ADVERTISEMENT

‘ಸ್ಪರ್ಧಾತ್ಮಕ ಪರೀಕ್ಷೆ: ಪಿಯುಸಿಯಿಂದಲೇ ತಯಾರಾಗಿ’-ಎಸ್ಪಿ ಲಕ್ಷ್ಮಣ ನಿಂಬರಗಿ

‘ಎಕ್ಸಾಂ ಮಾಸ್ಟರ್‌ಮೈಂಡ್’ ಆನ್‌ಲೈನ್ ಪತ್ರಿಕೆ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2021, 14:01 IST
Last Updated 27 ಸೆಪ್ಟೆಂಬರ್ 2021, 14:01 IST
ಬೆಳಗಾವಿಯ ಎಸ್‌ಜಿಬಿಐಟಿ ಸೆಮಿನಾರ್‌ ಹಾಲ್‌ನಲ್ಲಿ ‘ಪ್ರಜಾವಾಣಿ’– ‘ಡೆಕ್ಕನ್ ಹೆರಾಲ್ಡ್’ ಸಮೂಹದಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಹೊರತರಲಾದ ಡಿಜಿಟಲ್ ಕೈಪಿಡಿ ‘ಎಕ್ಸಾಂ ಮಾಸ್ಟರ್‌ಮೈಂಡ್’ ಆನ್‌ಲೈನ್ ಪತ್ರಿಕೆಯನ್ನು ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಮತ್ತು ಎಸ್ಪಿ ಲಕ್ಷ್ಮಣ ನಿಂಬರಗಿ ಸೋಮವಾರ ಬಿಡುಗಡೆ ಮಾಡಿದರು. ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕೆ.ಬಿ. ಹಿರೇಮಠ ಹಾಗೂ ಸಮಾಜಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಉಮಾ ಸಾಲಿಗೌಡರ ಇದ್ದಾರೆಪ್ರಜಾವಾಣಿ ಚಿತ್ರ
ಬೆಳಗಾವಿಯ ಎಸ್‌ಜಿಬಿಐಟಿ ಸೆಮಿನಾರ್‌ ಹಾಲ್‌ನಲ್ಲಿ ‘ಪ್ರಜಾವಾಣಿ’– ‘ಡೆಕ್ಕನ್ ಹೆರಾಲ್ಡ್’ ಸಮೂಹದಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಹೊರತರಲಾದ ಡಿಜಿಟಲ್ ಕೈಪಿಡಿ ‘ಎಕ್ಸಾಂ ಮಾಸ್ಟರ್‌ಮೈಂಡ್’ ಆನ್‌ಲೈನ್ ಪತ್ರಿಕೆಯನ್ನು ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಮತ್ತು ಎಸ್ಪಿ ಲಕ್ಷ್ಮಣ ನಿಂಬರಗಿ ಸೋಮವಾರ ಬಿಡುಗಡೆ ಮಾಡಿದರು. ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕೆ.ಬಿ. ಹಿರೇಮಠ ಹಾಗೂ ಸಮಾಜಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಉಮಾ ಸಾಲಿಗೌಡರ ಇದ್ದಾರೆಪ್ರಜಾವಾಣಿ ಚಿತ್ರ   

ಬೆಳಗಾವಿ: ‘ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪಿಯುಸಿ ಹಂತದಿಂದಲೇ ತಯಾರಾಗಬೇಕು’ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಸಲಹೆ ನೀಡಿದರು.

ಇಲ್ಲಿನ ಶಿವಬಸವನಗರದ ಎಸ್‌ಜಿಬಿಐಟಿ ಸೆಮಿನಾರ್ ಹಾಲ್‌ನಲ್ಲಿ ‘ಪ್ರಜಾವಾಣಿ’– ‘ಡೆಕ್ಕನ್ ಹೆರಾಲ್ಡ್’ ಸಮೂಹದಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಹೊರತಂದಿರುವ ಡಿಜಿಟಲ್ ಕೈಪಿಡಿ ‘ಎಕ್ಸಾಂ ಮಾಸ್ಟರ್‌ಮೈಂಡ್’ ಆನ್‌ಲೈನ್ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಾವು ಕಲಿಯುವ ಸಂದರ್ಭದಲ್ಲಿ, ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡುವ ಬೆರಳೆಣಿಕೆಯಷ್ಟು ಸಂಸ್ಥೆಗಳಷ್ಟೆ ಇದ್ದವು. ಈಗ ತಿಳಿದುಕೊಳ್ಳಲು ಬಹಳಷ್ಟು ಅವಕಾಶಗಳಿವೆ. ಆದರೆ, ನಮ್ಮ ಭಾಗದಲ್ಲಿ ಜಾಗೃತಿಯ ಕೊರತೆ ಇದೆ. ಈ ಭಾಗದವರೂ ಐಎಎಸ್, ಐಪಿಎಸ್, ಕೆಎಎಸ್ ಮತ್ತಿತರ ಅಧಿಕಾರಿಗಳಾಗಬೇಕು. ಇದಕ್ಕಾಗಿ ವಿದ್ಯಾರ್ಥಿಗಳು ಒಲವು ಬೆಳೆಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ADVERTISEMENT

