಿಗಳನ್ನು ನಡೆಲಾಗಿದ್ದು, ಆ ಪೈಕಿ ಸುಮಾರು 2ಸಾವಿರ ಸಸಿಗಳು ಸತ್ತಿವೆ. ಪ್ರಸಕ್ತ ಮಳೆಗಾಲದಲ್ಲಿ ಇಲಾಖೆ ಆ ಸ್ಥಳಗಳಲ್ಲಿ 2ಸಾವಿರ ಸಸಿಗಳನ್ನು ನಾಟಿ ಮಾಡಲು ಉದ್ದೇಶಿಸಲಾಗಿದೆ. ಪಟ್ಟಣದ ಹೊರವಲಯದಲ್ಲಿ ಎನ್‌–ಎಂ. ರಸ್ತೆಗೆ ಹೊಂದಿಕೊಂಡು ಅಭಿವೃದ್ಧಿಪಡಿಸಲಾಗಿರುವ ಟ್ರೀ ಪಾರ್ಕ್‌ನಲ್ಲೂ ಕಳೆದ ವರ್ಷ 2ಸಾವಿರ ಸಸಿಗಳನ್ನು ನೆಟ್ಟಿದ್ದು, ಅಲ್ಲಿಯೂ ವಿಫಲವಾಗಿರುವ ಸಸಿಗಳ ಸ್ಥಳದಲ್ಲಿ ಮರು ನಾಟಿ ಮಾಡಲು ಉದ್ದೇಶಿಸಿದೆ.

ADVERTISEMENT

‘ಪ್ರಸಕ್ತ ವರ್ಷ ತಾಲ್ಲೂಕಿನ ಪಟ್ಟಣಕುಡಿ ಮತ್ತು ಆಡಿ ಗ್ರಾಮಗಳ ವ್ಯಾಪ್ತಿಯ ಅರಣ್ಯ ಇಲಾಖೆ ವ್ಯಾಪ್ತಿಯ ಪ್ರದೇಶದಲ್ಲಿ ಹಾಗೂ ಚಿಕ್ಕೋಡಿ ಮತ್ತು ನಿಪ್ಪಾಣಿ ಪಟ್ಟಣದ ವ್ಯಾಪ್ತಿಯಲ್ಲಿ ಮತ್ತು ಹುಕ್ಕೇರಿ ತಾಲ್ಲೂಕಿನಲ್ಲಿ 3 ಕಿ.ಮೀ. ಉದ್ದದಲ್ಲಿ ರಸ್ತೆ ಬದಿ ಸಸಿಗಳನ್ನು ನೆಡಲು ಉದ್ದೇಶಿಸಲಾಗಿದೆ’ ಎಂದು ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಮೃತ್ಯುಂಜಯ ಬಿ.ಗಣಾಚಾರಿ ತಿಳಿಸಿದರು.

‘2012–13 ರಿಂದ ಅರಣ್ಯ ಕೃಷಿ ಪ್ರೋತ್ಸಾಹ ಯೋಜನೆಯಡಿ ಆಸಕ್ತ ರೈತರಿಗೆ ಸಸಿಗಳ ಅಳತೆಗೆ ಅನುಗುಣವಾಗಿ ₹ 1 ಮತ್ತು ₹ 3ಕ್ಕೆ ಒಂದು ಸಸಿ ವಿತರಿಸಲಾಗುತ್ತಿದೆ. 3 ವರ್ಷಗಳ ಕಾಲ ಸಮರ್ಪಕವಾಗಿ ಪೋಷಣೆ ಮಾಡಿದ ರೈತರಿಗೆ ಮೊದಲ ಮತ್ತು 2ನೇ ವರ್ಷದಲ್ಲಿ ತಲಾ ಒಂದು ಸಸಿಗೆ ₹ 30 ಮತ್ತು 3ನೇ ವರ್ಷ ₹ 40 ಸೇರಿದಂತೆ ಒಟ್ಟು ₹ 100 ಪ್ರೋತ್ಸಾಹಧನ ನೀಡಲಾಗುವುದು. ಮಳೆ ಆರಂಭವಾಗುತ್ತಿದ್ದಂತೆಯೇ ಸಾರ್ವಜನಿಕರಿಗೆ ಸಸಿಗಳ ವಿತರಣೆ ಆರಂಭವಾಗಲಿದೆ. ರೈತರು ಈ ಯೋಜನೆಯ ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.