ಪ್ರಮುಖ ಅಂಗ:

‘ಪ್ರಸ್ತುತ ಯಾವುದೇ ಉದ್ಯೋಗ ಪಡೆಯುವುದಕ್ಕೂ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಬೇಕಾಗುತ್ತದೆ. ಹೀಗಾಗಿ, ಈ ಪರೀಕ್ಷೆಗಳು ಜೀವನದ ಪ್ರಮುಖ ಅಂಗವಾಗಿವೆ. ಆದರೆ, ಅದಕ್ಕೆಂದೇ ನಿರ್ದಿಷ್ಟ ಕಾಲೇಜಿಲ್ಲ ಅಥವಾ ಕೋರ್ಸ್‌ಗಳಿಲ್ಲ. ನಾವಾಗಿಯೇ ಕಲಿಯಬೇಕು’ ಎಂದು ತಿಳಿಸಿದರು.

‘ಎಲ್ಲ ವಿಷಯಗಳ ಸಮ್ಮಿಲನವೇ ಸ್ಪರ್ಧಾತ್ಮಕ ಪರೀಕ್ಷೆಯ ಪಠ್ಯಕ್ರಮ ಆಗುತ್ತದೆ. ಹೀಗಾಗಿ ನಾವು ಅಗಾದವಾದ ಜ್ಞಾನ ಭಂಡಾರವನ್ನು ಹೊಂದಿರಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸಂಪನ್ಮೂಲವನ್ನು ಒದಗಿಸುತ್ತಿರುವ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ದಿನಪತ್ರಿಕೆಗಳನ್ನು ಅಭಿನಂದಿಸುತ್ತೇನೆ. ನಿತ್ಯವೂ ದಿನಪತ್ರಿಕೆಗಳನ್ನು ಓದುವುದರಿಂದ ಜ್ಞಾನಭಂಡಾರ ಹೆಚ್ಚುತ್ತದೆ. ಪ್ರಚಲಿತ ವಿದ್ಯಮಾನ ತಿಳಿಯುತ್ತದೆ. ಜ್ಞಾನವೃದ್ಧಿಯಿಂದ ಆತ್ಮವಿಶ್ವಾಸವೂ ವೃದ್ಧಿಯಾಗುತ್ತದೆ’ ಎಂದರು.

ಅಭಿನಂದನಾರ್ಹ ಕಾರ್ಯ:

‘ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ಸಂಪನ್ಮೂಲವನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳೆರಡರಲ್ಲೂ ನೀಡುತ್ತಿರುವುದು ದಿನಪತ್ರಿಕೆಗಳ ಇತಿಹಾಸದಲ್ಲೇ‌ ಮೊದಲ ಪ್ರಯತ್ನವಾಗಿದೆ. ಇದು ಅಭಿನಂದನಾರ್ಹ’ ಎಂದು ಶ್ಲಾಘಿಸಿದರು.

ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆಯ ಪಿಯುಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಹಲವು ವಿಷಯಗಳ ಬಗ್ಗೆ ಬೆಳಕು ಚೆಲ್ಲಿದರು.

‘ಮಾಹಿತಿಯ ಭಂಡಾರವಿದೆ’

ಸಾನ್ನಿಧ್ಯ ವಹಿಸಿದ್ದ ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಮಾತನಾಡಿ, ‘ವಿದ್ಯಾರ್ಥಿಗಳಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಒಂದು ವರ್ಷದವರೆಗೆ ‘ಎಕ್ಸಾಂ ಮಾಸ್ಟರ್‌ಮೈಂಡ್‌’ ಇ–ಪತ್ರಿಕೆಯನ್ನು ‘ಪ್ರಜಾವಾಣಿ’ ಸಮೂಹ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಒದಗಿಸುತ್ತಿದೆ. ಪ್ರತಿಯೊಂದು ಮಾಹಿತಿಯನ್ನೂ ಒಳಗೊಂಡಿದೆ. ಎಲ್ಲ ವಿದ್ಯಮಾನಗಳ ಮಾಹಿತಿಯ ಭಂಡಾರವನ್ನೂ ಹೊಂದಿದೆ. ತಯಾರಿಗೆ ತರಗತಿಗಳೂ ಇರುತ್ತವೆ. ಕಲಿಕಾ ಸಾಮಗ್ರಿಯನ್ನು ಕನ್ನಡದಲ್ಲಿ ನೀಡುತ್ತಿರುವುದು ಅಭಿನಂದನಾರ್ಹ’ ಎಂದು ತಿಳಿಸಿದರು.

‘ಯುಪಿಎಸ್‌ಸಿ ಪರೀಕ್ಷೆಯಲ್ಲಿ ಬಿಹಾರದವರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುತ್ತಾರೆ.‌ ಏಕೆಂದರೆ, ಅವರು ಪ್ರೌಢಶಾಲಾ ಹಂತದಿಂದಲೆ ಸಿದ್ಧವಾಗುತ್ತಾರೆ. ಐಎಎಸ್ ಅಥವಾ ಐಪಿಎಸ್ ಅಧಿಕಾರಿ ಆಗಬೇಕು ಎನ್ನುವುದು ಅವರ ಗುರಿಯಾಗಿರುತ್ತದೆ. ಆ ರೀತಿಯ ಮನೋಭಾವ ನಮ್ಮಲ್ಲಿನ ವಿದ್ಯಾರ್ಥಿಗಳಲ್ಲೂ ಬರಬೇಕು. ಅವಕಾಶ ಬಳಸಿಕೊಳ್ಳಬೇಕು’ ಎಂದು ಆಶಿಸಿದರು.

‘ಉಪಯುಕ್ತ ಕೆಲಸವಿದು’

ಸಮಾಜಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಉಮಾ‌ ಸಾಲಿಗೌಡರ ಮಾತನಾಡಿ, ‘ನಾವೀಗ ಸ್ಪರ್ಧಾತ್ಮಕ ಜಗತ್ತಿನಲ್ಲಿದ್ದೇವೆ. ಹೀಗಾಗಿ ಸೂಕ್ತ ಮಾರ್ಗದರ್ಶನದ ಅಗತ್ಯವಿದೆ. ಈ ನಿಟ್ಟಿನಲ್ಲಿ ಸೂಕ್ತ ಸಂಪನ್ಮೂಲವನ್ನು ಡಿಜಿಟಲ್ ರೂಪದಲ್ಲಿ ಒದಗಿಸುವ ಮೂಲಕ ಬಹಳ ಉಪಯುಕ್ತವಾದ ಕೆಲಸವನ್ನು ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಮಾಡುತ್ತಿವೆ. ವಿದ್ಯಾರ್ಥಿಗಳು ಚಂದಾದಾರರಾದರೆ ಬಹಳ ಅನುಕೂಲವಿದೆ’ ಎಂದು ಸಲಹೆ ನೀಡಿದರು.

‘ಸರ್ಕಾರಿ ಸೇವೆ ಬೇಕು ಎಂದಾದರೆ ಪರೀಕ್ಷೆ ಎದುರಿಸಬೇಕಾಗುತ್ತದೆ. ಇದಕ್ಕೆ ತಕ್ಕಂತೆ ತಯಾರಿ ಮಾಡಿಕೊಂಡರೆ ಯಶಸ್ಸು ಸಾಧಿಸಬಹುದು. ನಮ್ಮ ಕಾಲದಲ್ಲಿ ಇಷ್ಟು ಅವಕಾಶಗಳು ಇರಲಿಲ್ಲ. ಎಲ್ಲರಿಗೂ ಕೋಚಿಂಗ್‌ಗೆ ಹೋಗಲು ಸಾಧ್ಯವಾಗುವುದಿಲ್ಲ. ಅಂಥವರಿಗೆ ಅನುಕೂಲ ಕಲ್ಪಿಸುವ ಪ್ರಯತ್ನ ಪತ್ರಿಕೆಯದಾಗಿದೆ. ವಿದ್ಯಾರ್ಥಿ ಸ್ನೇಹಿ ಕಾರ್ಯಕ್ರಮ ಇದಾಗಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.

‘ಎಕ್ಸಾಂ ಮಾಸ್ಟರ್‌ಮೈಂಡ್‌’ನಿಂದ ವಿದ್ಯಾರ್ಥಿಗಳಿಗೆ ಖಂಡಿತವಾಗಿಯೂ ಅಡಿಪಾಯ ಸಿಗುತ್ತದೆ. ಯುಪಿಎಸ್‌ಸಿ ಹಾಗೂ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಸಂದರ್ಶನ ಮುಖ್ಯ ಹಂತವಾಗಿರುತ್ತದೆ. ಸಂದರ್ಶನದಲ್ಲಿ ವ್ಯಕ್ತಿತ್ವವನ್ನೂ ಗಮನಿಸುತ್ತಾರೆ. ಆದ್ದರಿಂದ ವ್ಯಕ್ತಿತ್ವ ವಿಕಸನದ ಬಗ್ಗೆಯೂ ಈ ಇ–ಪೇಪರ್‌ನಲ್ಲಿ ತಿಳಿಸಲಾಗುತ್ತಿದೆ’ ಎಂದರು.

ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕೆ.ಬಿ. ಹಿರೇಮಠ ಹಾಗೂ ಉಪನ್ಯಾಸಕರು ಪಾಲ್ಗೊಂಡಿದ್ದರು.

ಕಾಳಜಿ ವಹಿಸಿ

ಮೊಬೈಲ್‌ನಿಂದ ಪ್ರಯೋಜನದೊಂದಿಗೆ ಅನಾನುಕೂಲವೂ ಇದೆ. ಹೀಗಾಗಿ, ಬಳಕೆ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಅಗತ್ಯ ಮಾಹಿತಿಗಳನ್ನು ಮಾತ್ರವೇ ಅದರಿಂದ ಪಡೆದುಕೊಳ್ಳಬೇಕು.

–ಉಮಾ ಸಾಲಿಗೌಡರ, ಜಂಟಿ ನಿರ್ದೇಶಕಿ, ಸಮಾಜ ಕಲ್ಯಾಣ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.